ಮಾಲೂರು: ತಾಲೂಕಿನ ಟೇಕಲ್ ಹೋಬಳಿಯ ಮಹಿಳೆಯರು, ರೈತರ ಅನುಕೂಲಕ್ಕಾಗಿ ಡಿಸಿಸಿ ಬ್ಯಾಂಕ್‌ನಿಂದ ಈಗಾಗಲೇ 14 ಕೋಟಿ ರೂ. ಸಾಲ ನೀಡಲಾಗಿದೆ. ಪ್ರಸ್ತುತ 2.42 ಕೋಟಿ ರೂ. ವಿತರಿಸಲಾಗುತ್ತಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಪಟ್ಟಣದ ಡಿಸಿಸಿ ಬ್ಯಾಂಕ್ ಕಚೇರಿ ಆವರಣದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಟೇಕಲ್ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಿಂದ 50 ಮಹಿಳಾ ಸ್ವಸಹಾಯ ಸಂಘಗಳಿಗೆ 2.42 ಕೋಟಿ ರೂ. ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಣೆ ಮಾಡಿ ಮಾತನಾಡಿದರು. ತಾಲೂಕಿನ ಟೇಕಲ್ ಹೋಬಳಿಯ ಸ್ತ್ರೀ ಶಕ್ತಿ ಸಂಘಗಳು, ರೈತರು ಸೇರಿ ಹಲವು ಮಂದಿಗೆ ಡಿಸಿಸಿ ಬ್ಯಾಂಕ್ 14 ಕೋಟಿ ರೂ. ಸಾಲ ನೀಡಿದೆ. ಪಡೆದಂತಹ ಕೆಲವರು ಸಕಾಲಕ್ಕೆ ಪಾವತಿ ಮಾಡದ ಕಾರಣ ವರ್ಷದಿಂದ ನೂತನ ಸಾಲ ವಿತರಣೆ ಮಾಡಲು ತೊಡಕಾಗಿದೆ. ಈ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡಗೆ ಮನವಿ ಸಲ್ಲಿಸಿದ್ದರಿಂದ ಪ್ರಸ್ತುತ 2.42 ಕೋಟಿ ರೂ. ಅನ್ನು 50 ಸ್ವಸಹಾಯ ಸಂಘಗಳಿಗೆ ವಿತರಣೆ ಮಾಡುತ್ತಿದ್ದಾರೆ ಎಂದರು.
ಪ್ರತಿ ಸಂಘಕ್ಕೂ 5 ಲಕ್ಷ ರೂ. ನೀಡುತ್ತಿದ್ದು, ಸಾಲ ಪಾವತಿ ಮಾಡಿದ್ದಲ್ಲಿ ಮುಂದಿನ ವರ್ಷ ಟೇಕಲ್ ಗ್ರಾಮದಲ್ಲಿ 10 ಕೋಟಿ ರೂ. ನೀಡಿ ದೊಡ್ಡಮಟ್ಟದ ಕಾರ್ಯಕ್ರಮ ಆಯೋಜಿಸಿ ವಿತರಿಸಲಾಗುವುದು. ಇಂತಹ ಅವಕಾಶ ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ ಮಾತನಾಡಿ, ತಾಲೂಕಿನ 3 ಹೋಬಳಿಗಳಲ್ಲಿ ಸಂಘಗಳು ಪಡೆದ ಸಾಲವನ್ನು ಸಮರ್ಪಕವಾಗಿ ಪಾವತಿ ಮಾಡುತ್ತಿವೆ. ಆದರೆ, ಟೇಕಲ್ ಹೋಬಳಿಯಲ್ಲಿ ಪಡೆದ ಸಾಲವನ್ನು ಪಾವತಿ ಮಾಡದ ಕಾರಣ ಸಾಲ ವಿತರಣೆ ವಿಳಂಬವಾಗಿತ್ತು. ಶಾಸಕ ನಂಜೇಗೌಡ ಕೋರಿಕೆ ಮೇರೆಗೆ ಪ್ರಸ್ತುತ ಸಾಲ ನೀಡಲಾಗುತ್ತಿದೆ ಎಂದು ಹೇಳಿದರು.
ಪ್ರತಿಯೊಬ್ಬರಿಗೂ 50 ಸಾವಿರ ರೂ. ಸಾಲ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 1 ಲಕ್ಷ ರೂ. ವಿತರಿಸಿ ಮಹಿಳೆಯರಿಗೆ ಅನುಕೂಲ ಕಲ್ಪಿಸಲಾಗುವುದು. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ 4 ಲಕ್ಷಕ್ಕೂ ಹೆಚ್ಚಿನ ಮಹಿಳೆಯರಿಗೆ ಸಾಲ ನೀಡಲಾಗಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಚ್.ಚನ್ನ ರಾಯಪ್ಪ, ಜಿಪಂ ಮಾಜಿ ಸದಸ್ಯರಾದ ಆನೇ ಪುರ ಹನುಮಂತಪ್ಪ, ಬಾಳಿಗಾನ ಹಳ್ಳಿ ರವಿ ಶಂಕರ್, ಸಹಕಾರ ಸಂಘದ ಅಧ್ಯಕ್ಷ ರವೀಂದ್ರ, ಮಾಜಿ ಅಧ್ಯಕ್ಷ ರಾಮಕೃಷ್ಣಪ್ಪ, ಮುಖಂಡರಾದ ಬೈಯಣ್ಣ, ನಾರಾಯಣ ಗೌಡ, ರಮೇಶ್, ಶ್ರೀನಿವಾಸ್, ಪ್ರಶಾಂತ್, ಮುರಳಿ, ಬ್ಯಾಂಕಿನ ಕಾರ್ಯ ನಿರ್ವಹಣಾಧಿಕಾರಿ ಯಲ್ಲಪ್ಪರೆಡ್ಡಿ, ಮೇಲ್ವಿಚಾರಕ ಕೃಷ್ಣಪ್ಪ, ದ್ಯಾಪಸಂದ್ರ ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಉಪಸ್ಥಿತರಿದ್ದರು.