ಬೀದರ: ಸಹಕಾರ ಸಂಘಗಳಲ್ಲಿನ 1 ಲಕ್ಷ ರೂ. ಸಾಲ ಮನ್ನಾ ಯೋಜನೆಯಲ್ಲಿ ಬಾಕಿ ಇರುವ ರೈತರ ಅರ್ಹತೆ ಗುರುತಿಸುವುದಕ್ಕೆ ಸಂಬಂಧಿಸಿದಂತೆ ರೈತರ ಖಾತೆ ಪರಿಶೀಲನಾ ಕಾರ್ಯ ಜಿಲ್ಲಾದ್ಯಂತ ಸಮರೋಪಾದಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಡಿಸಿ ರಾಮಚಂದ್ರನ್ ಆರ್. ತಿಳಿಸಿದರು.
ನಗರದ ಡಿಸಿ ಕಚೇರಿಯಲ್ಲಿ ಸಹಾಯಕ ಆಯುಕ್ತರು ಹಾಗೂ ಎಲ್ಲ ತಹಶೀಲ್ದಾರರ ಜತೆ ವಿಡಿಯೋ ಸಂವಾದ ನಡೆಸಿ ಮಾತನಾಡಿ, ಸಹಕಾರ ಸಂಘಗಳಲ್ಲಿನ ಸಾಲ ಮನ್ನಾ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಈಗಾಗಲೇ ಜಿಲ್ಲಾ, ತಾಲೂಕು ಮಟ್ಟದ ಸಮಿತಿ ರಚಿಸಲಾಗಿದೆ. 2018ರ ಜು.5ರ ನಂತರ ಹೊಸದಾಗಿ ಪಡಿತರ ಚೀಟಿ ಪಡೆದು ಅದರಲ್ಲಿ ಒಬ್ಬನೇ ಸದಸ್ಯನಿದ್ದಲ್ಲಿ ಅಂತಹ ರೈತರ ಅರ್ಹತೆ ತಾಲೂಕು ಮಟ್ಟದ ಸಮಿತಿಯಲ್ಲಿ ಪರಿಶೀಲಿಸಿ ನಂತರ ಅರ್ಹತೆ ಗುರುತಿಸಲು ತಿಳಿಸಲಾಗಿದೆ ಎಂದರು.
ಸಹಾಯಕ ಆಯುಕ್ತರು ಮತ್ತು ತಾಲೂಕು ಸಮಿತಿ ಅಧ್ಯಕ್ಷರಾದ ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಸುತ್ತೋಲೆಯಲ್ಲಿ ತಿಳಿಸಿದ ಮಾರ್ಗಸೂಚಿಯಂತೆ ಕ್ರಮ ವಹಿಸಬೇಕು. ಒಂದೇ ಕುಟುಂಬದಲ್ಲಿ ವಾಸವಿರುವ ರೈತರು ಬೇರೆ ಬೇರೆ ಪಡಿತರ ಚೀಟಿ ಹೊಂದಿದ್ದಲ್ಲಿ ಇದನ್ನು ಪರಿಶೀಲಿಸಿ, ಮೊದಲು ಗಡುವು ಬರುವ ಸಾಲಗಳಿಗೆ 1 ಲಕ್ಷ ರೂ. ಮಿತಿಗಳಿಗೆ ಒಳಪಟ್ಟು ಖಾತೆ ಪರಿಗಣಿಸಲು ಹಾಗೂ ಉಳಿದ ಖಾತೆಗಳನ್ನು ಸಮಿತಿ ತಿರಸ್ಕರಿಸಲು ಸೂಚನೆ ನೀಡಲಾಗಿದ್ದು, ತಾಲೂಕು ಸಮಿತಿಯು ಕಾಲಮಿತಿ ಒಳಗೆ ಪೂರ್ಣಗೊಳಿಸಲು ಒತ್ತು ಕೊಡಬೇಕು ಎಂದರು.
ಒಬ್ಬನೇ ವ್ಯಕ್ತಿ ಎರಡು ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದಲ್ಲಿ ಮೊದಲು ಗಡುವು ಬರುವ ಸಹಕಾರ ಸಂಘ ಬ್ಯಾಂಕ್‌ಗಳಲ್ಲಿ ಸಾಲ ಮನ್ನಾ ಅರ್ಹ ಮೊತ್ತವನ್ನಾಗಿ ಪರಿಗಣಿಸುವುದು. ಒಂದೇ ಸಂಘದಲ್ಲಿ ಎರಡು ಖಾತೆ ಹೊಂದಿದ್ದರೆ ಸಹಕಾರ ಸಂಘ ಅಥವಾ ಬ್ಯಾಂಕಿನ ಶಾಖೆ ರಿಜೆಕ್ಟ್ ಮಾಡಿರುವ ಕಾಲಂ 52 ಖಾತೆ ಪರಿಗಣಿಸದೇ ಇಲಾಖಾ ಧಿಕಾರಿಗಳಿಂದ ಅಂತಿಮವಾಗಿ ದೃಢೀಕೃತವಾಗಿರುವ ಒಂದು ಖಾತೆ ಪರಿಗಣಿಸುವುದು ಎನ್ನುವ ನಿರ್ದೇಶನ ಪಾಲನೆಯಾಗುವಂತೆ ನೋಡಕೊಳ್ಳಬೇಕು. ತಾಲೂಕು ಸಮಿತಿ ಬಾಕಿ ಇರುವ ಪರಿಶೀಲನಾ ದಾಖಲೆ ಅಪ್‌ಲೋಡ್ ಮಾಡಲು ತಕ್ಷಣ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಈ ವೇಳೆ ಅಪರ ಡಿಸಿ ರುದ್ರೇಶ ಗಾಳಿ, ಸಹಾಯಕ ಆಯುಕ್ತೆ ಗರೀಮಾ ಪನ್ವಾರ, ತಹಶೀಲ್ದಾರ್ ಗಂಗಾದೇವಿ, ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಇದ್ದರು.