Advertisement

ದ.ಕ., ಉಡುಪಿ ಜಿಲ್ಲೆಯಲ್ಲಿ ಪಶು ಆಹಾರ ಕೊರತೆ!

01:25 AM Dec 30, 2021 | Team Udayavani |

ಕುಂದಾಪುರ: ಕೆಎಂಎಫ್ ನ ಪಶು ಆಹಾರ ಪೂರೈಕೆ 4 ತಿಂಗಳಿಂದ ವ್ಯತ್ಯಯವಾಗಿದ್ದು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈನುಗಾರರಿಗೆ ಸಮಸ್ಯೆಯಾಗಿದೆ. ಅಕಾಲಿಕ ಮಳೆಯಿಂದ ಆಹಾರ ತಯಾರಿಯ ಕಚ್ಚಾವಸ್ತು ಡಿ ಆಯಿಲ್ಡ್‌ ರೈಸ್‌ ಬ್ರಾನ್‌ (ಎಣ್ಣೆಯ ಅಂಶ ತೆಗೆದ ಅಕ್ಕಿಯ ತೌಡು) ಕೊರತೆ, ಇಂಧನ ಬೆಲೆ ಏರಿಕೆ ಕಾರಣದ ಜತೆಗೆ ಕರಾವಳಿಯಲ್ಲಿ ಪಶು ಆಹಾರ ತಯಾರಿ ಘಟಕ ಇಲ್ಲದಿರು ವುದು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ.

Advertisement

ದ.ಕ. ಹಾಲು ಒಕ್ಕೂಟವು ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ 728 ಹಾಲು ಉತ್ಪಾದಕ ಸಂಘಗಳ ಮೂಲಕ ದಿನಂಪ್ರತಿ ಸರಾಸರಿ 4.7 ಲಕ್ಷ ಲೀಟರ್‌ ಹಾಲು ಸಂಗ್ರಹಿಸುತ್ತಿ¤ದೆ. ಉಡುಪಿ ಜಿಲ್ಲೆಯಲ್ಲಿ 30 ಸಾವಿರ ಸಕ್ರಿಯ ಸದಸ್ಯರಿದ್ದಾರೆ. ಇವರೆಲ್ಲರಿಗೂ ಪಶು ಆಹಾರ ಪೂರೈಕೆಯ ವ್ಯತ್ಯಯದಿಂದ ಸಂಕಷ್ಟಕ್ಕೀಡಾಗಿದ್ದಾರೆ.

ಕರಾವಳಿಯಲ್ಲಿ ಇಲ್ಲ
ಸರಕಾರಿ ಆಶ್ರಯದ ಪಶು ಆಹಾರ ಉತ್ಪಾದನೆ ಘಟಕಗಳು ರಾಜಾನುಕುಂಟೆ, ಗುಬ್ಬಿ, ಧಾರವಾಡ, ಹಾಸನ ಮತ್ತು ಶಿಕಾರಿಪುರಗಳಲ್ಲಿವೆ. ಅವಿಭಜಿತ ದ.ಕ.ದಲ್ಲಿ ತಿಂಗಳಿಗೆ 7 ಸಾವಿರ ಮೆ.ಟನ್‌ ಪಶು ಆಹಾರದ ಅಗತ್ಯವಿದ್ದು, ದಿನಕ್ಕೆ 300 ಟನ್‌ ಉತ್ಪಾದಿಸುವ ಘಟಕ ಅಗತ್ಯವಿದೆ. ಈ ಬೇಡಿಕೆ ಇನ್ನೂ ಈಡೇರಿಲ್ಲ. ಬ್ರಹ್ಮಾವರ ಸಕ್ಕರೆ ಕಾರ್ಖಾನೆಯವರು ಆಸಕ್ತರಾಗಿದ್ದು, ಇನ್ನಷ್ಟೇ ಕೈಗೂಡಬೇಕಿದೆ.

ಹೆಚ್ಚಿದ ಬೇಡಿಕೆ
ಈ ಮೊದಲು ಒಕ್ಕೂಟದ ಪಶು ಆಹಾರ ಹಾಗೂ ಖಾಸಗಿ ಪಶು ಆಹಾರಕ್ಕೆ ಕೇವಲ 50 ರೂ. ದರದಲ್ಲಿ ವ್ಯತ್ಯಾಸ ಇತ್ತು. ಒಕ್ಕೂಟದ ಆಹಾರ 1,000 ರೂ.ಗೆ ಮಾರಲಾಗುತ್ತಿತ್ತು. ಕಚ್ಚಾವಸ್ತು ಕೊರತೆಯಾದ ಬಳಿಕ ಖಾಸಗಿ ಉತ್ಪನ್ನದ ಬೆಲೆ 1,400 ರೂ.ಗೇರಿತು. ಆಗ ಜನರು ಒಕ್ಕೂಟದ ಆಹಾರಕ್ಕೆ ಮೊರೆ ಹೋದ ಕಾರಣ ಕೆಎಂಎಫ್ಗೆ 200 ಟನ್‌ಗಳಷ್ಟು ಹೆಚ್ಚುವರಿ ಬೇಡಿಕೆ ಸೃಷ್ಟಿಯಾ ಯಿತು. ಪೂರೈಕೆ ವ್ಯತ್ಯಯಕ್ಕೆ ಇದೂ ಒಂದು ಕಾರಣ.

ಇದನ್ನೂ ಓದಿ:ದಲಿತರ ರಕ್ಷಣೆಗೆ ಸರಕಾರ ಬದ್ಧ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Advertisement

ತೈಲಬೆಲೆ
ಪ್ರಸ್ತುತ ಧಾರವಾಡ, ಶಿವಮೊಗ್ಗ ಮೊದಲಾದೆಡೆಯಿಂದ ಪಶು ಆಹಾರ ತರಿಸಲಾಗುತ್ತದೆ. ಸಾಮಾನ್ಯವಾಗಿ ಟೆಂಡರ್‌ ವಹಿಸಿಕೊಂಡ ಲಾರಿಯವರು ಬೇರೆ ಬಾಡಿಗೆಗೆ ಹೋಗಿ ಮರಳುವಾಗ ಪಶು ಆಹಾರ ತರಲು ಯೋಜಿಸುತ್ತಾರೆ.

ಡೀಸೆಲ್‌ ಬೆಲೆ ಏರಿಕೆಯಾದಾಗ ಎರಡೂ ಕಡೆಗೆ ಲೋಡು/ಬಾಡಿಗೆ ಇರುವಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆಯೂ ಉದ್ಭವಿಸಿತು. ಈ ಹಿನ್ನೆಲೆಯಲ್ಲಿ ಪಶು ಆಹಾರ ಸಿದ್ಧವಿಲ್ಲದೇ 2-3 ದಿನ ಕಾಯಬೇಕಾದ ಸ್ಥಿತಿ ಎದುರಾಯಿತಲ್ಲದೇ, ಕರಾವಳಿಗೆ ಪಶು ಆಹಾರ ಪೂರೈಕೆಯಲ್ಲಿ ವಿಳಂಬಕ್ಕೆ ಕಾರಣವಾಗಿದೆ.

ಉಡುಪಿ ಜಿಲ್ಲೆಗೆ ಪ್ರತ್ಯೇಕ ಕೆಎಂಎಫ್ ಮಾಡಲಿ. ಇಲ್ಲವೇ ಪಶು ಆಹಾರ ತಯಾರಿ ಘಟಕ ಮಾಡಲಿ. ಸಮಸ್ಯೆ ನಿವಾರಿಸದೇ ಹೈನುಗಾರರನ್ನು ಸತಾಯಿಸುವುದು ಸರಿಯಲ್ಲ.
– ಕೆ. ವಿಕಾಸ್‌ ಹೆಗ್ಡೆ,
ಉಡುಪಿ ಜಿಲ್ಲಾ ರೈತ ಸಂಘ ವಕ್ತಾರ

117 ಟನ್‌ ಆಹಾರ ಲೋಡ್‌ ಆಗಿದ್ದು 87 ಟನ್‌ ಧಾರವಾಡದಿಂದ ಬರಲಿದೆ. ಕೆಲವೇ ದಿನಗಳಲ್ಲಿ ಸಮಸ್ಯೆ ನಿವಾರಣೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತ್ಯೇಕ ಆಹಾರ ತಯಾರಿ ಘಟಕ ನಿರ್ಮಾಣಕ್ಕೆ ನಮ್ಮದೂ ಬೇಡಿಕೆ ಇದೆ.
– ಕೆ. ರವಿರಾಜ ಹೆಗ್ಡೆ,
ಅಧ್ಯಕ್ಷರು, ಕೆಎಂಎಫ್ ಮಂಗಳೂರು

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next