ಬೆಂಗಳೂರು: ಮೊಬೈಲ್ ರಿಪೇರಿ ವಿಚಾರಕ್ಕೆ ತಾಯಿ ಮೇಲೆ ಹಲ್ಲೆಗೆ ಮುಂದಾಗಿದ್ದ ಪುತ್ರನನ್ನು ತಂದೆಯೇ ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ನಡೆಸಿದಲ್ಲದೆ, ತಲೆಯನ್ನು ಗೋಡೆಗೆ ಗುದ್ದಿಸಿ ಹತ್ಯೆಗೈ ದಿರುವ ಘಟನೆ ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕುಮಾರಸ್ವಾಮಿ ಲೇಔಟ್ ನ ಕಾಶಿನಗರ ನಿವಾಸಿ ತೇಜಸ್ (14) ಹತ್ಯೆಯಾದ ಪುತ್ರ. ಕೃತ್ಯ ಎಸಗಿದ ಆತನ ತಂದೆ ರವಿಕುಮಾರ್(44) ಎಂಬಾತನನ್ನು ಬಂಧಿಸಲಾಗಿದೆ. ಶುಕ್ರವಾರ ಸಂಜೆ ದುರ್ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದರು.
ಆರೋಪಿ ರವಿ ಕುಮಾರ್, ಪತ್ನಿ ಶಶಿಕಲಾ ಮತ್ತು ಇಬ್ಬರು ಮಕ್ಕಳಾದ ತೇಜಸ್ ಮತ್ತು ವಿಶಾಲ್ ಜತೆ ಕಾಶಿನಗರದಲ್ಲಿ ವಾಸವಾಗಿದ್ದರು. ಆರೋಪಿ ಮರಗೆಲಸ ಮಾಡುತ್ತಿದ್ದು, ಪತ್ನಿ ಶಶಿಕಲಾ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹಿರಿಯ ಪುತ್ರ ವಿಶಾಲ್ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿ. 2ನೇ ಪುತ್ರ ತೇಜಸ್ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ. ಈ ಮಧ್ಯೆ ಕೆಲ ಯುವಕರ ಜತೆ ಸೇರಿಕೊಂಡು ದುಶ್ಚಟಗಳ ಅಭ್ಯಾಸ ಮಾಡಿಕೊಂಡಿದ್ದ. ಸರಿಯಾಗಿ ಶಾಲೆಗೆ ಹೋಗದೆ, ಸ್ನೇಹಿ ತರ ಜತೆ ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದ. ಇತ್ತ ತಂದೆ ರವಿ ಕುಮಾರ್ ಮದ್ಯ ವ್ಯಸನಿಯಾಗಿದ್ದು, ಸರಿಯಾಗಿ ಕೆಲಸಕ್ಕೂ ಹೋಗುತ್ತಿರಲಿಲ್ಲ ಎಂದು ಪೊಲೀಸರು ಹೇಳಿದರು.
ಮೊಬೈಲ್ ರಿಪೇರಿಗಾಗಿ ಜಗಳ: ಈ ನಡುವೆ ತೇಜಸ್ ಬಳಸುತ್ತಿದ್ದ ಮೊಬೈಲ್ ಹಾಳಾಗಿತ್ತು. ಹೀಗಾಗಿ ಪೋಷಕರಿಗೆ ರಿಪೇರಿ ಮಾಡಿಸಿಕೊಡುವಂತೆ ಕೋರಿದ್ದ. ಆದರೆ, ಹಣದ ಸಮಸ್ಯೆಯಿಂದಾಗಿ ರಿಪೇರಿ ಮಾಡಿಸಿರಲಿಲ್ಲ. ಗುರುವಾರ ರಾತ್ರಿ ಇದೇ ವಿಚಾರವಾಗಿ ತಾಯಿ ಮೇಲೆ ತೇಜಸ್ ಹಲ್ಲೆಗೆ ಮುಂದಾಗಿದ್ದಾನೆ. ಆಗ ತಂದೆ ಜಗಳ ಬಿಡಿಸಿದ್ದಾರೆ. ಶುಕ್ರವಾರ ಬೆಳಗ್ಗೆಯೂ ತೇಜಸ್ ಪೋಷಕರ ಜತೆ ಗಲಾಟೆ ಮಾಡಿದ್ದಾನೆ. ಅದರಿಂದ ಕೋಪಗೊಂಡ ರವಿಕುಮಾರ್, ಮದ್ಯದ ಅಮಲಿನಲ್ಲಿ ಪುತ್ರನಿಗೆ ಕ್ರಿಕೆಟ್ ಬ್ಯಾಟ್‌ನಿಂದ ಬೆನ್ನು ಹಾಗೂ ಇತರೆಡೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಅಲ್ಲದೆ, ತಲೆಯನ್ನು ಗೋಡೆಗೆ ಜೋರಾಗಿ ಗುದ್ದಿಸಿದ್ದಾನೆ. ಪರಿಣಾಮ ಆತ ಆಂತರಿಕವಾಗಿ ಗಂಭೀರವಾಗಿ ಗಾಯಗೊಂಡಿದ್ದ. ಹೀಗಾಗಿ ಮನೆಯಲ್ಲೇ ತೇಜಸ್ ಮಲಗಿದ್ದ. ಮಧ್ಯಾಹ್ನ ತಾಯಿ ಶಶಿಕಲಾ ಪುತ್ರನನ್ನು ಊಟಕ್ಕೆ ಎಚ್ಚರಿಸಿದ್ದಾರೆ. ಆದರೆ, ಪ್ರತಿಕ್ರಿಯೆ ನೀಡಿಲ್ಲ. ಬಳಿಕ ಕೂಡಲೇ ಆಸ್ಪತ್ರೆಗೆ ಕರೆದೊಯ್ದಾಗ, 2 ಗಂಟೆಗಳ ಹಿಂದೆಯೇ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ: ಪುತ್ರ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡು ತಂದೆ, ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆ ಸು ತ್ತಿದ್ದರು. ಮತ್ತೂಂದೆಡೆ ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಿಸಿದಾಗ ತಾಯಿ ಶಶಿಕಲಾ ಘಟನೆಯನ್ನು ವಿವರಿಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ, ಪ್ರಾಥ ಮಿಕ ವರದಿ ಪ್ರಕಾರ, ಹಲ್ಲೆಯಿಂದ ತಲೆಯಲ್ಲಿ ಆಂತರಿಕ ರಕ್ತಸ್ರಾವವಾಗಿ ಮೃತಪಟ್ಟಿರುವುದು ಗೊತ್ತಾಗಿದೆ. ಕೂಡಲೇ ಶಶಿಕಲಾರಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡು ಆರೋಪಿ ರವಿಕುಮಾರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.