ಪಾಟ್ನಾ/ನವದೆಹಲಿ: ಬಿಹಾರ ಚುನಾವಣೆಯ ಬಳಿಕ ಆರ್‌ಜೆಡಿ ಜತೆಗೆ ಹೊಂದಾಣಿಕೆ ಅಥವಾ ಮೈತ್ರಿ ಪ್ರಸ್ತಾಪವೇ ಇಲ್ಲ. ಲೋಕಜನಶಕ್ತಿ ಪಕ್ಷ ಬಿಜೆಪಿಯ ಬಿಟೀಂ ಅಲ್ಲವೆಂದು ಸಂಸದ ಚಿರಾಗ್ ಪಾಸ್ವಾನ್ ಸಾರಿದ್ದಾರೆ. ಬುಧವಾರ ಪಾಟ್ನಾದಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಈ ಚುನಾವಣೆ ಜೆಡಿಯು ನಾಯಕ, ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ ಕೊನೆಯದ್ದು. ತಂದೆಯವರು ಇಲ್ಲದೆ ಪ್ರಚಾರ ನಡೆಸುವುದು ಕಷ್ಟವಾಗುತ್ತಿದೆ. ಇದುವರೆಗೆ ಅವರ ಹಿಂದಿನಿಂದ ಕೆಲಸ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.
ಎಲ್‌ಜೆಪಿ ಬಿಹಾರದಲ್ಲಿ ಬಿಜೆಪಿಯ ಬಿ ಟೀಂ ಎಂಬ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಚಿರಾಗ್ ಪಾಸ್ವಾನ್ “ಮತ್ತೂಂದು ಪಕ್ಷದ ಛಾಯೆಯಲ್ಲಿ ಎಲ್‌ಜೆಪಿ ಏಕೆ ಇರಬೇಕು? ಇಪ್ಪತ್ತು ವರ್ಷಗಳಿಂದ ಎಲ್‌ಜೆಪಿ ಅಸ್ತಿತ್ವದಲ್ಲಿದೆ ಮತ್ತು ನನ್ನ ತಂದೆ ರಾಂ ವಿಲಾಸ್ ಪಾಸ್ವಾನ್ 51 ವರ್ಷಗಳ ಕಾಲ ಸಚ್ಚಾರಿತ್ರ್ಯದ ರಾಜಕಾರಣ ನಡೆಸಿದ್ದಾರೆ’ ಎಂದರು.
ನ.10ರಂದು ಫಲಿತಾಂಶ ಪ್ರಕಟವಾದ ಬಳಿಕ ಎಲ್‌ಜೆಪಿ ಆರ್‌ಜೆಡಿ- ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟದ ಭಾಗವಾಗುವುದಿಲ್ಲ. ಈಗಲೂ ಕೂಡ ಆ ಮೈತ್ರಿಕೂಟದ ಜತೆಗೆ ರಹಸ್ಯ ಒಪ್ಪಂದ ಮಾಡಿಕೊಂಡಿಲ್ಲವೆಂದು ಹೇಳಿದ್ದಾರೆ.
ಆಯೋಗ ಆಕ್ಷೇಪ: ಬಿಹಾರ ಚುನಾವಣೆಗಾಗಿ ದೊಡ್ಡ ಪ್ರಮಾಣ ರ್ಯಾಲಿಗಳಲ್ಲಿ ಹೆಚ್ಚಿನ ಜನರು ಸೇರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೋವಿಡ್ ಸೋಂಕು ತಡೆ ನಿಯಮಗಳನ್ನು ಉಲ್ಲಂ ಸುತ್ತಿರುವ ರಾಜಕೀಯ ಪಕ್ಷಗಳ ನಿಲುವಿಗೆ ಚುನಾವಣಾ ಆಯೋಗ ಆಕ್ಷೇಪ ಮಾಡಿದೆ. ನಿಯಮ ಪಾಲನೆ ಮಾಡದೇ ಇದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅದು ಎಚ್ಚರಿಕೆ ನೀಡಿದೆ.
ಸಚಿನ್- ಸೆಹ್ವಾಗ್
ಜೋಡಿ ಇದ್ದಂತೆ ಬಿಜೆಪಿ ಮತ್ತು ಜೆಡಿಯು ಮೈತ್ರಿಕೂಟ ಒಂದು ಸೂಪರ್‌ಹಿಟ್.ಕ್ರಿಕೆಟ್‌ನಲ್ಲಿ ಸಚಿನ್-ಸೆಹ್ವಾಗ್ ಜೋಡಿ ಆರಂಭಿಕ ಆಟಗಾರರಾಗಿ ಎಷ್ಟು ಪ್ರಸಿದ್ಧಿ ಪಡೆದಿದ್ದರೋ, ಅದೇ ರೀತಿ 2 ಪಕ್ಷಗಳ ಮೈತ್ರಿ ಈಗಲೂ ಪ್ರಧಾನ್ಯತೆ ಉಳಿಸಿ ಕೊಂಡಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದ್ದಾರೆ. ಖಲಗಾಂವ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ನಡೆದಿದೆ ಎಂದು ನಿತೀಶ್ ವಿರುದ್ಧ ಬೊಟ್ಟು ಮಾಡುವಂತಿಲ್ಲ ಎಂದು ಹೇಳಿದ್ದಾರೆ.