ಚಾಮರಾಜನಗರ: ಮೈಸೂರು ಸಂಸ್ಥಾನದ ಮಹಾರಾಜರಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಒತ್ತಾಸೆಯಿಂದ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು ಎಂದು ಬರಹಗಾರ ಮಾ. ಮಹೇಶ್ ಮಲೆಯೂರು ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 104 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ ಕುರಿತು ಅವರು ಮಾತನಾಡಿದರು.
ನಾಲ್ವಡಿ ಅವರು, ರಾಜ್ಯದ ಅಭಿವೃದ್ಧಿಗಾಗಿ ಮೈಸೂರು ಸಂಪತ್ ಅಭಿವೃದ್ಧಿ ಸಮಿತಿಯನ್ನು ಸ್ಥಾಪಿಸಿ ಅದರ ಅಡಿಯಲ್ಲಿ ಕೈಗಾರಿಕಾ ಸಮಿತಿ, ಕೋಆಪರೇಟಿವ್ ಸೊಸೈಟಿ ಮತ್ತು ವಿದ್ಯಾ ಸಮಿತಿ ಎಂದು ಮರು ವಿಭಾಗಗಳಾಗಿ ವಿಂಗಡಿಸಿದರು. ಈ ವಿದ್ಯಾ ಸಮಿತಿಯು ಮೈಸೂರು ವಿಶ್ವ ವಿದ್ಯಾನಿಲಯದ ಸ್ಥಾಪನೆ ಮಾಡಿತು. ಹಾಗೆಯೇ ಸರ್.ಎಂ.ವಿಶ್ವೇಶ್ವರಯ್ಯ ಅವರ ಸಲಹೆ ಮೆರೆಗೆ 1915ರ ಮೇ 5 ರಂದು ಕರ್ನಾಟಕ ಸಾಹಿತ್ಯ ಪರಿಷತ್ ಸ್ಥಾಪಿಸಿತು ತಂದರು.
ಮದ್ರಾಸ್, ಕೊಯಮತ್ತೂರು, ಹೈದರಾಬಾದ್, ಮುಂಬೈ ಸೇರಿದಂತೆ ಎಲ್ಲಾ ಕಡೆಗಳಿಂದ ಕನ್ನಡ ಭಾಷಿಕರನ್ನು ಒಗ್ಗೂಡಿಸಿ ಸಮ್ಮೇಳನಗಳನ್ನು ನಡೆಸುವುದು. ಹಳೆಯ ಗ್ರಂಥಗಳನ್ನು ಸಂರಕ್ಷಿಸಿ, ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶವನ್ನಿಟ್ಟುಕೊಂಡು ಕರ್ನಾಟಕ ಸಾಹಿತ್ಯ ಪರಿಷತ್ತು ಎಂಬ ಹೆಸರಿನಿಂದ ಸ್ಥಾಪನೆಗೊಂಡು ಕಾಲ ಕ್ರಮೇಣ ಕನ್ನಡ ಸಾಹಿತ್ಯ ಪರಿಷತ್ತು ಎಂದು ಮರುನಾಮಕರಣಗೊಂಡಿತು ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಜಿಲ್ಲಾ ಕಸಾಪ ಉಪಾಧ್ಯಕ್ಷ ವೆಂಕಟರಮಣಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಗೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಶಿಕ್ಚಣ ಕ್ಷೇತ್ರದಲ್ಲಿ, ಕೈಗಾರಿಕಾ ಕ್ಷೇತ್ರದಲ್ಲಿ ಅಭಿವೃದ್ಧಿ ಕ್ರಾಂತಿಯನ್ನು ಮಾಡಿದ ಮಹಾತ್ಮರು. ಅವರ ಕಾರ್ಯಗಳಿಂದ ಕನ್ನಡ ಭಾಷೆಯು ಇಂದು ಗಟ್ಟಿಯಾಗಿ ನಿಲ್ಲಲು, ಸಮೃದ್ಧಿಯಾಗಿ ಬೆಳೆಯಲು ಕಾರಣ ಕರ್ತರಾದರು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್.ವಿನಯ್ ಮಾತನಾಡಿ, ಒಂದು ಭಾಷೆಯ ಬೆಳವಣಿಗೆಗೆ ಪೂರಕವಾಗಿ ಈ ವಿಶ್ವದಲ್ಲಿ ಯಾವುದಾದರೂ ನಾಲ್ಕು ಲಕ್ಷ ಸದಸ್ಯರಿರುವ ಸ್ವಾಯತ್ತ ಸಂಸ್ಥೆ ಯಿದೆ ಎಂದರೆ ಅದು ನಮ್ಮ ಕನ್ನಡ ಸಾಹಿತ್ಯ ಪರಿಷತ್ತು.
ಇದು ಕನ್ನಡಿಗರು ಹೆಮ್ಮೆ ಪಡುವ ವಿಷಯವಾಗಿದೆ ಎಂದರು. ತಾಲೂಕು ಕಸಾಪ ಅಧ್ಯಕ್ಷ ಬಿ.ಬಸವರಾಜು ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ರತ್ನಮ್ಮ ಬಸವರಾಜು ವಚನ ಗಾಯನ ಕುಮಾರಿ ಶರಣ್ಯ ಗೀತಗಾಯನ ನಡೆಸಿದರು.