ಬೆಂಗಳೂರು: ರೈತರು ಹಾಗೂ ಜಾನುವಾರು ಮಾಲಿಕರನ್ನು ಉತ್ತೇಜಿಸಲು ರಾಜ್ಯಮಟ್ಟದ ಪಶುಮೇಳ ಫೆ.7, 8ರಂದು ಬೀದರ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳ ಸುಮಾರು 26ಕ್ಕೂ ಹೆಚ್ಚು ತಳಿಗಳ ಜಾನುವಾರು ಪ್ರದರ್ಶನದಲ್ಲಿ ನೋಡುಗರ ಗಮನ ಸೆಳೆಯಲಿವೆ.
ಲಕ್ಷಕ್ಕೂ ಹೆಚ್ಚು ರೈತರು ಪಶು ಮೇಳದಲ್ಲಿ ಭಾಗವಹಿಸಲಿದ್ದಾರೆಂದರು. ವಿವಿಧ ಪ್ರಮುಖ ತಳಿಗಳ ಪ್ರದರ್ಶನ ಮತ್ತು ಪಶುಪಾಲನಾ ಇಲಾಖೆ ಚಟುವಟಿಕೆಗಳಬಗ್ಗೆ ರೈತರಿಗೆ, ಜಾನುವಾರು ಮಾಲಿಕರಿಗೆ ಮತ್ತು ಸಾರ್ವಜನಿಕರಿಗೆ ಪ್ರದರ್ಶನ ನೀಡುವುದರ ಮೂಲಕ ರೈತರಲ್ಲಿ ಹೆಚ್ಚಿನ ಅರಿವು ಮತ್ತು ಪ್ರೋತ್ಸಾಹ ನೀಡುವುದಕ್ಕಾಗಿ ಪಶು ಮೇಳ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಪಶುಮೇಳದಲ್ಲಿ ಭಾಗವಹಿಸುವ ರೈತರಿಗೆ ಮತ್ತು ಜಾನುವಾರು ಮಾಲಿಕರಿಗೆ ಹೈನುಗಾರಿಕೆ, ಜಾನುವಾರು ಸಾಕಣೆ, ಕುರಿಸಾಕಣೆ, ಹಂದಿ ಸಾಕಣೆ ಮತ್ತು ಕೋಳಿ ಸಾಕಣೆ ಹಾಗೂ ಜಾನುವಾರು ಸಂಬಂಧಿತ ಇನ್ನಿತರ ಚಟುವಟಿಕೆಗೆ ಸಂಬಂಧಿಸಿದಂತೆ ಹೆಚ್ಚು ಮಳಿಗೆ ತೆರೆಯಲು ಕ್ರಮ ತೆಗೆದುಕೊಂಡಿದ್ದೇವೆಂದರು.
ಹಾಲು ಕರೆಯುವ ಸ್ಪರ್ಧೆ: ಮಿಶ್ರತಳಿ ಹಸು ವಿಭಾಗ, ದೇಶಿ ಹಸು, ದೇವಣಿ ಹಸು, ಎಮ್ಮೆ ಹೀಗೆ ನಾಲ್ಕು ವಿಭಾಗದಲ್ಲಿ ಹಾಲು ಕರೆಯುವ ಸ್ಪರ್ಧೆ ಹಮ್ಮಿಕೊಂಡಿದ್ದೇವೆ. ರೈತರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರತಿ ವಿಭಾಗದಲ್ಲೂ ಪ್ರಥಮ ಬಹುಮಾನವಾಗಿ 50 ಸಾವಿರ, ದ್ವಿತೀಯ ಬಹುಮಾನವಾಗಿ 30 ಸಾವಿರ ಹಾಗೂ ತೃತೀಯ ಬಹುಮಾನವಾಗಿ 20 ಸಾವಿರ ರೂ. ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪಶುಮೇಳದ ಆಕರ್ಷಣೆ: ಹಸು, ಎಮ್ಮೆ, ಕುರಿ, ಮೇಕೆ, ಹಂದಿ ಹಾಗೂ ಮೊಲಗಳ ವೈಜ್ಞಾನಿಕ ಸಾಕಣೆ ಮತ್ತು ನಿರ್ವಹಣೆ ಕುರಿತು ಮಾಹಿತಿ, ಹೈನುರಾಸುಗಳ ಉತ್ಪಾದನಾ ಸಾಮರ್ಥ್ಯ ಅಭಿವೃದ್ಧಿ, ಶುದ್ಧ ಹಾಲು ಉತ್ಪಾದನೆ, ಸಂಸ್ಕರಣೆ ಬಗ್ಗೆ ಮಾಹಿತಿ ಒದಗಿಸಲಾಗುವುದು ಎಂದರು.