ಸುರಪುರ: ಬ್ಯಾಂಕ್ ಆರ್ಥಿಕ ವಹಿವಾಟು ಮತ್ತು ಅಭಿವೃದ್ಧಿಯಲ್ಲಿ ಸಾಲ ಮರು ಪಾವತಿ ಮುಖ್ಯವಾಗಿದೆ. ಮರು ಪಾವತಿ ಮಾಡುವ ಸಾಲಗಾರರಿಗೆ ತಕ್ಷಣವೇ ಮರು ಸಾಲ ನೀಡಲಾಗುವುದು ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌ನ ಡೆಪ್ಯೂಟಿ ಮ್ಯಾನೇಜರ್ ಡಿ.ಬಿ. ಜೋಬಿ ಜೋಸ್ ಹೇಳಿದರು.
ರಂಗಂಪೇಟೆಯ ಭಾರತೀಯ ಸ್ಟೇಟ್ ಬ್ಯಾಂಕ್ (ಎಡಿಬಿ) ರಾಹುತರಾಯ ಕಾಂಪ್ಲೆಕ್ಸ್‌ನಲ್ಲಿ ಹಮ್ಮಿಕೊಂಡಿದ್ದ ಕೃಷಿ ಸಾಲ ನವೀಕರಣ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹೊಸ ಹೋಜನೆ ಜಾರಿಗೆ ತರಲಾಗಿದೆ. 1 ಲಕ್ಷದವರೆಗೆ ಕೃಷಿ ಸಾಲ ಪಡೆದಿರುವ ರೈತರು ನಿಗದಿತ ಅವಧಿಯೊಳಗೆ ಮರು ಪಾವತಿ ಮಾಡಿದರೆ ಶೇ. 3ರಷ್ಟು ಬಡ್ಡಿಯಲ್ಲಿ ಸಬ್ಸಿಡಿ ದೊರೆಯತ್ತದೆ. 1 ಲಕ್ಷದವರೆಗಿನ ಸಾಲಕ್ಕೆ ವರ್ಷಕ್ಕೆ ಕೇವಲ 4 ಸಾವಿರ ರೂ. ಮಾತ್ರ ಬಡ್ಡಿ ಬೀಳುತ್ತದೆ. ಸಾಲ ಪಡೆಯುವ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ರಿಜಿನಲ್ ಮ್ಯಾನೇಜರ್ ಸುನಿಲ್ ಶೆಟ್ಟಿ ಮಾತನಾಡಿ, ಆರ್‌ಬಿಐ ಮತ್ತು ಲೀಡ್ ಬ್ಯಾಂಕ್ ನಿರ್ದೇಶನದಂತೆ ಬೆಳೆ ಸಾಲ ಪಡೆದು ಮರು ಪಾವತಿ ಮಾಡದಿರುವ ಕಟಬಾಕಿದಾರರು ಒಂದೇ ಬಾರಿಗೆ ಹಣ ಕಟ್ಟಿದರೆ ಅವರಿಗೆ ತಕ್ಷಣವೇ ಮರು ಸಾಲ ವಿತರಣೆ ಮಾಡಲಾಗುವುದು. ಕಟಬಾಕಿದಾರ ರೈತರು ಇದರ ಲಾಭ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕೃಷಿ ಸಾಲ ನವೀಕರಣ ಮೇಳದಲ್ಲಿ ಸುರಪುರ-ರಂಗಂಪೇಟೆ (ಎಡಿಬಿ) ಶಾಖೆಯ 105 ಜನ ರೈತರಿಗೆ ಸಾಲ ನವೀಕರಣ ಗೊಳಿಸಲಾಯಿತು. ಹುಣಸಗಿ, ಕೆಂಭಾವಿ, ಕಕ್ಕೇರಾ ಮತ್ತು ಸಗರ ಶಾಖೆಗಳ ತಲಾ 10 ಜನ ರೈತರಿಗೆ ಸಾಲ ನವೀಕರಣಗೊಳಿಸಲಾಗಿದೆ ಎಂದು ಶಾಖಾ ವ್ಯವಸ್ಥಾಪಕ ಭೀಮರಾವ್ ಪಂಚಾಳ ತಿಳಿಸಿದರು. ಇದೇ ವೇಳೆ ಪ್ರತಿ ವರ್ಷ ಕೃಷಿ ಸಾಲ ಪಡೆದು ನಿಗದಿತ ಅವಧಿಯಲ್ಲಿ ಮರು ಪಾವತಿ ಮಾಡಿದವರನ್ನು ಸನ್ಮಾನಿಸಲಾಯಿತು. ಮುಖ್ಯ ವ್ಯವಸ್ಥಾಪಕ ವಿಜಯ ಗಿರಿನಿ, ಶಿವರಾಜ ಪಾಟೀಲ, ರಾಮಸ್ವಾಮಿ ಇದ್ದರು.