ಬಾಗಲಕೋಟೆ: ಕನ್ನಡ ಸಾಹಿತ್ಯ ಪರಿಷತ್ತು ಏಷ್ಯಾ ಖಂಡದಲ್ಲಿಯೇ ಒಂದು ದೊಡ್ಡ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಕನ್ನಡ ಭಾಷೆಯ ಅಭಿವೃದ್ಧಿ ಜೊತೆಗೆ ಕನ್ನಡ ನಾಡು ನುಡಿಯ ಸೇವೆ ಮಾಡುತ್ತಾ ಸಾಗಿದೆ ಎಂದು ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಹೇಳಿದರು.
ಬಿವಿವಿ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕನ್ನಡ ಉಳಿದು ಬೆಳೆಯಬೇಕಾದರೆ ಕನ್ನಡ ಸಾಹಿತ್ಯದ ಓದು ಇಂದಿನ ಪೀಳಿಗೆಗೆ ಅವಶ್ಯ ಎಂದರು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಸಂಸ್ಕೃತಿ ಮತ್ತು ಪರಂಪರೆಯನ್ನು ನಿರಂತರ ಪ್ರೋತ್ಸಾಹಿಸುತ್ತದೆ ಎಂದು ತಿಳಿಸಿದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಯಾಳವಾರ ಮಾತನಾಡಿ, 103 ವರ್ಷ ಪೂರೈಸಿದ ಕನ್ನಡ ಸಾಹಿತ್ಯ ಪರಿಷತ್ತು ನಿರಂತರ ಸಾಹಿತ್ಯದ ಚಟುವಟಿಕೆಗಳ ಮೂಲಕ ಕನ್ನಡ ಭಾಷಾ ಜಾಗೃತಿ ಜೊತೆಗೆ ಸಾಹಿತಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಹೆಮ್ಮೆಯ ಸಂಗತಿ. ನಾಡಿನ ಜನರು ಮುಂಬೈ ಕರ್ನಾಟಕ, ಹೈ. ಕ, ಮೈಸೂರು ಕರ್ನಾಟಕ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂದು ಕರೆಯುವುದು. ಅಖಂಡ ಕರ್ನಾಟಕಕ್ಕೆ ಪ್ರಶ್ನಿಸಿದಂತೆ ಆಗುತ್ತದೆ ಎಂದು ವಿಶದೀಕರಿಸುತ್ತಾ ಕರ್ನಾಟಕ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತು ಹೇಗಾಯ್ತು ಎಂಬ ರೋಚಕ ಇತಿಹಾಸವನ್ನು ವಿವರಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಶ್ರೀಶೈಲ ಕರಿಶಂಕರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ನಾಡಿನ ಪ್ರತಿಯೊಂದು ಸಮಸ್ಯೆಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಸ್ಪಂದಿಸುವುದಲ್ಲದೇ ಹೋರಾಟಕ್ಕಿಳಿದು ನಾಡು-ನುಡಿಯನ್ನು ರಕ್ಷಿಸಿದ ಭವ್ಯ ಇತಿಹಾಸ ಕನ್ನಡ ಸಾಹಿತ್ಯ ಪರಿಷತ್ತಿಗಿದೆ ಎಂದು ಹೇಳಿದರು. ಬಿವಿವಿ ಸಂಘದ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ವಿ.ಎ.ಬೆನಕನಾಳ ವಂದಿಸಿದರು. ಕಸಾಪ ತಾಲೂಕಾಧ್ಯಕ್ಷ ವಿನೋದ ಯಡಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ| ಅಬ್ಟಾಸ ಮೇಲಿನಮನಿ, ಪ್ರೊ.ಎನ್ .ಜಿ.ಕರೂರ, ಪ್ರೊ.ವಿ.ಕೆ.ಮೊರಬದ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಜಿ.ಕೆ.ತಳವಾರ, ಸಾಹಿತಿ ಎಸ್.ಎಸ್.ಹಳ್ಳೂರ, ಕಾಲೇಜಿನ ಸಿರಿಗನ್ನಡ ವೇದಿಕೆ ಮುಖ್ಯಸ್ಥ ಸರ್ವದೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.