ಬೆಂಗಳೂರು: ತುರ್ತುಪರಿಸ್ಥಿತಿಯನ್ನು ಬಹಿರಂಗವಾಗಿ ವಿರೋಧಿಸಿದ ಸಾಹಿತಿಗಳಲ್ಲಿ ಶಿವರಾಮ ಕಾರಂತ ಮತ್ತು ಗೋಪಾಲಕೃಷ್ಣ ಅಡಿಗರು ಮುಂಚೂಣಿಯಲ್ಲಿದ್ದರು ಎಂದು ಶಿವರಾಮ ಕಾರಂತ ವೇದಿಕೆ ಅಧ್ಯಕ್ಷ ಬಿ.ವಿ. ಕೆದಿಲಾಯ ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಸದ್ಭಾವನಾ ಪ್ರತಿಷ್ಠಾನ ಮಂಗಳವಾರ ಹಮ್ಮಿಕೊಂಡಿದ್ದ “ಶಿವರಾಮ ಕಾರಂತರ ಬದುಕು-ಬರಹ ಮತ್ತು ಚಿಂತನೆ-ಚಟುವಟಿಕೆ’ ಕುರಿತ ವಿಚಾರ ಸಂಕಿರಣ- ಮಾಲಿಕೆ 3 ಅನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ವಿಚಾರವಾರ ಆಗಿರಲಿ. ಅದು ತಮಗೆ ಸರಿಯಲ್ಲ ಎನಿಸಿದರೆ ಅದನ್ನು ನೇರವಾಗಿ ವಿರೋಧಿಸುತ್ತಿದ್ದರು. ವೈಚಾರಿಕ ಮನೋಭಾವವುಳ್ಳವರಾಗಿದ್ದ ಕಾರಂತರು, ಸಾಹಿತ್ಯ ಕ್ಷೇತ್ರದ ಜತೆಗೆ ಯಕ್ಷಗಾನ ಕ್ಷೇತ್ರಕ್ಕೂ ಮರೆಯಲಾಗದ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.
ಹೊಸ ತಲೆಮಾರಿಗೆ ಸರಿಯಾಗಿ ಕನ್ನಡ ಕಲಿಸುವ ಕೆಲಸ ಆಗಬೇಕಾಗಿದೆ. ಮನೆಯಲ್ಲಿ ಅಜ್ಜ-ಅಜ್ಜಿ, ಅಪ್ಪ-ಅಮ್ಮ ಎಲ್ಲರೂ ನಿತ್ಯ ಕನ್ನಡ ಮಾತನಾಡಿದರೂ ಈಗಿನ ಮಕ್ಕಳಿಗೆ ಸರಿಯಾದ ಕನ್ನಡ ಗೊತ್ತಿರುವುದಿಲ್ಲ. ಹೀಗಾಗಿ ಇವರಿಗೆ ಕನ್ನಡ ಕಲಿಸುವ ಕೆಲಸವಾಗಬೇಕು ಎಂದು ಬಿ.ವಿ. ಕೆದಿಲಾಯ ಸಲಹೆ ನೀಡಿದರು.
ಬೈಂದೂರಿನ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಪ್ರದೀಪ್‌ಕುಮಾರ್ ಶೆಟ್ಟಿ ಕೆಂಚನೂರು “ಶಿವರಾಮ ಕಾರಂತರ ವೈಚಾರಿಕತೆ’ ಕುರಿತು ಹಾಗೂ ಹಿರಿಯ ಸಾಹಿತಿ ಕೆ. ರಾಜಕುಮಾರ್ ಅವರು “ಬದುಕು -ಬರಹ : ಅಂತರವಿರದ ಕಾರಂತ’ ಕುರಿತು ವಿಚಾರ ಮಂಡಿಸಿದರು. ಸಾಹಿತಿ ಡಾ.ಟಿ.ಗೋವಿಂದರಾಜು, ಪ್ರತಿಷ್ಠಾನದ ಅಧ್ಯಕ್ಷ ಎಂ. ಪ್ರಕಾಶಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.