Advertisement

ಫಿಲಿಪ್‌ ದ್ವೀಪದಲ್ಲಿ ಪುಟ್ಟ ಪೆಂಗ್ವಿನ್‌ಗಳು

06:00 AM Jun 03, 2018 | Team Udayavani |

ಪೆಂಗ್ವಿನ್‌ ನೋಡºಹುದಾ?” ಪುಟ್ಟ ಭರತ ಥಕಥಕ ಕುಣಿದಿದ್ದ. ಅವನ ಅಕ್ಕ ಭೂಮಿ ಹೇಳಿದ್ದಳು. “”ಅದೇನು ಮೈಸೂರು ಜೂನಲ್ಲೇ ನೋಡಿಲ್ವಾ , ಮೆಲ್ಬೊರ್ನ್ ಜೂನಲ್ಲೂ ನಿನ್ನೆಯಷ್ಟೆ ನೋಡಿದ್ದೀವಲ್ಲ!”. ಒಂದು ವಾರದ ಮೆಲ್ಬೊರ್ನ್ ಪ್ರವಾಸದಲ್ಲಿ ಮೊದಲ ಹತ್ತು ಆಕರ್ಷಕ-ಪ್ರಸಿದ್ಧ ತಾಣಗಳಲ್ಲಿ ನಮ್ಮ ಚಕ್ರ ಕಟ್ಟಿಕೊಂಡ ಕಾಲುಗಳಿಗೆ ಇದ್ದದ್ದು ಇನ್ನೊಂದೇ ತಾಣ. ಅದೆಂದರೆ ಫಿಲಿಪ್‌ ಐಲ್ಯಾಂಡ್‌. ಫಿಲಿಪ್‌ ಐಲ್ಯಾಂಡ್‌ ಆಸ್ಟ್ರೇಲಿಯಾದ ಮೆಲ್ಬೊರ್ನ್ನ ವಿಕ್ಟೋರಿಯಾ ಜಿಲ್ಲೆಯಿಂದ ದಕ್ಷಿಣಕ್ಕೆ ಸುಮಾರು 140 ಕಿ.ಮೀ. ದೂರದಲ್ಲಿದೆ. ಹಿಂದೊಮ್ಮೆ ನಾನು ಮೆಲ್ಬೊರ್ನ್ಗೆ ಬಂದಿದ್ದರೂ ಮಕ್ಕಳನ್ನು ಕರೆತಂದಿಲ್ಲ ಎಂಬ ಕಾರಣಕ್ಕಾಗಿ ಫಿಲಿಪ್‌ ಐಲ್ಯಾಂಡ್‌ ತಪ್ಪಿಸಿಕೊಂಡಿ¨ªೆ. ಅದೂ ಅಲ್ಲದೆ ಆಸ್ಟ್ರೇಲಿಯಾದಲ್ಲಿದ್ದ ಗೆಳತಿ ಅಮಿತಾ, “”ಗುಬ್ಬಚ್ಚಿ ಥರಾ ಇರುತ್ತೆ, ಮತ್ತೆ ತುಂಬಾ ನಿರೀಕ್ಷೆ ಇಟ್ಟುಕೋಬೇಡಿ, ನಿರಾಸೆಯೇ ಆದೀತು” ಎಂದು ನಕ್ಕಿದ್ದೂ ಫಿಲಿಪ್‌ ಐಲ್ಯಾಂಡನ್ನು ಕೈ ಬಿಡಲು ಕಾರಣವಾಗಿತ್ತು. ಆದರೆ ಈ ಬಾರಿ ಮಕ್ಕಳೂ ಜೊತೆಗಿದ್ದುದರಿಂದ ಹೋಗದೇ ಬಿಡುವ ಚಾನ್ಸೇ ಇರಲಿಲ್ಲ. ಆದರೂ ನನಗೆ ಒಳಗೊಳಗೇ ಹೆದರಿಕೆ. ಮೊದಲೇ ಭೂಮಿ ಹೇಳಿದ್ದಂತೆ ಈ ಮಕ್ಕಳು ಸಾಕಷ್ಟು ಕಡೆ ಪೆಂಗ್ವಿನ್‌ ನೋಡಿದ್ದರು. ಯಾವುದೇ ಊರಿಗೆ ಹೋದರೂ ಅಲ್ಲಿದ್ದ “ಜೂ’ ಹುಡುಕಿ ನೋಡಿಯೇ ಇದ್ದರು. ಹಿಂದಿನ ದಿನವಷ್ಟೆ ಮೆಲ್ಬರ್ನ್ ಸೀ ಅಕ್ವೇರಿಯಂನಲ್ಲಿ ಪೆಂಗ್ವಿನ್‌ಗಳನ್ನು, ಅವುಗಳು ಮೊಟ್ಟೆಗೆ ಕಾವು ಕೊಡುವುದನ್ನೂ ನೋಡಿ, ತಾವು ನೋಡಿದ್ದ ಸಿನೆಮಾ ಹ್ಯಾಪ್ಪಿ ಫೀಟ್‌, ದಿ ಪೆಂಗ್ವಿನ್ಸ್‌ ಆಫ್ ಮಡಗಾಸ್ಕರ್‌, ಸಫ‌ರ್‌ ಈಸ್‌ ಅಪ್‌ (ಎಲ್ಲವೂ ಪೆಂಗ್ವಿನ್‌ಗಳ ಬಗ್ಗೆ) ನೆನಪಿಸಿಕೊಂಡಿದ್ದರೆ, ಅಷ್ಟಾಗಿ ಸಿನೆಮಾ ನೋಡದ ನಾನು “ಮಾರ್ಚ್‌ ಆಫ್ ಪೆಂಗ್ವಿನ್ಸ್‌’ ಎಂಬ ಡಾಕ್ಯುಮೆಂಟರಿ ನೋಡಿದ್ದನ್ನು  ಮೆಲುಕು ಹಾಕಿದ್ದೆ. ಅದರ ಬಗ್ಗೆ ಮಕ್ಕಳು ಕುತೂಹಲದಿಂದ ನೋಡಿದಷ್ಟೇ ಅಲ್ಲದೆ, ಗಂಟೆಗಟ್ಟಲೆ ಮಾತನಾಡಿದ್ದರು. ಭರತನಂತೂ “ಪೆಂಗ್ವಿನ್‌’ನಂತೆಯೇ ನಡೆದಾಡಲು, ಮುಖ ಮೇಲೆತ್ತಿ “ಕೊಂಯ್‌ ಕೊಂಯ್‌’ ಎಂದು ಮಾತನಾಡಲು ಹೋಗಿ ಅಕ್ಕನ ಹತ್ತಿರ ಬೈಸಿಕೊಂಡಿದ್ದ. ಇವೆಲ್ಲ ಕಾರಣಗಳಿಂದಲೇ ಭೂಮಿಗೆ “ಪುಟ್ಟ ಪೆಂಗ್ವಿನ್‌’ ಎಂದರೆ “”ಈ ಭರತನ ಹಾಗೆಯೇ” ಎನಿಸಿರಬಹುದು. ನನಗೆ ಸಹಜವಾಗಿ ಅಮಿತಾಳ “ತುಂಬಾ ನಿರೀಕ್ಷೆ ಬೇಡ, ಗುಬ್ಬಚ್ಚಿ ಥರಾನೇ ಇರುತ್ತೆ ಅಷ್ಟೆ’ ಅಂದಿದ್ದು ನೆನಪಾಗಿ “ಈ ಮಕ್ಕಳಿಗೆ ನಿರಾಸೆಯಾದರೆ’ ಎನ್ನಿಸಿತ್ತು.


    ಫಿಲಿಪ್‌ ದ್ವೀಪದಲ್ಲಿ ಪುಟ್ಟ ಪೆಂಗ್ವಿನ್‌ಗಳ ಪೆರೇಡ್‌ ನೋಡಲು ನೀವು ಹೋಗಬೇಕಾದ್ದು ಸಾಯಂಕಾಲದ ವೇಳೆಗೆ. ಆದರೆ, ಟಿಕೆಟ್‌ ಆನ್‌ಲೈನ್‌ ಮೂಲಕ ಸುಮಾರು ಮಧ್ಯಾಹ್ನದ ಹೊತ್ತಿಗಾಗಲೇ ಕಾದಿರಿಸಬೇಕು. ಮಧ್ಯಾಹ್ನವೇ ಫಿಲಿಪ್‌ ಐಲ್ಯಾಂಡ್‌ಗೆ ಹೋಗಿ ಚಾಕಲೇಟ್‌ ಫ್ಯಾಕ್ಟರಿ, ಸುತ್ತಲೂ ಇರುವ ಸಮುದ್ರ ದಂಡೆ ಸುತ್ತಾಡಬಹುದು. ಮಧ್ಯಾಹ್ನದ ಹೊತ್ತಿಗಾಗಲೇ ಜೋರಾಗಿ ಬೀಸುತ್ತಿದ್ದ ಗಾಳಿ ಬಹುಜನರ ಹ್ಯಾಟು-ಶಾಲುಗಳನ್ನು ತನ್ನೊಡನೆ ಹೊತ್ತೂಯ್ಯುತ್ತಿತ್ತು. ಕೂದಲು-ಕಣ್ಣು ಎಲ್ಲವೂ ಮರಳುಮಯ.

Advertisement

    “ಪೆಂಗ್ವಿನ್‌ ಪೆರೇಡ್‌’ಗೆಂದೇ ಬಂದಿರುವಾಗ ಅಲ್ಲಿಯೇ ಇರುವ ಪೆಂಗ್ವಿನ್‌ ಕೇಂದ್ರದೊಳಗೇ ಕುಳಿತು ಏಕೆ ಸಮಯ ಕಳೆಯಬಾರದು ಎಂದು ಯೋಚಿಸಿ ಅಲ್ಲಿಗೇ ನಡೆದೆವು. ಅಲ್ಲಿದ್ದದ್ದು ಪೆಂಗ್ವಿನ್‌ಗಳ ಜೀವನದ ಬಗ್ಗೆ, ಫಿಲಿಪ್‌ ದ್ವೀಪದ ಕುರಿತು ಮಾಹಿತಿಯ ಮಹಾಪೂರ. 

ಬುನುರಾಂಗ್‌ !
ಫಿಲಿಪ್‌ ದ್ವೀಪಕ್ಕೆ ಫಿಲಿಪ್‌ ಎಂಬ ಹೆಸರು ಬಂದದ್ದು ನ್ಯೂಸೌತ್‌ವೇಲ್ಸ್‌ನ ಮೊದಲ ಗವರ್ನರ್‌ ಅರ್ಥರ್‌ ಫಿಲಿಪ್‌ನಿಂದ. ನಾವಂದುಕೊಂಡಿದ್ದಂತೆ ಯಾರೋ ಫಿಲಿಪ್‌ ಎಂಬುವವನು ಕಂಡುಹಿಡಿದ ದ್ವೀಪ ಎಂಬುದರಿಂದ ಅಲ್ಲ. ಇಲ್ಲಿನ ಮೂಲನಿವಾಸಿಗಳು “ಬುನುರಾಂಗ್‌’ ಎಂಬ ಆದಿವಾಸಿ ಜನಾಂಗ. 1798ರಲ್ಲಿ ಈ ಮೂಲನಿವಾಸಿಗಳು ಯೂರೋಪಿಯನ್ನರೊಂದಿಗೆ ಸಂಪರ್ಕ ಹೊಂದಿದ್ದರು. ಯೂರೋಪಿಯನ್ನರು ಜೋಳ-ಗೋಧಿ ಯನ್ನು ಇಲ್ಲಿ ಬಿತ್ತಲು ಪ್ರಯತ್ನಿಸಿದವರಾದರೂ “ಬುನುರಾಂಗ್‌’ ಜನ ಅದಕ್ಕೆ ಅವಕಾಶ ನೀಡಲಿಲ್ಲ. ಕ್ರಮೇಣ ಅವರನ್ನು “ವಿಧವಿಧ’ವಾಗಿ ಗೆದ್ದ ಯೂರೋಪಿಯನ್ನರು ಇಲ್ಲಿ ಜಿಂಕೆ, ವಾಲಾಬಿಗಳು, ಕಾಂಗರೂ, ನಾಯಿಗಳು ಮೊದಲಾದ ಪ್ರಾಣಿಗಳನ್ನು ಬಿಟ್ಟರು.    ಪುಟ್ಟ ಪೆಂಗ್ವಿನ್‌ಗಳು ಜಗತ್ತಿನ ಅತಿ ಚಿಕ್ಕ ಪೆಂಗ್ವಿನ್‌ಗಳು. ಸುಮಾರು 30-40 ಸೆಂ.ಮೀ. ಉದ್ದದ ಇವು ದಕ್ಷಿಣ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ಗಳಲ್ಲಿ ಕಂಡುಬರುತ್ತವೆ. ಇವುಗಳನ್ನು “ಫೇರಿ ಪೆಂಗ್ವಿನ್‌’ ಎನ್ನಲಾಗುತ್ತದೆ. ಫಿಲಿಪ್‌ ದ್ವೀಪದಲ್ಲಿ ಇವುಗಳ ಅತಿ ದೊಡ್ಡ ಕಾಲೋನಿ ಇದೆ. 1920ರಿಂದ ಇದನ್ನು ಸಂರಕ್ಷಿಸಲು ಪ್ರಯತ್ನ ನಡೆಯುತ್ತಿದೆ. ಸುಮಾರು 70,000 ಪೆಂಗ್ವಿನ್‌ಗಳ ಕಾಲೊನಿ ಇದು. 1986ರಿಂದ ಇದೊಂದು ಪೆಂಗ್ವಿನ್‌ಗಳ ಬಗೆಗೆ ಅರಿವು-ಎಚ್ಚರ ಮೂಡಿಸುವ ಪ್ರವಾಸಿ ತಾಣವಾಗಿದೆ. ತೈಲಸೋರಿಕೆ, ಮೀನುಗಾರಿಕೆ, ಮಾಂಸಕ್ಕಾಗಿ ಕೊಲ್ಲುವಿಕೆ, ಪ್ಲಾಸ್ಟಿಕ್‌ ಮಾಲಿನ್ಯ ಇವು ಪೆಂಗ್ವಿನ್‌ಗಳು ಹೆದರುವ ಪ್ರಕೃತಿಯ ಸಹಜ ಶತ್ರುಗಳು- ಬೇಟೆನಾಯಿ-ತೋಳಗಳಿಗಿಂತ ನಿಜಶತ್ರುಗಳಾಗಿದ್ದೇ ಈ ಸಂರಕ್ಷಣೆಯ ಆವಶ್ಯಕತೆ. 

    “ಪೆಂಗ್ವಿನ್‌ ಪೆರೇಡ್‌’ ಬರೀ ಸಾಯಂಕಾಲ ಮಾತ್ರ ಏಕೆ?’ ಎಂಬುದು ಭರತನ ಪ್ರಶ್ನೆ. ಸಮುದ್ರದಲ್ಲಿ ಮೀನುಗಳ ಬೇಟೆಯಾಡಿ, ಆಳಕ್ಕೆ “ಡೈವ್‌’ ಮಾಡಿ, ಈಜಾಡಿ ಪೆಂಗ್ವಿನ್‌ಗಳು ಕಡಲ ತೀರಕ್ಕೆ ಮರಳುತ್ತವೆ. ಹಾಗೆ ಮರಳುವಾಗ ಮನುಷ್ಯರೂ ಸೇರಿದಂತೆ ತನ್ನ ಶತ್ರುಗಳ ಭಯ ಅವುಗಳಿಗೆ. ಹಾಗಾಗಿ ಕತ್ತಲೆಯಾಗುವುದನ್ನು ಕಾಯುತ್ತವೆ. ತಮ್ಮ ಗೂಡುಗಳಿಗೆ ಶಾಲಾ ಮಕ್ಕಳಂತೆ ಸಾಲು ಮಾಡಿಕೊಂಡು ನಡೆಯತ್ತವೆ

“ಪೆಂಗ್ವಿನ್‌ ಪೆರೇಡ್‌’ಗೆಂದು ನೋಡುವ ಗ್ಯಾಲರಿ ಮಾಡಿ¨ªಾರೆ. ರೇಂಜರ್‌ಗಳು ಮತ್ತೆ ಮತ್ತೆ ಪ್ರತಿಯೊಬ್ಬರಿಗೂ ಮೊಬೈಲ್‌-ಕ್ಯಾಮೆರಾ-ವೀಡಿಯೋಗಳನ್ನು ಕ್ಲಿಕ್ಕಿಸಬಾರದೆನ್ನುವ ಸೂಚನೆ ನೀಡುತ್ತಾರೆ. ಗ್ಯಾಲರಿ ಸ್ಟ್ಯಾಂಡಿನ ಬದಿಗಳಲ್ಲಿ ಕುಳಿತರೆ ನಿಮಗೆ ಪೆಂಗ್ವಿನ್‌ಗಳ ಪೆರೇಡ್‌ ಚೆನ್ನಾಗಿ ವೀಕ್ಷಿಸುವ ಭಾಗ್ಯ. ಸಮುದ್ರ ತೀರವಾದ್ದರಿಂದ ಗಾಳಿ-ಚ‌ಳಿ ಎರಡೂ ತೀವ್ರ. ಹಾಗಾಗಿ ಬೆಚ್ಚನೆಯ ಬಟ್ಟೆಗಳಿದ್ದರೆ ಮಾತ್ರ ಮಕ್ಕಳು-ದೊಡ್ಡವರು ಇಬ್ಬರೂ ಸಂತಸಪಡಬಹುದು. ಬೇರೆ ಕೆಂಪು-ಬಿಳಿ ಹಕ್ಕಿಗಳು ಸುತ್ತಮುತ್ತ ಹಾರಾಡಿ ತನ್ನೆಲ್ಲಾ ಆಟ ಪ್ರದರ್ಶಿಸಿದರೂ ಯಾರಿಗೂ ಅವುಗಳ ಬಗೆಗೆ ಲಕ್ಷ್ಯವಿರಲಿಲ್ಲ! ಎಲ್ಲರ ಗಮನ ಪೆಂಗ್ವಿನ್‌ಗಳ ಬಗ್ಗೆ ಮಾತ್ರ. ಪೆಂಗ್ವಿನ್‌ಗಳು ಯಾವಾಗ ಬರಬಹುದು, ಹೇಗೆ ಬರಬಹುದು, ಇಷ್ಟು ಕತ್ತಲಾಗುತ್ತಿರುವಾಗ ಅವು ಕಾಣುತ್ತವೆಯೇ ಎಲ್ಲರಿಗೂ ಆತಂಕ-ಕುತೂಹಲ ನಿರೀಕ್ಷೆ. ದೂರದ ಸರ್ಚ್‌ಲೈಟ್‌ಗಳ ಮಂದ ಬೆಳಕು, ಸಮುದ್ರದ ಭೋರ್ಗರೆತ, ಬೀಸುವ ಗಾಳಿ, ನೋಡುನೋಡುತ್ತಿದ್ದಂತೆಯೇ ಒಬ್ಬೊಬ್ಬರಿಗೆ ಅಲ್ಲಲ್ಲಿ 5-6 ಪೆಂಗ್ವಿನ್‌ಗಳ ಚಿಕ್ಕ ಗುಂಪು ಕಂಡು, ಅವರು ಮತ್ತೂಬ್ಬರಿಗೆ ತೋರಿಸಲು ಆರಂಭವಾಯಿತು. ಮುಂದಿನ ಸುಮಾರು 10-15 ನಿಮಿಷಗಳಲ್ಲಿ ದಟ್ಟ ನೀಲಿ ಕೋಟು ತೊಟ್ಟ, ಮಧ್ಯೆ ಬಿಳಿಯ ಬಣ್ಣದ, ಪುಟ್ಟ ಪೆಂಗ್ವಿನ್‌ಗಳು ತಮ್ಮ ತಮ್ಮ ಗುಂಪಿನಲ್ಲಿ, ಆಗಾಗ್ಗೆ “ಮಾತನಾಡುತ್ತ’ ಸಾಲು ಸಾಲಾಗಿ ತೀರದ ಮೇಲೆ ನಡೆದು ತಮ್ಮ ಗೂಡುಗಳಿಗೆ ನಡೆಯಲಾರಂಭಿಸಿದವು. ಪಿಸುಮಾತಿನ ನಡುವೆ ಕತ್ತಲೆಯಲ್ಲಿಯೂ ಮಕ್ಕಳ ಅರಳಿದ ಕಣ್ಣು, ಬಿಟ್ಟ ಬಾಯಿ, ಉಸಿರು ಬಿಗಿ ಹಿಡಿದು ನೋಡುವ ರೀತಿ ನನಗೆ ಪೆಂಗ್ವಿನ್‌ ನೋಡಿದ ಸಂತೋಷವನ್ನು ಇಮ್ಮಡಿಸಿತು! ಹದಿನೈದು ನಿಮಿಷದ ನಂತರ ಗ್ಯಾಲರಿಯಿಂದ ಕೇಂದ್ರಕ್ಕೆ ನಡೆಯುವ “ವಾಕ್‌ವೆà’ಯಲ್ಲಿ ಇಕ್ಕೆಲಗಳಲ್ಲಿಯೂ ಸದ್ದು ಮಾಡದೆ, ಗಮನಿಸಿದರೆ ಅಲ್ಲಲ್ಲಿ ಪೆಂಗ್ವಿನ್‌ಗಳು ನಮ್ಮನ್ನು ನೋಡಿ, ಬಿಲದೊಳಕ್ಕೆ ಓಡುವ, ನಮ್ಮೆಡೆಗೆ ನೋಡದೆ ತಮ್ಮ ಪಾಡಿಗೆ ತಾವು ಸಾಲಾಗಿ ನಡೆಯುವ ಪುಟ್ಟ ಹಕ್ಕಿಗಳು. ಭರತ, “ಪಾಪ ಇವಕ್ಕೆ ತಮ್ಮ ಗೂಡು ಎಲ್ಲಿದೆ ಅಂತ ಗೊತ್ತಾಗ್ತಿಲ್ಲ ಅನ್ನಿಸುತ್ತೆ’ ಎಂದು ಪೇಚಾಡಿಕೊಂಡ.

Advertisement

ಪೆಂಗ್ವಿನ್‌ ಸಿನೆಮಾ ಲೋಕ
    “ಪೆಂಗ್ವಿನ್‌ ಪೆರೇಡ್‌’ ನಡೆದದ್ದು ಸುಮಾರು 20-25 ನಿಮಿಷಗಳಷ್ಟೇ. ಆದರೆ ಪೆಂಗ್ವಿನ್‌ಗಳ ಬಗ್ಗೆ ಓದಿ, ಅವುಗಳು ನಾಶವಾಗುತ್ತಿರುವ ವಿವರ ತಿಳಿದು, ಫಿಲಿಪ್‌ ದ್ವೀಪದ ಇತಿಹಾಸ ಓದಿ ಆ ತಿಳಿವಿನಲ್ಲಿ ನೋಡಿದ ಪೆಂಗ್ವಿನ್‌ ಪೆರೇಡ್‌ ನನಗೆ “ಅದ್ಭುತ’ ಎನಿಸಿತ್ತು. ಮಕ್ಕಳು ಅಲ್ಲೆಲ್ಲೋ ಹಾಕಿದ್ದ ಊಟ್ಟ For your birthday, blow bubbles not balloons (ನಿಮ್ಮ ಜನ್ಮದಿನಕ್ಕೆ ಗುಳ್ಳೆಗಳನ್ನು ಮಾಡಿ, ಬಲೂನು ಊದಬೇಡಿ!) ಎಂಬ “ಸ್ಲೋಗನ್‌’ ಅಂಗೀಕರಿಸಿ ಸಹಿ ಮಾಡಿ, ಇಬ್ಬರೂ ಒಂದೊಂದು ಮ್ಯಾಗ್ನೆಟ್‌ ಗಿಟ್ಟಿಸಿದರು. “ಏಕೆ ಬಲೂನ್‌ ಬೇಡ್ವಾ’ ಎಂದರೆ “ಬೇಡ, ಬಲೂನಿಂದ ಪೆಂಗ್ವಿನ್‌ ಸಾಯುತ್ತೆ’ ಎಂದರು!  ಭೂಮಿ, “ಆಸ್ಟ್ರೇಲಿಯಾದಲ್ಲಂತೂ ಬಲೂನು ಬೇಡ’ ಎಂದು ಹೇಳಿಬಿಟ್ಟಳು.

2009ರಲ್ಲಿ ಎಂಟರ್‌ಟೇನ್‌ಮೆಂಟ್‌ ವೀಕ್ಲಿಯಲ್ಲಿ ಹೇಳಿದ್ದ ಪೆಂಗ್ವಿನ್‌ ಸಿನಿಮಾಗಳ ಯಶಸ್ಸಿನ ಬಗ್ಗೆ  “ಅವು ನಡೆಯುತ್ತಿರಲಿ (ಮಾರ್ಚ್‌ ಆಫ್ ಪೆಂಗ್ವಿನ್‌ ಎಂಬ ಡಾಕ್ಯುಮೆಂಟರಿ), ಕುಣಿಯುತ್ತಿರಲಿ (ಹ್ಯಾಪ್ಪಿ ಫೀಟ್‌ ಎಂಬ ಸಿನೆಮಾ) ಅಥವಾ ಹಾರುತ್ತಿರಲಿ (ಸಫ್ì ಈಸ್‌ ಅಪ್‌ ಎನ್ನುವ ಸಿನೆಮಾ) ಈ ವಿಚಿತ್ರ ವಾಗಿ ಮು¨ªಾಗಿರುವ ಹಕ್ಕಿಗಳು ಬಾಕ್ಸ್‌ ಆಫೀಸಿನಲ್ಲಿ ಪೂರ್ತಿ ದಶಕ ಹಾರಾಡುತ್ತಿವೆ” ಎಂಬ ಮಾತುಗಳು ನೆನಪಾಗಿ “ಪೆಂಗ್ವಿನ್‌’ಗಳನ್ನು ಮತ್ತೆ ಮತ್ತೆ ಮನಸ್ಸಿನಲ್ಲಿ ತುಂಬಿಕೊಳ್ಳುತ್ತ ಮರಳಿದೆವು. 

 ಕೆ. ಎಸ್‌. ಪವಿತ್ರಾ 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next