Advertisement

ಲೋಡ್‌ ಶೆಡ್ಡಿಂಗ್‌ ಇಲ್ಲ ; ವಿದ್ಯುತ್‌ ವ್ಯತ್ಯಯದ ಕಿರಿಕಿರಿ ತಪ್ಪಿಲ್ಲ

11:48 PM Apr 10, 2023 | Team Udayavani |

ಉಡುಪಿ: ಕರಾವಳಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಿತ್ಯವೂ ಒಂದೆರೆಡು ಗಂಟೆ ವಿದ್ಯುತ್‌ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಕೆಲವು ದಿನ ಬೆಳಗ್ಗೆ ವಿದ್ಯುತ್‌ ವ್ಯತ್ಯಯವಾದರೆ, ಇನ್ನು ಕೆಲವು ದಿನ ಮಧ್ಯಾಹ್ನ, ರಾತ್ರಿ ವೇಳೆಯಲ್ಲಿ ನಾಪತ್ತೆಯಾಗುವುದು ಸಾಮಾನ್ಯವಾಗಿ ಬಿಟ್ಟಿದೆ.

Advertisement

ಬೇಸಗೆ ಆರಂಭಕ್ಕೂ ಮೊದಲೇ ವಿದ್ಯುತ್‌ ವ್ಯತ್ಯಯ ಆರಂಭವಾಗಿತ್ತು. ಅದರ ಜತೆಗೆ ಸಂಪ್ರದಾಯದಂತೆ ಪ್ರತೀ ಮಂಗಳವಾರ ಬೆಳಗ್ಗಿನಿಂದ ಸಂಜೆಯವರೆಗೂ ವಿದ್ಯುತ್‌ ಇರುವುದಿಲ್ಲ. ಯಾವುದೇ ಒಂದು ಲೈನ್‌ನಲ್ಲಿ ತಾಂತ್ರಿಕ ಕಾರ್ಯ ಅಥವಾ ನಿರ್ವಹಣೆ ಕೆಲಸಗಳಿದ್ದರೂ ಇಡೀ ಎಲ್ಲ ಕಡೆಗಳಲ್ಲೂ ವಿದ್ಯುತ್‌ ವ್ಯತ್ಯಯ ಮಾಡಲಾಗುತ್ತಿದೆ.

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದೆ. ಬೇಸಗೆಯ ಬೇಗೆಯೂ ಹೆಚ್ಚಿರುವುದರಿಂದ ದಿನ ಪೂರ್ತಿ ವಿದ್ಯುತ್‌ನ ಅಗತ್ಯ ಹೆಚ್ಚಿದೆ. ಮನೆಯೊಳಗೆ ಫ್ಯಾನ್‌, ಎಸಿ, ಕೂಲರ್‌ಗಳನ್ನು ಆನ್‌ ಮಾಡಿಕೊಂಡೇ ಇರಬೇಕಾದ ಪರಿಸ್ಥಿತಿಯಿದೆ.

ಕೊರತೆ ಇಲ್ಲ
ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರತೀ ದಿನ 26 ಮಿಲಿಯ ಯುನಿಟ್‌ ವಿದ್ಯುತ್‌ ಅಗತ್ಯವಿದೆ. ಈ ಪೈಕಿ ಸುಮಾರು 4.50 ಮಿ. ಯುನಿಟ್‌ ಉಡುಪಿ ಜಿಲ್ಲೆಗೆ ಹಾಗೂ ಸುಮಾರು 7 ಮಿ. ಯುನಿಟ್‌ಗೂ ಅಧಿಕ ವಿದ್ಯುತ್‌ ದಕ್ಷಿಣ ಕನ್ನಡಕ್ಕೆ ಅಗತ್ಯವಿದೆ. ಬೇಡಿಕೆ ಹೆಚ್ಚಿದ್ದ ಸಂದರ್ಭದಲ್ಲಿ ಇದರಲ್ಲಿ ಸ್ವಲ್ಪ ವ್ಯತ್ಯಾಸವೂ ಆಗುವ ಸಾಧ್ಯತೆಯಿದೆ. ಬಳಕೆಯ ಆಧಾರದಲ್ಲಿ ನಿತ್ಯವೂ ಬೇಡಿಕೆ ಪ್ರಮಾಣ ಬದಲಾಗುತ್ತದೆ. ವಿದ್ಯುತ್‌ ಪೂರೈಕೆ ಕಡಿಮೆಯಾಗಿಲ್ಲ ಮತ್ತು ಲೋಡ್‌ಶೆಡ್ಡಿಂಗ್‌ ಕೂಡ ಇಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಲೋಡ್‌ ಶೆಡ್ಡಿಂಗ್‌ ಭೀತಿ
ಬೇಸಗೆ ಆರಂಭ ವಾಗಿರು ವುದರಿಂದ ಎಲ್ಲೆಡೆ ನೀರಿನ ಸಮಸ್ಯೆ ಹೆಚ್ಚಾಗಿದೆ. ಹಾಗೆಯೇ ವಿದ್ಯುತ್‌ ಪೂರೈಕೆ ಪ್ರಮಾಣವೂ ಸಹಜವಾಗಿ ಹೆಚ್ಚಾಗಿದೆ. ಅಧಿಕಾರಿಗಳು ಲೋಡ್‌ ಶೆಡ್ಡಿಂಗ್‌ ಇಲ್ಲ ಎನ್ನುತ್ತಿದ್ದಾರೆ. ಆದರೆ ಬೆಳಗ್ಗೆ, ಸಂಜೆ ವಿದ್ಯುತ್‌ ವ್ಯತ್ಯಯ ಆಗುತ್ತಿರುತ್ತದೆ. ಕೆಲವೊಂದು ಎರಡು ಮೂರು ಗಂಟೆಗಳು ವಿದ್ಯುತ್‌ ಇರುವುದಿಲ್ಲ. ಮೇ ಅಂತ್ಯದ ವರೆಗೂ ಇದೇ ಪರಿಸ್ಥಿತಿ ಇರುವುದರಿಂದ ಲೋಡ್‌ಶೆಡ್ಡಿಂಗ್‌ ಭೀತಿ ಮಾತ್ರ ಎಲ್ಲರಲ್ಲೂ ಇದೆ.

Advertisement

ಶಾಲಾ ಮಕ್ಕಳಿಗೆ ರಜೆ ಆರಂಭ ವಾಗಿದೆ. ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಗಿದಿದ್ದು ಕೆಲವರು ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಯಲ್ಲಿದಾರೆ. ಐಪಿಎಲ್‌ ಹಾಗೂ ಚುನಾವಣೆ ಹವಾ ಕೂಡ ಆರಂಭವಾಗಿ ರುವುದರಿಂದ ಮನೆಗಳಲ್ಲಿ ಟಿವಿ, ಫ್ಯಾನ್‌ ಸದಾ ಕಾಲ ಆನ್‌ ಇರುತ್ತದೆ. ಮಕ್ಕಳು ಮನೆಯಲ್ಲೇ ಇರುವುದರಿಂದ ಟಿವಿ ನೋಡುವುದು ಹೆಚ್ಚಿದೆ. ಅಲ್ಲದೆ ವಿವಿಧ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿವೆ. ಇದೆಲ್ಲವೂ ವಿದ್ಯುತ್‌ ಬೇಡಿಕೆ ಹೆಚ್ಚಲು ಕಾರಣ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next