Advertisement

“ಸಾಹಿತ್ಯ-ತತ್ವಜ್ಞಾನದ್ದು ಇಹ-ಪರ ಮಧ್ಯದ ನಂಟು’

12:34 PM Jan 23, 2017 | |

ಧಾರವಾಡ: ಸಾಹಿತ್ಯ ಹಾಗೂ ತತ್ವಜ್ಞಾನ ಮಧ್ಯದ ನಂಟು ಇಹ-ಪರ ಮಧ್ಯದ ನಂಟಿದ್ದಂತೆ ಎಂದು ವೀಣಾ ಬನ್ನಂಜೆ ಹೇಳಿದರು. ಧಾರವಾಡ ಸಾಹಿತ್ಯ ಸಂಭ್ರಮದ ಕೊನೆಯ ದಿನ ನಡೆದ “ಸಾಹಿತ್ಯ ಮತ್ತು ತತ್ವಜ್ಞಾನ’ ಗೋಷ್ಠಿಯಲ್ಲಿ ತಮ್ಮ ವಿಚಾರ ಮಂಡಿಸಿದರು.ಮುಕ್ತ ಹೃದಯ ಇದ್ದರೆ ಸಾಕು ತತ್ವಜ್ಞಾನ ಅರ್ಥವಾಗುತ್ತದೆ ಅದಕ್ಕೆ ಓದು, ಪದವಿ ಬೇಕೆಂದೇನಿಲ್ಲ.

Advertisement

ಓದು-ಅಕ್ಷರ ಕಲಿಯದ ಎಷ್ಟೋ ಜನರು ತತ್ವಜ್ಞಾನ ತಿಳಿದುಕೊಂಡಿರುತ್ತಾರೆ. ಜೀವನ ಅನುಭವ  ಅವರಿಗೆ ಸಾಕಷ್ಟು ಸಂಗತಿಗಳನ್ನು ಕಲಿಸಿರುತ್ತದೆ. ಇತರರು ಹೇಳಿದ ಘಟನೆಗಳು, ಸ್ವಾನುಭವಗಳು ಅವರ ಅನುಭವವನ್ನು ವಿಸ್ತಾರಗೊಳಿಸಿರುತ್ತವೆ.ಸಮಾಜದ ಪ್ರಭಾವ ಅವರ ಮೇಲೆ ದಟ್ಟವಾಗಿ  ಆಗಿರುತ್ತದೆ ಎಂದರು. ಎಲ್ಲರಿಗೂ ಸಾಹಿತ್ಯ ಅರ್ಥವಾಗುವುದಿಲ್ಲ. 

ಅದೇ ರೀತಿ ಎಲ್ಲರಿಗೂ ತತ್ವಶಾಸ್ತ್ರ ಅರಿಯಲಾಗುವುದಿಲ್ಲ. ಅದಕ್ಕೆ ಆಸಕ್ತಿ ಇರಬೇಕು ಎಂದು ಅಭಿಪ್ರಾಯಪಟ್ಟರು. ಸಾಹಿತಿ ತನ್ನ ಮನಸಿಗೆ ತೋಚಿದಂತೆ ಮಾತನಾಡಬಹುದು, ಬರೆಯಬಹುದು. ಒಬ್ಬ ಗಾಯಕ ಅಪಸ್ವರದಲ್ಲಿ ಹಾಡಬಹುದು, ಒಬ್ಬ ನಟ ಅಬದ್ಧ ಮಾತನಾಡಬಹುದು ಆದರೆ ಒಬ್ಬ ತತ್ವಜ್ಞಾನಿ ಹಾಗೆ ಮಾಡಲು ಆಗುವುದಿಲ್ಲ. ಆತ ಆತ್ಮವಂಚನೆ ಮಾಡಿಕೊಳ್ಳುವುದಿಲ್ಲ.

ಅವನಿಗೆ ಅವನದೇ ಆದ ಮಾನದಂಡಗಳಿವೆ. ಪ್ರಾಮಾಣಿಕತೆ ತತ್ವಶಾಸ್ತ್ರದ ಮುಖ್ಯ ಮಾನದಂಡವಾಗಿದೆ. ಇಲ್ಲಿ ಸಾಹಿತ್ಯದಂತೆ ನಡೆ-ನುಡಿಗಳಲ್ಲಿ ವ್ಯತ್ಯಾಸವಿಲ್ಲ. ನಮ್ಮ ತತ್ವಶಾಸ್ತ್ರಜ್ಞರು ನುಡಿದಂತೆ ನಡೆದಿದ್ದಾರೆ ಎಂದರು. ಲಕ್ಷ್ಮೀಶ ತೋಳ್ಪಾಡಿ ಮಾತನಾಡಿ, ಅತ್ಯುತ್ತಮ ಕಾವ್ಯ ಹಾಗೂ ಅತ್ಯುತ್ತಮ ತತ್ವಜ್ಞಾನ ಅವಳಿಗಳಿದ್ದಂತೆ. ಸಾಹಿತ್ಯ ಹಾಗೂತತ್ವಜ್ಞಾನದ ಸಂಬಂಧ ವಾಗರ್ಥಗಳ  ಮೂಲಕ ಪ್ರತೀಕವಾಗುವಂಥ ಸಂಬಂಧ. 

ನಮ್ಮನ್ನು ಅಭಿವ್ಯಕ್ತಿ ಮಾಡದೇ ವಿಚಾರ ಅಭಿವ್ಯಕ್ತಿ ಮಾಡಲು ಸಾಧ್ಯವಿಲ್ಲ. ಈ ಅಭಿವ್ಯಕ್ತಿಯೇ ತತ್ವಜ್ಞಾನ. ಅನುಭವವಿದ್ದರೆ ಬರೆಯಲು ಸಾಧ್ಯ, ಆದರೆ ಬರೆಯಬೇಕೆಂಬ ಕಾರಣಕ್ಕೆ ಅನುಭವ ಪಡೆಯಬೇಕೆನ್ನುವುದು ಮೂರ್ಖತನ. ಬರವಣಿಗೆ ಎಂಬುದು ತಾನಾಗೇ ಸಂಭವಿಸುವ ಗುಣ. ಅನುಭವ ಹೆಚ್ಚಾದಂತೆ ಮಾತು ಕಡಿಮೆಯಾಗುತ್ತದೆ ಎಂಬುದು ವಿಸ್ಮಯದ ಸಂಗತಿ ಎಂದರು.  

Advertisement

ಮಿಥ್ಯ ಎಂದರೆ ಸುಳ್ಳು ಎಂಬರ್ಥವಿಲ್ಲ. ಮಿಥ್ಯ ಎಂದರೆ ಅದರಲ್ಲಿ ಸತ್ಯವೂ ಇದೆ ಹಾಗೂ ಸುಳ್ಳೂ ಇದೆ ಎಂದು ಅರ್ಥ. ಸುಳ್ಳು ಎಂದರೆ ಸುಳಿವು ಎಂದರ್ಥ ಎಂದರು. ಸಾಹಿತ್ಯ ನೋವಿನ ಸಂಗತಿ. ಅದರಲ್ಲಿ ಸಂತೋಷಕ್ಕಿಂತ ನೋವು ಹೆಚ್ಚಾಗಿದೆ. ನೋವನ್ನು ಅನುಭವಿಸಲು ನಮ್ಮನ್ನು ಸಮರ್ಥರನ್ನಾಗಿ ಮಾಡುವುದೇ ತತ್ವಜ್ಞಾನ. ವಚನಕಾರರು ಹಾಗೂ ದಾಸರು ತಮ್ಮ ಪದಗಳ ಮೂಲಕ ತತ್ವಜ್ಞಾನದತ್ತ ನಮ್ಮನ್ನು ಕರೆದೊಯ್ಯುತ್ತಾರೆ ಎಂದು ಅಭಿಪ್ರಾಯಪಟ್ಟರು.

ಸುಂದರ ಸಾರುಕ್ಕೆ ಮಾತನಾಡಿ, ಸಾಹಿತ್ಯದ ಪರಿಕಲ್ಪನೆ ಅರ್ಥೈಸಿಕೊಳ್ಳಲು ತತ್ವಜ್ಞಾನ ತಿಳಿದುಕೊಳ್ಳುವುದು ಅವಶ್ಯ ಎಂದರು. ಗೋಷ್ಠಿಯ ನಿರ್ದೇಶಕ ಮಲ್ಲೇಪುರಂ ಜಿ.ವೆಂಕಟೇಶ ಮಾತನಾಡಿ, ವಚನಗಳಲ್ಲಿ ಹಲವು ಕಾವ್ಯಗಳಲ್ಲಿ ತತ್ವಜ್ಞಾನ ಅಂತರ್ಗತವಾಗಿದೆ. ಬೇಂದ್ರೆ ಹಾಗೂ ಕುವೆಂಪು ಕವಿತೆಗಳಲ್ಲಿ ಇದನ್ನು ನಾವು ಕಾಣಬಹುದಾಗಿದೆ ಎಂದರು.   

Advertisement

Udayavani is now on Telegram. Click here to join our channel and stay updated with the latest news.

Next