ಚಿತ್ರರಂಗ ಯಾವತ್ತೂ ಚಿರ ಯವ್ವನಿಗರನ್ನೇ ಇಷ್ಟಪಡುತ್ತದೆ. ಇದೇ ಕಾರಣಕ್ಕೆ ಪ್ರತೀ 15 ವರ್ಷಕ್ಕೊಮ್ಮೆ ಹೀರೋಗಳು ಬದಲಾಗುತ್ತಾರೆ. ತ್ರಿಲೋಕ ಸುಂದರಿ ಅನ್ನಿಸಿಕೊಂಡವರು ಐದೇ ವರ್ಷಕ್ಕೆ ತೆರೆಮರೆಗೆ ಸರಿಯುತ್ತಾರೆ. ಈ ಕಾರಣದಿಂದಲೇ ಸಂಜೀವ್ ಕುಮಾರ್, ರಾಜೇಶ್ ಖನ್ನಾ, ಅಮಿತಾಭ್, ಧರ್ಮೇಂದ್ರ, ಸಲ್ಮಾನ್, ಆಮಿರ್, ಶಾರುಖ್, ಹೃತಿಕ್ ಎಂದು ಹೀರೋಗಳು, ಮಧುಬಾಲ, ನರ್ಗಿಸ್, ಹೇಮಾಮಾಲಿನಿ, ಶ್ರೀದೇವಿ, ಕಾಜೋಲ್, ಕರೀನಾ …ಎಂದೆಲ್ಲ ಹೀರೋಯಿನ್‌ಗಳೂ ಬದಲಾದರು.
Advertisement
ಆದರೆ 40ರ ದಶಕದಿಂದ ಆರಂಭಿಸಿ 2015ರ ವರೆಗೂ ಅಂದರೆ ಪೂರ್ತಿ 70 ವರ್ಷಗಳ ಕಾಲ ಎಲ್ಲ ನಾಯಕಿಯರಿಗೂ ದನಿಯಾಗಿ ಬೆಳ್ಳಿತೆರೆಯ ಮೆರುಗು ಹೆಚ್ಚಿಸಿದವರು ಲತಾ. ದಿನಗಳು ಕಳೆಯುತ್ತಾ ಹೋದಂತೆಲ್ಲÉ ಆಕೆಯ ದೇಹಕ್ಕೆ ಮಾತ್ರ ವಯಸ್ಸಾಗುತ್ತಿತ್ತು. ಏರುತ್ತಿರುವ ವಯಸ್ಸಿನ ಪರಿಣಾಮ ಆಕೆಯ ಕೊಳಲಿನಂಥ ಕೊರಳಿನ ಮೇಲೆ ಕಿಂಚಿತ್ತೂ ಪರಿಣಾಮ ಬೀರಲಿಲ್ಲ. ಪರಿಣಾಮ, 70ನೇ ವಯಸ್ಸಿ ನಲ್ಲೂ 12ರ ಪೋರಿಯ ದನಿಯಲ್ಲಿ ಹಾಡುವುದು ಲತಾ ಅವರಿಗೆ ಸಾಧ್ಯವಾಯಿತು. ಅಂಕಿ ಅಂಶಗಳ ಪ್ರಕಾರ ಏಳು ದಶಕದ ಸುದೀರ್ಘ ಗಾನ ಪಯಣದಲ್ಲಿ 36 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ ಲತಾ. ಇಲ್ಲೊಂದು ಸ್ವಾರಸ್ಯವಿದೆ. ಕನ್ನಡವೂ ಸೇರಿದಂತೆ 36ಕ್ಕೂ ಹೆಚ್ಚು ಭಾಷೆಯ ಹಾಡುಗಳಿಗೆ ದನಿಯಾಗಿದ್ದ ಲತಾ ಹೆಚ್ಚು ಕಲಿತವರಲ್ಲ. ಆಕೆ ಶಾಲೆಗೆ ಹೋಗಿದ್ದು ಕೇವಲ 2 ದಿನ. ತಂದೆಯ ಆಕಸ್ಮಿಕ ನಿಧನದ ಕಾರಣ, ಶಾಲೆ ಬಿಟ್ಟು ದುಡಿಮೆಗೆ ನಿಲ್ಲಬೇಕಾಯಿತು. ಶಾಲೆಗೇ ಹೋಗದ ಆಕೆ ಹಲವು ಭಾಷೆ ಕಲಿತರು. ವೃತ್ತಿಬದುಕಿನಲ್ಲಿ ಅಪಾರ ಶಿಸ್ತು ರೂಢಿಸಿಕೊಂಡಿದ್ದರು. ರೆಕಾರ್ಡಿಂಗ್‌ಗೆ ತಡವಾಗಿ ಹೋಗಿದ್ದಾಗಲಿ, ಸ್ಟುಡಿಯೋದವರನ್ನು, ಸಂಗೀತ ನಿರ್ದೇಶಕರನ್ನು ಕಾಯಿಸಿದ್ದಾಗಲಿ ಇಲ್ಲವೇ ಇಲ್ಲ. ಬದುಕೆಂಬ ಪಾಠಶಾಲೆ ಅವರಿಗೆ ಗುರುವಾಯಿತು. ಗುರಿ ತೋರಿತು.