Advertisement

ಪುಟ್ಟ ಕತೆ: ಪದಗಳು, ಖಾಲಿಗಳು

08:20 AM Feb 25, 2018 | Team Udayavani |

ಶಾಲೆಯಲ್ಲಿ ವಾರದ ಕೊನೆಯ ದಿನ ಪ್ರಬಂಧವನ್ನು ಓದಬೇಕಿತ್ತು. ಪ್ರಬಂಧ ಬರೆಯುವುದು ಹೇಗೆ, ಯಾರಾದರೂ ಹಿರಿಯರಲ್ಲಿ ಬರೆಸೋಣ ಎಂದು ನಮ್ಮ ಈ ಕಥಾನಾಯಕ ಬಗೆದ. ಇವತ್ತಲ್ಲ, ನಾಳೆ ಬರೆಸಿದರಾಯಿತು ಎಂದು ನಿರ್ಧರಿಸಿದ, ಸಹಜವಾಗಿ. 

Advertisement

 ಹಾಗೂಹೀಗೂ ಮುನ್ನಾದಿನ ಸಂಜೆಯವರೆಗೂ ಕ್ಷಣಗಳನ್ನು ಮುಂದೂಡಿದ. ಸಂಜೆ ಆಟದ ಪೀರಿಯೆಡ್‌ ಮುಗಿಯಿತು. ಇನ್ನೇನು ಜನಗಣಮನ ಹಾಡಿಯೂ ಆಯಿತು. ಎಲ್ಲರೂ ಶಾಲೆಯಿಂದ ಹೊರಗೆ ಧಾವಿಸಿ ಮನೆಯ ದಾರಿ ಹಿಡಿದರು. ಇವನು, ಒಂದು ಹಾಳೆಯ ತಲೆಯಲ್ಲಿ ಪ್ರಬಂಧದ ಶೀರ್ಷಿಕೆಯನ್ನು ಗೀಚಿ, ಯಾರಾದರೂ ಅದರ “ದೇಹವನ್ನು’ ಬರೆದುಕೊಡ “ಬಲ್ಲವರು’ ಇದ್ದಾರೆಯೇ ಎಂದು ಅತ್ತಿತ್ತ ಹುಡುಕಾಡಿದ. 

ಸಮಾಜದ ಮೇಷ್ಟ್ರ ಬಳಿ ಹೋಗಿ, “ಸರ್‌, ಒಂದು ಪ್ರಬಂಧ ಬರೆದುಕೊಡಿ’ ಎಂದು ಕೇಳಿದರೆ, “ನೀನು ಲಾಸ್ಟ್‌  ಮೂಮೆಂಟ್‌ವರೆಗೆ ಎಲ್ಲಿಗೆ ಹೋಗಿದ್ದೆ? ಈಗ ನನಗೆ ಪುರುಸೊತ್ತಿಲ್ಲ, ನಡಿ’ ಎಂದು ಬೈದು ಅವನನ್ನು ಓಡಿಸಿದರು.

ಮನೆಗೆ ಹೋಗಿ ನೆರೆಮನೆಯ ಮೀನಾಳಲ್ಲಿ ಕೇಳಿದ. ಅವಳು ಫೈನಲ್‌ ಇಯರ್‌ ಎಂ.ಎ. ಓದುತ್ತಿದ್ದಳು. “”ನನಗೆ ನಾಳೆ ಎಕ್ಸಾಮ್‌ ಇದೆ. ಟೈಮಿಲ್ಲ” ಎಂದಳು.

ಇವನು ನೇರವಾಗಿ ಅಮ್ಮನ ಬಳಿಗೆ ಬಂದು “ಬರೆದುಕೊಡು’ ಎಂದು ಹಾಳೆಯೊಡ್ಡಿದ. ಅವಳು ನಕ್ಕಳು.
ಎರಡು ಖಾಲಿ ಪುಟಗಳನ್ನು ಹಿಡಿದು ಎಲ್ಲ ಕಡೆ ಅಲೆದರೂ ಪ್ರಯೋಜನವಿಲ್ಲ. ತಾನೇ ಏನಾದರೂ ಬರೆದು ಬಿಡುವುದೆಂದು ಯೋಚಿಸಿದ. ರಾತ್ರಿಯಾಯಿತು. “ಬೆಳಗ್ಗೆ ಬೇಗ ಎಬ್ಬಿಸು’ ಎಂದು ಅಮ್ಮನಲ್ಲಿ  ಹೇಳಿ ಚಾಪೆ ಬಿಡಿಸಿ ಮಲಗಿದ.

Advertisement

ಬೆಳಗ್ಗೆ ಅಮ್ಮ ಎಬ್ಬಿಸಿದಳು. ಕಣ್ಣುಜುತ್ತ ಎದ್ದ. ಏನಾದರೂ ಬರೆಯೋಣ ಎಂದು ಕುಳಿತ. ಏನೂ ಹೊಳೆಯಲಿಲ್ಲ. ಇನ್ನೇನು ಕೆಲವೇ ಗಂಟೆಗಳಲ್ಲಿ ಶಾಲೆಯಲ್ಲಿ ಪ್ರಬಂಧ ಓದಬೇಕು. ಏನು ಮಾಡುವುದು!  ಏನಾದರಾಗಲಿ ಎಂದು ತಿಳಿದ ಒಂದಷ್ಟು ಪದಗಳನ್ನು ಹಾಳೆಯ ಮೇಲೆ ಇಟ್ಟ. ತಿಳಿಯದ ಕಡೆ ಹಾಗೇ ಜಾಗ ಬಿಟ್ಟ.

ಪದಗಳು ಸ್ವಲ್ಪ , ಇನ್ನು ಸ್ವಲ್ಪ ಖಾಲಿಗಳು !
ಒಂದಿಷ್ಟು ಶಬ್ದಗಳು, ಒಂದಷ್ಟು ನಿಶ್ಶಬ್ದಗಳು! 
ಮಾತುಗಳು, ಮಾತುಗಳಿಗೆ ಅರ್ಥ ತುಂಬುವ ಮೌನಗಳು!
ಅಷ್ಟು ವ್ಯಾಕರಣ, ಇಷ್ಟು ಅಂತಃಕರಣ.
.
ಪ್ರಬಂಧ ರೆಡಿಮಾಡಿದ ಖುಷಿಯಲ್ಲಿ ಶಾಲೆಗೆ ಹೋದ.
ನೋಟ್ಸ್‌ ಪುಸ್ತಕದ ಮಧ್ಯದಲ್ಲಿಟ್ಟಿದ್ದ  ಹಾಳೆಯನ್ನು ಹುಡುಕಾಡಿದ. ಸಿಕ್ಕಿತು. ತೆರೆದ.
ಛೆ ! ನೋಡಿದರೆ ಅದರಲ್ಲಿ  ಪ್ರಬಂಧವಿರಲಿಲ್ಲ.
ಒಂದು ಸುಂದರ ಕವನವಿತ್ತು. ಅದನ್ನೇ ಹಾಡಿದ. 
ಬಹುಮಾನ ಬಂತೋ ಗೊತ್ತಿಲ್ಲ; ಬಾರದಿದ್ದರೂ ಅಡ್ಡಿಯಿಲ್ಲ ಎಂಬ ಸಂತೃಪ್ತಿ ಭಾವ ಮಾತ್ರ ಅವನಲ್ಲಿ ಎದ್ದು 
ತೋರುತ್ತಿತ್ತು.

ಪಾರ್ಥ

Advertisement

Udayavani is now on Telegram. Click here to join our channel and stay updated with the latest news.

Next