ಬೆಂಗಳೂರು: “ಸಾಲು ಮರದ ತಿಮ್ಮಕ್ಕ ಇನ್ನಿಲ್ಲ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುತ್ತಿರುವ ಕಿಡಿಗೇಡಿಗಳ ವಿರುದ್ಧ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಂಬಧ ಖುದ್ದು ಸಾಲುಮರದ ತಿಮ್ಮಕ್ಕ ಹಾಗೂ ದತ್ತು ಪುತ್ರ ಉಮೇಶ್ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್‌ನ್ನು ಭೇಟಿಯಾಗಿ ಪ್ರಕರಣ ದಾಖಲಿಸಿದ್ದಾರೆ. ಈ ಹಿಂದೆಯೂ ಇದೇ ರೀತಿಯ ಸಾಲುಮರದ ತಿಮ್ಮಕ್ಕ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿ ಹರಿಬಿಟ್ಟಿದ್ದರು.
ಇದೀಗ ಮತ್ತೆ ಅದೇ ರೀತಿ ಕೃತ್ಯವೆಸಗಿ ವಿಕೃತ ಮೆರೆದಿದ್ದಾರೆ. ಅಲ್ಲದೇ ಅಪರಿಚಿತ ವೃದ್ಧೆಯ ಅಂತಿಮ ಯಾತ್ರೆಯ ಫೋಟೋಗಳಿಗೆ ತಿಮ್ಮಕ್ಕರ ಛಾಯಾಚಿತ್ರಗಳನ್ನು ಹಾಕಿ ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣ ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಆ್ಯಪ್‌ಗ್ಳ ಮೂಲಕ ಹರಿಬಿಡುತ್ತಿದ್ದಾರೆ.
ಈ ಮೂಲಕ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಇಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ತಿಮ್ಮಕ್ಕ ದೂರು ನೀಡಿದ್ದಾರೆ. ಯಾವುದೇ ಆಧಾರಗಳಿಲ್ಲದೆ ಸಾಲುಮರದ ತಿಮ್ಮಕ್ಕರಂತಹ ಸಾಧಕರ ಕುರಿತು ಈ ರೀತಿ ಸುಳ್ಳು ವದಂತಿಗಳನ್ನು ಹಬ್ಬಿಸುವವರನ್ನು, ಅಂತಹ ಸುದ್ದಿಗಳನ್ನು ಶೇರ್ ಮಾಡುವ ಹಾಗೂ ಲೈಕ್ ಮಾಡುವವರನ್ನು ಸಹ ವಿಚಾರಣೆಗೆ ಒಳಪಡಿಸಲಾಗುವುದು. ಈ ಸಂಬಂಧ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಸೈಬರ್ ಕ್ರೈಂ ಪೊಲೀಸರು ತಿಳಿಸಿದ್ದಾರೆ.
ನಾನು ಆರೋಗ್ಯವಾಗಿದ್ದೇನೆ. ನನಗೆ ಈಗ ಯಾವುದೇ ಸಮಸ್ಯೆ ಇಲ್ಲ. ಆದರೆ ಯಾರೋ ನಾನು ಸತ್ತಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದರಿಂದ ಅಭಿಮಾನಿಗಳು ಮನೆ ಬಳಿ, ದೂರವಾಣಿ ಕರೆ ಮಾಡುತ್ತಿದ್ದಾರೆ. ಈ ವಿಚಾರದಿಂದ ನನಗೆ ತುಂಬಾ ಬೇಸರವಾಗಿದೆ.
ಇಂತಹ ಕೆಲಸ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದೇನೆ ಎಂದು ಸಾಲು ಮರದ ತಿಮ್ಮಕ್ಕ ತಿಳಿಸಿದ್ದಾರೆ. ತಿಮ್ಮಕ್ಕ ಆರೋಗ್ಯವಾಗಿದ್ದಾರೆ. ಈಗ ಅವರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇಲ್ಲ. ಹೀಗಾಗಿ ಸುಳ್ಳು ವಂದತಿಗೆ ಯಾರೂ ಕಿವಿಗೊಡಬೇಡಿ ಎಂದು ದತ್ತು ಪುತ್ರ ಉಮೇಶ್ ವನಸಿರಿ ಮನವಿ ಮಾಡಿದ್ದಾರೆ.