ಮಂಗಳೂರು: ಮಂಗಳೂರಿನಿಂದ ಕೇರಳ ಕಡೆಗೆ ಮೀನು ಸಾಗಾಟ ನಡೆಸುತ್ತಿದ್ದ ಟೆಂಪೋ ವಾಹನದಲ್ಲಿ ತಾಂತ್ರಿಕ ದೋಷದಿಂದ ಟಯರ್ ಕಳಚಿ ಬಸ್ಸಿಗೆ ಗುದ್ದಿ ಅಪಘಾತ ಸಂಭವಿಸಿದ ಘಟನೆ ಇಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ಸೋಮೇಶ್ವರ ಬಳಿಯ ಉಚ್ಚಿಲ ಎಂಬಲ್ಲಿ ನಡೆದಿದೆ. ಪಿಕಪ್ ಚಾಲಕ ಹಾಗೂ ಕ್ಲೀನರ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಉಚ್ಚಿಲ ಸಮೀಪ ಬಸ್ಸನ್ನು ಓವರ್ ಟೇಕ್ ಮಾಡುವ ಸಂದರ್ಭ ಟೆಂಪೋ ವಾಹನದ ಟಯರ್ ಕಳಚಿದ ಪರಿಣಾಮ ಸಂಪೂಣ೯ ತಿರುಗಿ ಬಸ್ಸಿಗೆ ಢಿಕ್ಕಿ ಹೊಡೆದು ಮಗುಚಿಬಿದ್ದಿದೆ. ಕೂಡಲೇ ಸ್ಥಳೀಯರು ಸ್ಥಳಕ್ಕಾಗಮಿಸಿ ಚಾಲಕ ಹಾಗೂ ಕ್ಲೀನರ್ನನ್ನು ವಾಹನದಿಂದ ಹೊರತೆಗೆಯುವಲ್ಲಿ ಸಹಕರಿಸಿದರು.
ಸಾಮಾನ್ಯವಾಗಿ ಮೀನಿನ ವಾಹನಗಳು ಅಪಘಾತಕ್ಕೀಡಾದಲ್ಲಿ ಗಾಯಾಳುಗಳನ್ನು ರಕ್ಷಿಸುವ ಬದಲು ರಸ್ತೆಗೆ ಬಿದ್ದ ಮೀನು ಕೊಂಡೊಯ್ಯಲು ಜನ ಮುಗಿಬೀಳುತ್ತಾರೆ. ಆದರೆ ಉಚ್ಚಿಲದಲ್ಲಿ ನಡೆದ ಘಟನೆ ಮಾನವೀಯತೆಗೆ ಸಾಕ್ಷಿಯಾಯಿತು, ಅಪಘಾತಕ್ಕೀಡಾದ ವಾಹನದ ಬಳಿ ಬಂದ ಉಚ್ಚಿಲದ ಶ್ರೇಯ ಸಂಗಮ ಮತ್ತು ಮುಬಾರಕ್ ಸಂಘಟನೆ ಕಾರ್ಯಕರ್ತರು ಹಾಗೂ ಸ್ಥಳೀಯರು ಜತೆ ಸೇರಿ ಬಿದ್ದ ಮೀನುಗಳನ್ನು ಇನ್ನೊಂದು ವಾಹನಕ್ಕೆ ತುಂಬಿಸಿ ಮತ್ತೆ ಟೆಂಪೋ ಮಾಲೀಕರಿಗೆ ಹಸ್ತಾಂತರಿಸಿ ಕೇರಳ ಕಡೆಗೆ ಸಾಗಿಸಲು ಅನುವು ಮಾಡಿಕೊಟ್ಟರು. ಇವರೊಂದಿಗೆ ಸಹಕರಿಸಿದ ಸೋಮೇಶ್ವರ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್ ಇವರು ಮೀನಿನ ತೈಲ ರಸ್ತೆಯಲ್ಲಿ ಬಿದ್ದುದರಿಂದ ವಾಹನ ಸವಾರರಿಗೆ ತೊಂದರೆಯಾಗದ ರೀತಿಯಲ್ಲಿ ಟ್ಯಾಂಕರ್ ಮೂಲಕ ನೀರು ಹಾಯಿಸಿ ಶುಚಿಗೊಳಿಸುವ ಮೂಲಕ ಸಹಕರಿಸಿದರು.
ಈ ಅಪಘಾತದ ದೃಶ್ಯ ರಾಜೇಶ್ ಉಚ್ಚಿಲ್ ಅವರ ಮನೆ ಮುಂಭಾಗದ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಈ ಅಪಘಾತ ಹೇಗೆ ಸಂಭವಿಸಿತು ಎನ್ನುವುದಕ್ಕೆ ಸಾಕ್ಷಿಯಾಗಿದೆ.
– ಸಿಸಿಟಿವಿ ದೃಶ್ಯ ಕೃಪೆ: ರಾಜೇಶ್ ಉಚ್ಚಿಲ್
– ಚಿತ್ರ-ಸುದ್ದಿ ಮಾಹಿತಿ: ವಸಂತ ಕೋಣಾಜೆ