ಭಟ್ಕಳ: ಧರ್ಮ ಎನ್ನುವ ಪವಿತ್ರ ಪದವನ್ನು ಇಂದು ತಪ್ಪಾಗಿ ಅರ್ಥೈಸಲಾಗುತ್ತಿದ್ದು ಧರ್ಮದ ಹೆಸರಲ್ಲಿ ಸಮಾಜವನ್ನು ಒಡೆಯುವ ಕೆಲಸ ನಡೆಯುತ್ತಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಸದ್ಭಾವನಾ ಮಂಚ್ ಅಧ್ಯಕ್ಷ ಸತೀಶಕುಮಾರ್ ಹೇಳಿದರು.
ಅವರು ಭಟ್ಕಳದ ಸುಲ್ತಾನ್ ಸ್ಟ್ರೀಟ್‌ನಲ್ಲಿರುವ ದಾವತ್ ಸೆಂಟರ್‌ನಲ್ಲಿ ಸ್ಥಳೀಯ ಜಮಾಅತೆ ಇಸ್ಲಾಮಿ ಹಿಂದ್ ಹಾಗೂ ಸದ್ಭಾವನಾ ಮಂಚ್ ಜಂಟಿಯಾಗಿ ಆಯೋಜಿಸಿದ್ದ ಪ್ರವಾದಿ ಮುಹಮ್ಮದ್ ಅತ್ಯುತ್ತಮ ಮಾದರಿ ಎಂಬ ವಿಷಯದಲ್ಲಿ ನಡೆದ ವಿಚಾರಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಧರ್ಮವು ಮನುಷ್ಯನನ್ನು ಬದುಕಲು ಕಲಿಸುತ್ತದೆ. ಅದು ಒಂದು ಚೌಕಟ್ಟಿನಲ್ಲಿದ್ದು ಎಲ್ಲರನ್ನೂ ಪರಸ್ಪರ ಒಂದೂಗೂಡಿಸುತ್ತದೆ ಎಂದ ಅವರು, ಇಂದು ಸಮಾಜದಲ್ಲಿ ಪರಸ್ಪರರನ್ನು ಒಡೆಯುವ, ಒಂದು ಸಮಾಜ ಮತ್ತೂಂದು ಸಮಾಜವನ್ನು ಹತ್ತಿಕ್ಕುವ ಕಾರ್ಯ ನಡೆಯುತ್ತಿದ್ದು, ಎಲ್ಲರೂ ತಮ್ಮ ತಮ್ಮ ಧರ್ಮದ ಚೌಕಟ್ಟಿನಲ್ಲಿದ್ದುಕೊಂಡು ಬದುಕುವುದನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆ ಅಧ್ಯಕ್ಷ ಮುಜಾಹಿದ್ ಮುಸ್ತಫಾ ಅಧ್ಯಕ್ಷತೆ ವಹಿಸಿದ್ದರು. ಆಲ್ ಇಂಡಿಯಾ ಐಡಿಯಲ್ ಟೀಚರ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಎಂ.ಆರ್. ಮಾನ್ವಿ ಮಾತನಾಡಿ ಇಂದು ಮಹಾಪುರಷರ ಸಂದೇಶಗಳನ್ನು ಆಯಾಯ ಜಾತಿ, ವರ್ಗಕ್ಕೆ ಸೀಮಿತಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಪ್ರವಾದಿ ಮುಹಮ್ಮದ್ ಈ ಲೋಕ ಕಂಡ ದಾರ್ಶನಿಕರಾಗಿದ್ದು ಅವರ ಸಂದೇಶ ಸರ್ವಕಾಲಿಕ ಸತ್ಯ ಮತ್ತು ಎಲ್ಲರೂ ಅನುಸರಿಸಲು ಯೋಗ್ಯವಾಗಿದೆ ಎಂದರು.
ಜಮಾಅತೆ ಇಸ್ಲಾಮಿ ಹಿಂದ್ ಉತ್ತರ ಕನ್ನಡ ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪಾ, ಸದ್ಭಾವನಾ ಮಂಚ್‌ನ ಗೌರವಾಧ್ಯಕ್ಷ ಮೌಲಾನಾ ಮುನವ್ವರ್ ಪೇಶ್ ಮಾಮ್ ಮಾತನಾಡಿದರು.
ನಾಮಧಾರಿ ಸಮಾಜದ ಗೌರವಾಧ್ಯಕ್ಷ ಎಂ.ಆರ್. ನಾಯ್ಕ, ಕಾಂಗ್ರೆಸ್ ಮುಖಂಡ ಮಾಬಲೇಶ್ವರ ನಾಯ್ಕ, ಮೌಲಾನಾ ಸೈಯ್ಯದ್ ಝುಬೇರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಪ್ರೊ| ರವೂಫ್ ಅಹಮದ್ ಸವಣೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.