Advertisement
ರಾಜ್ಯದಲ್ಲಿ ವೈದ್ಯರ ಮೇಲಿನ ಹಲ್ಲೆ ಕುರಿತು ಪ್ರತ್ಯೇಕ ಕಾನೂನು ಜಾರಿಯಾಗಿ ದಶಕ ಕಳೆದಿದೆ. ಈ ಪೈಕಿ ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳ ಸಂಖ್ಯೆ 250ಕ್ಕೂ ಅಧಿಕ. ಆದರೆ, ಇದರಲ್ಲಿ ಶಿಕ್ಷೆಗೊಳಗಾದವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಈ ಮಧ್ಯೆ ರಾಜ್ಯದಲ್ಲಿ 2009ರಲ್ಲಿ ಪ್ರತ್ಯೇಕ ಕಾನೂನು ಜಾರಿಯಾದರೂ ವರ್ಷದಿಂದ ವರ್ಷಕ್ಕೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೆ ಮುಖ್ಯ ಕಾರಣ, ಸೂಕ್ತ ರೀತಿಯಲ್ಲಿ ಕಾನೂನು ಜಾರಿಯಾಗದಿರುವುದು ಎಂದು ಭಾರತೀಯ ವೈದ್ಯಕೀಯ ಸಂಘದ ಆರೋಪ.
Related Articles
Advertisement
ಕುಸಿತ: ವೈದ್ಯರ ಮೇಲಿನ ಹಲ್ಲೆ ಪ್ರವೃತ್ತಿ ಮುಂದೊಂದು ದಿನ ವೈದ್ಯರೊಳಗಿನ ಸೇವಾ ಮನೋಭಾವವನ್ನೇ ಮರೆಸುತ್ತದೆ ಎನ್ನುವುದು ಹಿರಿಯ ವೈದ್ಯರ ಅನಿಸಿಕೆ. ಮೆಟ್ರೋ ನಗರಗಳಲ್ಲೇ ವೈದ್ಯರಿಗೆ ರಕ್ಷಣೆ ಇಲ್ಲದ ವಾತಾವರಣವಿದೆ. ಇನ್ನು ತಾಲೂಕು, ಹಳ್ಳಿ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ವೈದ್ಯರು ಯಾವ ಧೈರ್ಯದ ಮೇಲೆ ಕಾರ್ಯ ನಿರ್ವಹಿಸಬೇಕು ಎಂಬ ಪ್ರಶ್ನೆ ತಲೆದೂರಿದ್ದು, ವೈದ್ಯಕೀಯ ವಿದ್ಯಾರ್ಥಿಗಳು ಕಡ್ಡಾಯ ಗ್ರಾಮೀಣ ಸೇವೆಯಿಂದ ದೂರ ಉಳಿಯುತ್ತಿದ್ದಾರೆ ಎಂಬುದು ಐಎಂಎ ವೈದ್ಯರ ಅಭಿಪ್ರಾಯ.
ಆರೋಪಿಗಳು ಪಾರು: ಇನ್ನು, ವೈದ್ಯರ ಮೇಲೆ ನಿಂದನೆ, ಬೆದರಿಕೆಯಂತಹ ಸಾವಿರಾರು ಪ್ರಕರಣಗಳಿವೆ. ಹಲ್ಲೆ, ಬೆದರಿಕೆ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದರೆ ಸದ್ಯ ಇರುವ ಕಾನೂನಿನಡಿ ಜಾಮೀನು ಪಡೆದು ಹೊರಬರುತ್ತಾರೆ. ಕೆಲವು ಬಾರಿ ರಾಜಕಾರಣಿಗಳು ಮತ್ತಿತರರಿಂದ ಲಾಬಿ ಮಾಡಿಸಿ ಹೊರಬರುತ್ತಾರೆ ಎಂದು ವೈದ್ಯರು ಹೇಳುತ್ತಾರೆ.
13,556 ಮಂದಿಗೆ ಒಬ್ಬ ಸರ್ಕಾರಿ ವೈದ್ಯ: ರಾಷ್ಟ್ರೀಯ ಆರೋಗ್ಯ ವರದಿ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ 13,556 ಜನಕ್ಕೆ ಒಬ್ಬ ಸರ್ಕಾರಿ ವೈದ್ಯರಿದ್ದಾರೆ. ಹಲ್ಲೆ ಪ್ರಕರಣಗಳು ಸರ್ಕಾರಿ ಸೇವೆಗೆ ಬರಲು ವೈದ್ಯರು ಹಿಂದೇಟು ಹಾಕಲು ಕಾರಣ ಎಂಬ ಮಾತುಗಳಿವೆ.
ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳಲ್ಲಿ ಶಿಕ್ಷೆಯಾಗಿರುವುದು ತೀರ ಕಡಿಮೆ. ಹಲ್ಲೆ ಮಾಡಿದವರು ಪ್ರಭಾವಿಗಳು, ರಾಜಕಾರಣಿಗಳಿಂದ ಲಾಬಿ ಮಾಡಿಸುತ್ತಾರೆ. ಸದ್ಯ ಆರೋಪಿಗೆ ಜಾಮೀನು ಲಭ್ಯವಿರುವುದರಿಂದ ವೈದ್ಯರು ಕೂಡ ಕೋರ್ಟ್ ಅಲೆದಾಟ ಯಾಕೆ ಎಂದು ರಾಜಿ ಮಾಡಿಕೊಳ್ಳುತ್ತಿದ್ದಾರೆ. ವೈದ್ಯರ ಮೇಲಿನ ಹಲ್ಲೆಗೆ ಏಳು ವರ್ಷದ ಜಾಮೀನು ರಹಿತ ಶಿಕ್ಷೆ ಜಾರಿಯಾಗಬೇಕು.-ಎಸ್.ಶ್ರೀನಿವಾಸ. ಕಾರ್ಯದರ್ಶಿ, ಭಾರತೀಯ ವೈದ್ಯಕೀಯ ಸಂಘ, ರಾಜ್ಯ ಘಟಕ * ಜಯಪ್ರಕಾಶ್ ಬಿರಾದಾರ್