Advertisement

1.17 ಲಕ್ಷ ರೈತರಿಗೆ ಸಾಲ ಮನ್ನಾ ಲಾಭ

04:04 PM Oct 04, 2020 | Suhan S |

ಬೀದರ: ರಾಜ್ಯದ ಸಣ್ಣ ಮತ್ತು ಮಧ್ಯಮ ರೈತರ ಅನುಕೂಲಕ್ಕಾಗಿ ಸರ್ಕಾರ 2 ವರ್ಷಗಳ ಹಿಂದೆಯೇ ಸಹಕಾರಿ ಸಂಘಗಳ ಮೂಲಕ ಒಂದು ಲಕ್ಷ ರೂ.ವರೆಗಿನ ಬೆಳೆ ಸಾಲ ಮನ್ನಾ ಯೋಜನೆ ಜಾರಿಗೆ ತಂದಿದ್ದು, ಬೀದರ ಜಿಲ್ಲೆಯಲ್ಲಿ 1.17 ಲಕ್ಷ ರೈತರು ಇದರ ಲಾಭ ಪಡೆದುಕೊಂಡಿದ್ದಾರೆ ಎಂದು ಡಿಸಿಸಿ ಬ್ಯಾಂಕ್‌ ಸಿಇಒ ಮಹಾಜನ ಮಲ್ಲಿಕಾರ್ಜುನ ಹೇಳಿದರು.

Advertisement

ನಗರದ ಸಹಾರ್ದ ಸಂಸ್ಥೆಯಲ್ಲಿ ಬ್ಯಾಂಕ್‌ ಅಧಿಕಾರಿಗಳಿಗೆ ಆಯೋಜಿಸಿದ್ದ ರೈತರ ಸಾಲ ಯೋಜನೆಗಳ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಎರಡಕ್ಕಿಂತ ಹೆಚ್ಚಿನ ಸಾಲಗಳಿಗೆ ಒಂದೇ ಆಧಾರ್‌ ಕಾರ್ಡ ಜೋಡಣೆ, ಪಡಿತರ ಕಾರ್ಡ್‌ ಹೊಂದಿಲ್ಲದಿರುವುದು, ಒಂದೇ ಸದಸ್ಯತ್ವ ಹೊಂದಿ ಹಲವು ಸಾಲಗಳಿಗೆ ಮನ್ನಾ ಅರ್ಜಿ ಸಲ್ಲಿಸಿರುವುದು ಹೀಗೆ ಹಲವು ಕಾರಣಗಳಿಂದ ಜಿಲ್ಲೆಯ 8,671 ಜನ ರೈತರು ಸಾಲ ಮನ್ನಾ ಯೋಜನೆಯಿಂದ ಹೊರಗುಳಿದಿದ್ದಾರೆ. ಬ್ಯಾಂಕಿನ ಅಧಿಕಾರಿಗಳು ಇಂತಹ ರೈತ ಕುಟುಂಬಗಳನ್ನು ಭೇಟಿ ಮಾಡಿ ಅರ್ಹ ಫಲಾನುಭವಿಗಳ ಈ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.

ಬ್ಯಾಂಕ್‌ನ ಜಿಎಂ ವಿಠಲರೆಡ್ಡಿ ಯಡಮಲ್ಲೆ ಮಾತನಾಡಿ, ಜಿಲ್ಲೆಯ ಎಲ್ಲ 280 ಸಹಕಾರ ಸಂಘಗಳು ರೈತರಿಗೆ ಬೆಳೆಸಾಲ ಮಧ್ಯಮಾವಧಿ  ಸಾಲ ಮತ್ತು ಪಿಎಂಜಿಎಸ್‌ವೈ, ಆರೋಗ್ಯ ಮತ್ತು ಅಪಘಾತ ವಿಮಾ ಸೌಲಭ್ಯಗಳನ್ನು ಒದಗಿಸುತ್ತಿವೆ. ಇನ್ನೂ ಸಂಘದ ಸದಸ್ಯರಾಗಿಲ್ಲದಿರುವ ರೈತರನ್ನು ಹುಡುಕಿ ಅವರಿಗೂ ಸಾಲ ಸೌಲಭ್ಯಗಳನ್ನು ನೀಡಲು ಉದ್ದೇಶಿಸಲಾಗಿದೆ. ಹೆಚ್ಚುವರಿ ಕೃಷಿ ಸಾಲ ನೀಡಲು ನಬಾರ್ಡ್‌ ನೆರವಾಗುತ್ತಿದ್ದು ರೈತರನ್ನು ಸ್ವಾವಲಂಬಿಗಳಾಗಿಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.

ಜಿ.ಎಂ. ಚನಬಸಯ್ನಾ ಸ್ವಾಮಿ ಮಾತನಾಡಿ, ಬ್ಯಾಂಕಿಂಗ್‌ ಎಂಬುದು ದಿನದಿಂದ ದಿನಕ್ಕೆ ಆಧುನಿಕವಾಗುತ್ತಿದ್ದು ತಂತ್ರಜ್ಞಾನಾಧಾರಿತವಾಗುತ್ತಿದೆ. ಸಿಬ್ಬಂದಿಗಳು ನೂತನ ತಂತ್ರಜ್ಞಾನ ತಿಳಿದುಕೊಂಡು ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲು ಕಟಿಬದ್ದರಾಗಬೇಕು. ಸಮಯದಲ್ಲಿ ಸಾಲ ನೀಡಿ ವಸೂಲಾತಿ ಮಾಡಬೇಕು ಎಂದು ಹೇಳಿದರು. ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಉಪನ್ಯಾಸಕ ಎಸ್‌.ಜಿ. ಪಾಟೀಲ ನಿರೂಪಿಸಿದರು. ಅನೀಲ ಪಿ. ವಂದಿಸಿದರು. ಅಧಿಕಾರಿಗಳಾದ ಕರಿಬಸಯ್ಯ ಸ್ವಾಮಿ, ಶಾಂತಕುಮಾರ, ಮಲ್ಲಕಾರ್ಜುನ ಖಾಜಿ, ಶರಣಬಸಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next