ಬೀಜಿಂಗ್: ಹಲವು ವರ್ಷಗಳ ಕಾಲ ಕ್ಯಾನ್ಸರ್ ಜೊತೆ ಹೋರಾಟ ನಡೆಸಿದ ಚೀನದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಲಿಯು ಕ್ಸಿಯಾಬೋ(61) ಅವರು ಗುರುವಾರ ನಿಧನರಾದರು. ಕೊನೆಯ ದಿನಗಳನ್ನಾದರೂ ಅವರು ಸ್ವತಂತ್ರರಾಗಿ, ವಿದೇಶದಲ್ಲಿ ಕಳೆಯಲಿ ಎಂದು ಅಂತಾರಾಷ್ಟ್ರೀಯ ಮಟ್ಟದಿಂದ ಭಾರೀ ಒತ್ತಡ ಬಂದರೂ, ಚೀನ ಮಣಿದಿರಲಿಲ್ಲ. ಹೀಗಾಗಿ, ಅವರು ಕಸ್ಟಡಿಯಲ್ಲೇ ಕೊನೆಯುಸಿರೆಳೆಯಬೇಕಾಯಿತು.
ಯಕೃತ್ತು ಕ್ಯಾನ್ಸರ್ ಕೊನೇ ಹಂತಕ್ಕೆ ಬಂದಿದ್ದರಿಂದ ಅವರನ್ನು ತಿಂಗಳ ಹಿಂದೆಯಷ್ಟೇ ಜೈಲಿನಿಂದ ಅತಿಭದ್ರತೆಯ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಕಳೆದ 3 ದಿನಗಳ ಹಿಂದೆ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಪ್ರತಿರೋಧದ ಧ್ವನಿಯೆತ್ತುವವರನ್ನು ಶಿಕ್ಷಿಸುವ ಚೀನದ ಕಟು ಹೃದಯಕ್ಕೆ ಲಿಯು ಬಲಿಯಾದರು. ಅವರ ಸಾವು ಸರಕಾರದ ವಿರುದ್ಧ ಮಾತಾಡುವವರ ಧ್ವನಿಯನ್ನು ಹತ್ತಿಕ್ಕಿದೆ ಎಂದು ಬಣ್ಣಿಸಲಾಗುತ್ತಿದೆ.
2008ರಲ್ಲಿ ಬಂಧನ: ಚೀನದ ರಾಜಕೀಯ ವ್ಯವಸ್ಥೆಯಲ್ಲಿ ಸುಧಾರಣೆ, ಮಾನವ ಹಕ್ಕುಗಳ ರಕ್ಷಣೆಗೆ ಕೋರಿ 2008ರಲ್ಲಿ ಲಿಯು ಅರ್ಜಿಯೊಂದನ್ನು ಬರೆದಿದ್ದರು. ಇದಕ್ಕೆ ಪ್ರತಿಯಾಗಿ ಅವರನ್ನು ಬಂಧಿಸಲಾಗಿತ್ತು. 2009ರ ಡಿಸೆಂಬರ್‌ನಲ್ಲಿ 11 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಶಿಕ್ಷೆಯ ಅವಧಿಯಲ್ಲೇ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ದಕ್ಕಿತ್ತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲಿಯು ಗೈರಾಗಿದ್ದ ಕಾರಣ ಸಾಂಕೇತಿಕವಾಗಿ ‘ಖಾಲಿ ಕುರ್ಚಿ’ಯನ್ನು ಇಡಲಾಗಿತ್ತು.
ಪ್ರಶ್ನೋತ್ತರ ಡಿಲೀಟ್: ಈ ಎಲ್ಲ ಬೆಳವಣಿಗೆಗಳ ನಡುವೆಯೇ, ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಲಿಯು ಕ್ಸಿಯಾಬೋ ಅವರಿಗೆ ಸಂಬಂಧಿಸಿ ಅಪ್‌ಲೋಡ್ ಮಾಡಲಾಗಿದ್ದ ಎಲ್ಲ ಪ್ರಶ್ನೋತ್ತರಗಳನ್ನು ಗುರುವಾರ ಚೀನ ವಿದೇಶಾಂಗ ಇಲಾಖೆ ತೆಗೆದುಹಾಕಿದೆ. ಈ ಬಗ್ಗೆ ಪ್ರಶ್ನಿಸಿದಾಗ ಇಲಾಖೆ ವಕ್ತಾರ ಗೆಂಗ್, ‘ಆನ್‌ಲೈನ್‌ನಲ್ಲಿ ಏನನ್ನು ಹಾಕಬೇಕು, ಏನನ್ನು ಹಾಕಬಾರದು ಎಂಬುದನ್ನು ನಿರ್ಧರಿಸುವ ಹಕ್ಕು ನಮಗಿದೆ’ ಎಂದಿದ್ದಾರೆ.
ಶಾಂತಿ ನೊಬೆಲ್ ಪುರಸ್ಕೃತ ಲಿಯು ಅವರ ಸಾವಿಗೆ ಚೀನವೇ ಹೊಣೆ. ಅವರನ್ನು ಸರಿಯಾದ ಸಮಯಕ್ಕೆ ಬೇರೆಡೆಗೆ ವರ್ಗಾಯಿಸಿ ಸೂಕ್ತ ಚಿಕಿತ್ಸೆ ಕೊಡುವಲ್ಲಿ ಚೀನ ಸರಕಾರ ವಿಫಲವಾಗಿರುವುದು ನೋವಿನ ಸಂಗತಿ.
– ಬೆರಿಟ್ ರೈಸ್ ಆ್ಯಂಡರ್ಸನ್, ನೊಬೆಲ್ ಸಮಿತಿ ಮುಖ್ಯಸ್ಥ