ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್‌ಗೆ (ಈಗಿನ ಎಕ್ಸ್) ಪೈಪೋಟಿ ನೀಡಲು ಅಸ್ತಿತ್ವಕ್ಕೆ ಬಂದಿದ್ದ ದೇಶಿಯ ಸಾಮಾಜಿಕ ಜಾಲತಾಣವಾದ ‘ಕೂ’ ಅನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದಾಗಿ ಕಂಪೆನಿಯ ಸಂಸ್ಥಾಪಕರು ಅಧಿಕೃತ ಹೇಳಿಕೆ ನೀಡಿದ್ದಾರೆ.
ಟ್ವಿಟರ್ ಗೆ ಪರ್ಯಾಯವಾಗಿ ಕಳೆದ ನಾಲ್ಕು ವರ್ಷದ ಹಿಂದೆ ಅಸ್ತಿತ್ವಕ್ಕೆ ತಂದಿದ್ದ ಕೂ ಆ್ಯಪ್ ಆರಂಭದಲ್ಲಿ 20 ಲಕ್ಷ ದೈನಂದಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಂತೆ 1 ಕೋಟಿ ಮಾಸಿಕ ಬಳಕೆದಾರರನ್ನು ಹೊಂದಿತ್ತು ಎನ್ನಲಾಗಿದೆ. ಅಲ್ಲದೆ ಈ ಆ್ಯಪ್ ನಲ್ಲಿ ಕನ್ನಡ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿ ಬಳಕೆದಾರರರನ್ನು ಹೊಂದಿತ್ತು ಆದರೆ ಬಳಕೆದಾರರನ್ನು ಉಳಿಸಿಕೊಳ್ಳುವಲ್ಲಿ ‘ಕೂ’ ವಿಫಲವಾಗಿದೆ.
ಇದಾದ ಬಳಿಕ 5 ಬಿಲಿಯನ್ ಡಾಲರ್ ಮೌಲ್ಯಕ್ಕೆ ಕೂ ಅನ್ನು ಮಾರಾಟ ಮಾಡುವ ಕುರಿತು ಮಾತುಕತೆ ಕೂಡ ನಡೆದಿತ್ತು ಆದರೆ ಕೊನೆಯಲ್ಲಿ ಈ ಮಾತುಕತೆ ಕೂಡ ವಿಫಲವಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರು ಹೇಳಿಕೊಂಡಿದ್ದಾರೆ.
ಕೂ ಆ್ಯಪ್ ಸ್ವಾಧೀನದ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೆಯುತ್ತಿತ್ತು ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಕೂ ಕಂಪನಿಯ ಸಹ-ಸಂಸ್ಥಾಪಕ ಮಯಾಂಕ್ ಬಿಡವಟ್ಕಾ ಅವರು ಇತ್ತೀಚೆಗೆ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದು, ನಾವು ಅನೇಕ ದೊಡ್ಡ ಇಂಟರ್ನೆಟ್ ಕಂಪನಿಗಳು, ಮಾಧ್ಯಮ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿದ್ದೇವೆ ಆದರೆ ನಾವು ಬಯಸಿದ ಫಲಿತಾಂಶ ಸಿಗಲಿಲ್ಲ ಹಾಗಾಗಿ ಕೊನೆಗೆ ಈ ನಿರ್ಧಾರಕ್ಕೆ ಬರಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.
2020ರಲ್ಲಿ ಉದ್ಯಮಿಗಳಾದ ಅಪ್ರಮೇಯ ರಾಧಾಕೃಷ್ಣ ಹಾಗೂ ಮಯಾಂಕ್ ಬಿಡವಟ್ಕಾ ಎಂಬುವವರು ‘ಕೂ’ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದರು ಅಷ್ಟು ಮಾತ್ರವಲ್ಲದೆ ಹತ್ತು ಭಾಷೆಗಳಲ್ಲಿ ಬಳಕೆದಾರರಿಗೆ ಲಭ್ಯವಾಗುತ್ತಿತ್ತು. ಹಳದಿ ಬಣ್ಣದ ಹಕ್ಕಿಯ ಲೋಗೊ ಹೊಂದಿತ್ತು. ಇಲ್ಲಿಯವರೆಗೆ ಈ ಅಪ್ಲಿಕೇಶನ್ 60 ಮಿಲಿಯನ್ ಅಂದರೆ 6 ಕೋಟಿಗೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿದೆ ಎಂದು ಹೇಳಲಾಗಿದೆ.
‘ಕೂ’ ಪ್ರತಿ ತಿಂಗಳು 10 ಮಿಲಿಯನ್ ಸಕ್ರಿಯ ಬಳಕೆದಾರರು, 2.1 ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರು, ಪ್ರತಿ ತಿಂಗಳು 10 ಮಿಲಿಯನ್ ಪೋಸ್ಟ್‌ಗಳು ಮುಖ್ಯವಾಗಿ ಕೂ ಅಪ್ಲಿಕೇಶನ್‌ನಲ್ಲಿ 9 ಸಾವಿರಕ್ಕೂ ಹೆಚ್ಚು ವಿಐಪಿ ಖಾತೆಗಳು ಇದ್ದವು ಎಂದು ಕಂಪನಿಯ ಸಹ-ಸಂಸ್ಥಾಪಕರು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು