Advertisement
ಮಗುವೊಂದು ತಾಯಿಯ ಸ್ಪರ್ಶವನ್ನೇ ಕಳೆದುಕೊಳ್ಳುವ ಪರಿಯಲ್ಲಿ ನಾವಿಂದು ಪ್ರಕೃತಿಯ ಸ್ಪರ್ಶವನ್ನು ಕಳೆದುಕೊಳ್ಳುತ್ತಿದ್ದೇವೆ. ನದಿ ಬೆಟ್ಟವಷ್ಟೇ ಅಲ್ಲ, ಕಡಲು ಕೂಡ ನಮ್ಮ ಯಾವುದೋ ಕಲ್ಪವೃಕ್ಷ ವೃಂದಾವನದ ಕಲ್ಪನೆಯನ್ನು ನನಸುಗೊಳಿಸಲು ನಮಗಿರುವ ಸಲಕರಣೆಗಳ್ಳೋ ಎಂಬಂತೆ ಕಾಣುತ್ತಿದೆ. ಅಷ್ಟರಮಟ್ಟಿಗೂ ನಮ್ಮ ಕಣ್ಣುಗಳಿಗೆ ಪರೆ ಬರುತ್ತಿದೆ. ಬೆಟ್ಟ ಅಗೆದರೆ ಒಳಗರ್ಭದಲ್ಲಿ ಏನಿದೆ, ಯಾವ ಖನಿಜ? ಅದಕ್ಕೆ ಎಲ್ಲಿ ಬೆಲೆ? ಏನು ಬೆಲೆ? ಇತ್ಯಾದಿಗಳ ನಡುವೆ ಬೆಟ್ಟವೇ ಕಾಣದೆ, ದೊಡ್ಡದೊಂದು ಗಣಿಗಾರಿಕೆ ಮೈವೆತ್ತು ಅಲ್ಲಿ ಖನಿಜ ಹೊತ್ತು ಸಾಗುವ ಸಾಲಾನುಸಾಲು ಲಾರಿಗಳ ಚಿತ್ರಗಳು ಕಣ್ತಣಿಸುವ ಕಾಲಕ್ಕೆ ನಾವು ದಾಟಿಕೊಂಡಿದ್ದೇವೆ.
ಸೇತುಬಂಧನ ನಾಟಕವನ್ನು ಬರೆದು ನಿರ್ದೇಶಿಸಿದ ಕೆ. ವಿ. ಅಕ್ಷರ ಇಂಥ ಬದುಕಿನ ಹೊತ್ತಿನಲ್ಲೊಂದು ನಾಟಕ
ಇಂಥ ಹೊತ್ತಿನಲ್ಲಿ ನಾನು ಹೆಗ್ಗೋಡಿನ ಸಂಸ್ಕೃತಿ ಶಿಬಿರದ ಮೊದಲ ದಿನದ ನಾಟಕ ಸೇತುಬಂಧನ ನೋಡಿದೆ. ಈ ನಾಟಕ ಕೆ. ವಿ. ಅಕ್ಷರ ಅವರ ಸ್ವಯಂವರ ಲೋಕ ಮತ್ತು ಭಾರತ ಯಾತ್ರೆ ನಾಟಕಗಳ ಮುಂದಿನ ಭಾಗ. ಹಿಂದಿನ ಎರಡು ನಾಟಕಗಳಲ್ಲಿನ ಆಗುಹೋಗುಗಳಿಗೆ ಸಂಬಂಧಿಸಿಕೊಂಡೇ, ಆದರೆ ಅವುಗಳನ್ನು ತಿಳಿಯದವರಿಗೆ ಕೊಂಡಿ ತಪ್ಪದಂತೆ ನಾಟಕ ನಡೆಯುತ್ತದೆ.
Related Articles
Advertisement
ಹೀಗೆ ಊರು ಬದಲಾಗುತ್ತಿರುವ ಹೊತ್ತಿನಲ್ಲೇ ಯಾವತ್ತಿನಿಂದಲೂ ಒಂದು ಶ್ರುತಿಯಲ್ಲಿ ಬದುಕನ್ನು ಅಳವಡಿಸಿಕೊಂಡು ಜೀವಿಸುತ್ತಿರುವವರಿಗೆ ಅಪಶ್ರುತಿ ಕೇಳಿಸತೊಡಗಿದೆ. ಒಳ ಆಕ್ರೋಶ, ಆವೇಶ, ಭಾವನಾತ್ಮಕ ದಣಿವು, ಸಂಘರ್ಷ ಇತ್ಯಾದಿಗಳಿಂದ ಬದುಕು ಕಂಪಿಸತೊಡಗಿದೆ. ಬದಲಾವಣೆಗಳಿಗೆ ಜನ ಹೊಂದಿಕೊಳ್ಳುವ ಮತ್ತು ಹೊಂದಿಕೊಳ್ಳಲಾಗದೆ ಚಡಪಡಿಸುವ ಇಂಥ ಹೊತ್ತಿನಲ್ಲಿ ಜೋಯಿಸರು ಭಾರತ ಯಾತ್ರೆಯನ್ನು ಮುಗಿಸಿ, ಲಾಂಚಿನ ಮೂಲಕ ಊರು ತಲುಪುತ್ತಾರೆ, ಅವರನ್ನು ಎದುರುಗೊಳ್ಳುವ ಕಿಟ್ಟು, ಮನೆಯಲ್ಲಿ ಮಗಳು ಭಾಮಾ ಮತ್ತು ಕೆಲಸದ ತಿಮ್ಮ (ಈಗ ತಿಮ್ಮ ನಾಯಕ) ಎಲ್ಲರಿಂದಲೂ ಸಂಗತಿಗಳನ್ನು ಸಂಘರ್ಷಗಳನ್ನು ಆಲಿಸುತ್ತಾರೆ. ಊರ ಸ್ಥಿತಿಗತಿ ತಲುಪುತ್ತಿರುವ ಅವಸ್ಥೆಯ ಕುರಿತು ಪಂಚಾತಿಕೆಯೂ ನಡೆಯುತ್ತದೆ. ಅಲ್ಲಿ ಕೈ ಕೈ ಮಿಲಾಯಿಸುವಿಕೆ, ಶ್ರೇಷ್ಠ ಕನಿಷ್ಟರೆಂಬ ಯಾವ ಭೇದವೂ ಇಲ್ಲದೆ ಕೇಳಿಬರುವ ಏರುಧ್ವನಿ, ಭತ್ಸìನೆ, ಸಮರ್ಥನೆ ಇತ್ಯಾದಿಗಳ ನಡುವಲ್ಲಿ ಜೋಯಿಸರೊಬ್ಬರೇ, ಸೇತುವೆಯ ಅಡಿಯಲ್ಲಿ ಸಾವಧಾನವಾಗಿ ಹರಿವ ನದಿಯಂತೆ, ಸಮತೋಲನದ ಪ್ರಜ್ಞೆಯಾಗಿ ದೃಢ ಚಿತ್ತತೆಯಿಂದ ತಾಳ್ಮೆಯಿಂದ ಚರ್ಚೆಯನ್ನು ಕೇಳಿಸಿಕೊಳ್ಳುತ್ತ ತಮ್ಮ ಊರಿನ ಭವಿಷ್ಯವನ್ನು ಮುಂಗಾಣುತ್ತಾರೆ. ತನ್ನ ಊರಿನ ಅಷ್ಟೇ ಅಲ್ಲ ತನ್ನ ಮನೆಯಲ್ಲೇ ನಡೆದ ಪಲ್ಲಟಗಳಿಗೆ ಪ್ರತಿಸ್ಪಂದಿಸುತ್ತಾರೆ.
ನಾಟಕದ ಮೊದಲ ಭಾಗದಲ್ಲಿ ಒಂದರ ಮೇಲೊಂದು ವಿಭಿನ್ನ ದೃಶ್ಯಗಳ ಜೋಡಣೆ, ನಾಟಕದ ಒಳಗೇ ನಡೆಯುವ ನಾಟಕಗಳು ಸಂಘರ್ಷಗಳು ಮುಂತಾಗಿ ಇಡೀ ನಾಟಕ ವಿಚಿತ್ರ ನಡೆಯಿಂದ ಕಥನವನ್ನು ಕಾಣಿಸುತ್ತದೆ. ನಂತರದ ಅರ್ಧದಲ್ಲಿ ಹಳೆಯ ಕಾಲದ ಜೋಯಿಸರು ತನ್ನೆದುರಿಗೆ ಸಡ್ಡು ಹೊಡೆದು ಖಡಕ್ಕಾಗಿ ನಿಂತಿರುವ ಸದ್ಯದ ವಿದ್ಯಮಾನಗಳಿಗೆ ಸ್ಪಂದಿಸುತ್ತ ತನ್ನದೇ ರೀತಿಯಲ್ಲಿ ಎದುರಿಸಲು ಒಂದು ಸುಹೃದ್ ಮಾರ್ಗವನ್ನು ಕಂಡುಕೊಳ್ಳುವತ್ತ ನಿಧಾನವಾಗಿ ಮತ್ತು ಜಾಣ್ಮೆಯಿಂದ ತೊಡಗುತ್ತಾರೆ. ದೇಶವೆಲ್ಲಾ ತಿರುಗಿ ಬಂದವರು ಅವರು. ಹಿಂದಣ ಕಾಲವನ್ನು ಅರಿತವರು. ವರ್ತಮಾನದಲ್ಲಿ ಬದುಕುತ್ತ ಈಗ ಭವಿಷ್ಯದ ಚಿತ್ರವನ್ನೂ ಕಲ್ಪಿಸಿಕೊಳ್ಳಬಲ್ಲ ಸಾಮರ್ಥ್ಯದವರು. ಎಲ್ಲರಂತೆ ಸ್ಥಿಮಿತ ಕಳಕೊಳ್ಳದ ಅವರಿಗೆ ಸಮಸ್ಯೆಯು ನಿನ್ನೆ, ಇಂದು ಮತ್ತು ನಾಳೆಗಳ ಅನುಭವದ ಪ್ರಜ್ಞೆಯಿಂದ ಗ್ರಹಿಸಬೇಕಾದ ಸಮಸ್ಯೆಯಾಗಿ ಕಾಣುತ್ತದೆ. ಅಂತ್ಯದಲ್ಲಿ ಅವರ ಸೂಚನೆಯಂತೆ ನಡೆಯುವ ನಾಟಕವಂತೂ ಸಂಭಾಷಣೆಯನ್ನು ಭಾಮೆ ಮತ್ತು ಕಿಟ್ಟು ಅವರವರೇ ಕಟ್ಟಿಕೊಳ್ಳುವುದರಿಂದಾಗಿ ಒಳಗೇ ಹತ್ತಿಕ್ಕಿದ ಮಾತುಗಳು ಯಾವ ಎಗ್ಗಿಲ್ಲದೆ ಒಡಲು ಹರಿದು ಓತಪ್ರೋತವಾಗಿ ಹೊಮ್ಮಿ ವಾಸ್ತವದ ದರ್ಶನವನ್ನು ಮಾಡಿಬಿಡುತ್ತವೆ. ಜೋಯಿಸರು ಹೀಗೆ ಅವರವರ ಮನೋದರ್ಪಣವನ್ನು ಅವರವರಿಗೇ ತೋರಿಸಿ, ತನ್ನ ಕಲ್ಪನೆಯ ಹಳ್ಳಿಯನ್ನು ಸಾಕಾರಗೊಳಿಸಿಕೊಳ್ಳುವ ಹೊಣೆಯನ್ನು, ಎಂದಿಗೂ ಊರು ಬಿಡದೆ ಅಲ್ಲಿಯೇ ನೆಲೆಸಲು ನಿರ್ಧರಿಸಿದ ಆ ತರುಣಮಂದಿಗೇ ಹೊರಿಸಿ, ತೀರಿಕೊಳ್ಳುತ್ತಾರೆ ಎಂಬಲ್ಲಿಗೆ ನಾಟಕ ಮುಗಿಯುತ್ತದೆ.
ಬದಲಾವಣೆಗಳನ್ನು ಎದುರಿಸುವುದು ಹೇಗೆ? ಬದಲಾವಣೆಗಳಿಗೆ ಕಾರಣ ಸ್ವತಃ ನಾವೇ? ಅಥವಾ ಯಾವುದೋ ಹೊರಒತ್ತಡವೆ? ಸೇತುವೆ ಎಂಬುದು ನಮ್ಮನ್ನು ಒಟ್ಟು ಸೇರಿಸುವುದಕ್ಕೂ ಸರಿಯೆ. ಅದರ ವಿರುದ್ಧಕ್ಕೂ ಸರಿಯೆ. ಸೇತುವೆ ಆಯಿತು ಎಂದೊಡನೆ ಅದರ ಉದ್ದೇಶ ನೆರವೇರಿಬಿಡುವುದೆ? ಸೇತುವೆ ಎಂಬುದು ಏನು ನಿಜಕ್ಕೂ? ರೂಪಕವೆ? ವಾಸ್ತವವೆ? ಜೋಡಣೆಯೆ, ಕಳಚುವಿಕೆಯೆ? ಕೆಳಗೆ ಯಾವ ಖೇರಿಲ್ಲದೆ ಹರಿಯುವ ನದಿಯೊಡನೆ ಯಾವ ಸಂವಾದವೂ ನಡೆಯದೆ ಹೋಗುವ ದುರಂತವೆ? ಇಂಥ ನಾನಾ ಪ್ರಶ್ನೆಗಳಿಗೆ ನಾಟಕದಲ್ಲಿ ಬರುವ ಜೋಯಿಸರ ಪಾತ್ರ ಒಂದು ರೀತಿಯಲ್ಲಿ ದಿಕ್ಸೂಚಕ ಪಾತ್ರವಾಗಿ ಗೋಚರಿಸುತ್ತದೆ.
ನಾಟಕವು, ಮೊದಲ ಭಾಗದಲ್ಲಿನ ಬಿಡಿಬಿಡಿ ದೃಶ್ಯಗಳ ಮೂಲಕ ಸೇತುವೆಯ ಪರಿಣಾಮಗಳನ್ನು ಹೇಳುತ್ತ, ಉತ್ತರಾರ್ಧದಲ್ಲಿ ಸೇತುವೆ ಎಂಬುದು ಕೇವಲ ಭೌತಸ್ಥಿತಿಯಲ್ಲಿ ಮಾತ್ರ ಇರುವ, ಜನರ ನಡುವಿನ ಸೇತುವೆಯೇ ಕುಸಿದು ಹೋಗಿರುವ ಅಥವಾ ಸೇತುವೆ ಒತ್ತಟ್ಟಿಗಿರಲಿ, ಜನರ ಪರಸ್ಪರ ಅರಿವಿನ ನಡುವೆಯೇ ಗೋಡೆಯೆದ್ದಿರುವ ಪರಿಯನ್ನು ದಾರುಣವಾಗಿ ಹೇಳುತ್ತದೆ. ನೋಡುತ್ತ ನನಗೆ ನೆನಪಾಗಿದ್ದು ನಮ್ಮೂರುಗಳಲ್ಲಿ ನಡೆವ ಕತೆಗಳೇ. ನಮ್ಮ ರಾಜ್ಯದ ದೇಶದ ಕತೆಗಳೇ.
ಒಂದು ರೀತಿಯಲ್ಲಿ ನೋಡಿದರೆ, ವರ್ತಮಾನದ ಜಟಿಲತೆ ಕುರಿತು ಹೇಳುವಂತೆ ಕಾಣುವ ಸೇತುಬಂಧ ನಾಟಕ ನಿಜಕ್ಕೂ ಹೇಳುತ್ತಿರುವುದು ಅಂದು ಇಂದು ಮತ್ತು ಮುಂದಿನ ಕಾಲಗಳ ಒಟ್ಟು ತಳಮಳಗಳನ್ನಲ್ಲವೆ? ಸೇತುಬಂಧ ಎನ್ನುವ ಹೆಸರೇ ಸೀದಾ ಆದಿಯಲ್ಲಿ ನಡೆದ ಒಂದು ದೊಡ್ಡ ಯುದ್ಧದ ನೆನಪಿಗೆ, ದುಷ್ಟ ಸಂಹಾರವೆಂಬ ಕಲ್ಪನೆಗೆ, ಅದಕ್ಕೆ ಕೊಂಡಿಯಾಗಿ ಬರುವ ಅಗ್ನಿಪರೀಕ್ಷೆ ಮತ್ತಿತರ ಕರುಳು ಕೊಯÌ ಸಂಕಟದ ಕತೆಗಳಿಗೆ ನಮ್ಮನ್ನು ಒಯ್ಯುತ್ತವೆ. ಸೀತೆಯನ್ನು ಉಳಿಸಿದ ಸೇತುವೆ, ಸೀತಾ ಎಂಬ ಕೋಮಲತೆಯು ಬೆಂಕಿಯಲಿ ಮಿಂದೆದ್ದು ತನ್ನ ಶುದ್ಧತೆಗೆ ಪುರಾವೆ ತೋರಿ, ಗಂಡನ ಮನದಲ್ಲಿ ಕಟ್ಟಬೇಕಾಗಿ ಬಂದ ಹೊಸ ಸೇತುವೆ; ಹೊಳೆಗಳನ್ನು ಸೇರಿಸುವ ಸೇತುವೆ, ಭಾಷೆಗಳ ನಂಟು ಬೆಸೆವ ಸೇತುವೆ, ಊರೂರುಗಳನ್ನು ರಸ್ತೆ ರಸ್ತೆಗಳನ್ನು ಹೊಲಿವ ಸೇತುವೆ. ಊರ ಮಂದಿಯನ್ನು ಊರುಬಿಡಿಸುವ ಸೇತುವೆ, ಹೊರಮಂದಿಯನ್ನು ಒಳ ಕರೆವ ಸೇತುವೆ, ಊರ ಆಕೃತಿಯನ್ನೇ ಬದಲಿಸುವ ಸೇತುವೆ. ಮರಳು ಬಾಚಿ ದೂರದ ಯಾವುದೋ ನಾಡಿಗೆ ಲಾರಿಯಲ್ಲಿ ಕ್ಷಿಪ್ರದಲ್ಲಿ ಕಳಿಸಲು ನೆರವಾಗುವ ಸೇತುವೆ. ಕಲ್ಲು ಸಾಗಿಸುವ, ಗ್ರಾನೈಟ್ ಸಾಗಿಸುವ, ಬದುಕು ಮುರಿಯುವ ಬದುಕು ಚಿಗುರಿಸುವ ಸೇತುವೆ. ನದಿಯನ್ನು ಅಣಕಿಸುವ, ಪ್ರಕೃತಿಗೆ ಸವಾಲು ಎಸೆವ ಸೇತುವೆ. ಒಟ್ಟಿನಲ್ಲಿ ಸೇತುವೆ ಮತ್ತು ಅ-ಸೇತುವೆಗಳ ನಡುವೆ ನಮ್ಮ ಬದುಕು ತುಯ್ಯುತ್ತಿರುವುದೆ? ಇಂಥಲ್ಲಿ ನಾವು ಬದುಕಿನ ದೀಪ ನಂದದಂತೆ ಕಾಪಾಡಿಕೊಳ್ಳುವ ಬಗೆ ಹೇಗೆ?
ನಾಟಕವನ್ನು ನಾನು ನೋಡಿದೆನೋ, ಕೇಳಿಕೊಂಡೆನೋ ತಿಳಿಯೆ. ಆದರೆ, ಉದ್ದಕ್ಕೂ ನಾನು ಅದರೊಡನೆ ನನ್ನ ಸಾಲುಗಳನ್ನು ಸೇರಿಸುತ್ತ ಹೋಗಿದ್ದು, ನಾಟಕ ಮುಗಿದ ಮೇಲಷ್ಟೆ ಅರಿವಾಯಿತು. ನಾಟಕದಲ್ಲಿ ನಾನೂ ಇದ್ದೆ ಎಂದು ಆ ಮೇಲಷ್ಟೇ ತಿಳಿಯಿತು. ಮುಗಿಸಿ ಹೊರಬರುವಾಗ ಒಳಗೆ ಒಂದು ಬಗೆಯ ತಪ್ತತೆ ಮತ್ತು ದಣಿವು ಆವರಿಸಿತ್ತು.
ವೈದೇಹಿ