ದೇವನಹಳ್ಳಿ: ಗ್ರಾಮೀಣ ಭಾಗದ ರೈತರಿಗೆ ಪಿಕಾರ್ಡ್ ಬ್ಯಾಂಕ್ ಸಾಲಸೌಲಭ್ಯವನ್ನು ನೀಡುವುದರ ಮೂಲಕ ನೆರವಾಗಿದ್ದು, ಅದರ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ ಎಂದು ಶಾಸಕ ಎಲ್. ಎನ್.ನಾರಾಯಣಸ್ವಾಮಿ ತಿಳಿಸಿದರು.
ನಗರದಪಿಕಾರ್ಡ್‌ಬ್ಯಾಂಕ್ ಆವರಣದ ವಾಣಿಜ್ಯ ಸಂಕೀರ್ಣದಲ್ಲಿ ಪಿಕಾರ್ಡ್ ಬ್ಯಾಂಕ್ ಹಮ್ಮಿಕೊಂಡಿದ್ದ ನೂತನ ವಾಣಿಜ್ಯ ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಘವು ರಾಜ್ಯದಲ್ಲಿಯೇ ಸುಸಜ್ಜಿತ ಕಟ್ಟಡ ಹೊಂದಿದೆ. ರಾಜ್ಯಕ್ಕೆ ದೇವನಹಳ್ಳಿ ಪಿಕಾರ್ಡ್ ಬ್ಯಾಂಕ್ ಮಾದರಿಯಾಗಿದೆ. ಹಲವಾರುಹಿರಿಯರು ಇದಕ್ಕೆ ತಳಪಾಯ ಹಾಕಿದ್ದಾರೆ. ಸಂಘವು ಮತ್ತಷ್ಟು ಸರ್ವತೋಮುಖ ಅಭಿವೃದ್ಧಿಗೆ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತಷ್ಟು ಶ್ರಮವಹಿಸಬೇಕು ಎಂದು ಹೇಳಿದರು.
ಅತಿ ಹೆಚ್ಚಿನ ಸಾಲ ಸೌಲಭ್ಯವನ್ನು ರೈತರಿಗೆ ನೀಡಿ, ಅನುಕೂಲ ಮಾಡುವಂತೆ ಆಗಬೇಕು. ಕಟ್ಟಡ ನಿರ್ಮಾಣಕ್ಕೆ ಶಾಸಕರ ಅನುದಾನದಿಂದೇನಾದರೂ ಕೊಡಬಹುದೆಂಬುವುದರ ಬಗ್ಗೆ ಪರಿಶೀಲಿಸುತ್ತೇನೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಮುಂದು ವರಿಸಿಕೊಂಡು ಹೋಗಬೇಕು. ಅತಿ ಹೆಚ್ಚಿನ ರೈತರಿಗೆಸಾಲ ಸೌಲಭ್ಯ ನೀಡಿ, ಬ್ಯಾಂಕಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತಾಗಬೇಕು ಎಂದು ವಿವರಿಸಿದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಜೊನ್ನಹಳ್ಳಿ ಮುನಿ ರಾಜ್ ಮಾತನಾಡಿ, ಈಗಾಗಲೇ ಸಾಕಷ್ಟು ಸಾಲ ಸೌಲಭ್ಯ ಒದಗಿಸಿಕೊಡಲಾಗಿದೆ. 60 ಲಕ್ಷ ರೂ. ವೆಚ್ಚದಲ್ಲಿ ನೂತನ ವಾಣಿಜ್ಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಟ್ಟ ಕಡೆಯ ರೈತರಿಗೂ ಬ್ಯಾಂಕಿನ ಸಾಲ ಸೌಲಭ್ಯಗಳು ದೊರೆಯುವಂತೆ ಆಗಬೇಕು. ನಬಾರ್ಡ್‌ನಿಂದ 17 ಕೋಟಿ ರೂ. ಸಾಲ ನೀಡಲಾಗಿದೆ. ಈ ವರ್ಷದಲ್ಲಿ 3.5 ಕೋಟಿ ರೂ. ಸಾಲ ವಸೂಲಾತಿಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಲ ಸೌಲಭ್ಯ ರೈತರಿಗೆ ಒದಗಿಸಿಕೊಡಲಾಗುತ್ತದೆ. ರಾಜ್ಯದಲ್ಲಿಯೇ ಮಾದರಿ ಸಂಘವಾಗಿದೆ ಎಂದು ಹೇಳಿದರು.
ಮಾಜಿಸಂಸದಸಿ.ನಾರಾಯಣಸ್ವಾಮಿ,ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಶ್ರೀನಿವಾಸ್, ಕಾರ್ಯಾಧ್ಯಕ್ಷ ಆರ್.ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಟಿಎಪಿಸಿಎಂಎಸ್ ಅಧ್ಯಕ್ಷ ಮಂಡಿಬೆಲೆ ರಾಜಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ವಿ.ಮಂಜುನಾಥ್, ಟೌನ್ ಜೆಡಿಎಸ್ ಅಧ್ಯಕ್ಷ ಮುನಿನಂಜಪ್ಪ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಆರ್.ಭರತ್, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ನಾಗೇಶ್, ಎಂಪಿಸಿಎಸ್ ಅಧ್ಯಕ್ಷಭೈರೇಗೌಡ, ಪಿಕಾರ್ಡ್‌ಬ್ಯಾಂಕ್‌ಉಪಾಧ್ಯಕ್ಷೆ ಆಶಾರಾಣಿ ರವೀಂದ್ರ, ನಿರ್ದೇಶಕರಾದ ಆರ್.ಕೆ.ನಂಜೇಗೌಡ(ಆರ್‌ಎನ್‌ಕೆ), ಪಟಾಲಪ್ಪ, ಬಸವರಾಜು, ಸಂಪಂಗಪ್ಪ, ಹನುಮಪ್ಪ, ಮುನಿನಾರಾಯಣಪ್ಪ,ಅನ್ನಪೂರ್ಣಮ್ಮ,ಮತ್ತಿತರರು ಇದ್ದರು.