ಶೃಂಗೇರಿ: ಶಾರದಾಂಬೆಗೆ ಶನಿವಾರ ವೀಣಾ ಶಾರದಾ ಅಲಂಕಾರ ಮಾಡಲಾಗಿತ್ತು. ಶರನ್ನವರಾತ್ರಿ ಆಶ್ವಯುಜ ಶುಕ್ಲ ಸಪ್ತಮಿ ದಿನವಾದ ಶನಿವಾರ, ಶಾರದಾ ಪೀಠದಲ್ಲಿ ತಾಯಿ ಶಾರದೆಯು ಕರದಲ್ಲಿ ಪುಸ್ತಕ, ಜ್ಞಾನ ಮುದ್ರೆ, ಅಮೃತ ಕಲಶ ಹಾಗೂ ವೀಣೆಯನ್ನು ಹಿಡಿದು ಭಕ್ತರಿಗೆ ಆಶೀರ್ವದಿಸಿದಳು. ಅಲ್ಲದೆ, ಮಠದ ನರಸಿಂಹ ವನದ ಗುರುಭವನದಲ್ಲಿ ವಿಶ್ವದ ಬೃಹತ್ ವೀಣೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಶ್ರೀಚಕ್ರ ಪೂಜೆ: ಜಗದ್ಗುರುಗಳು ಪ್ರಾತಃಕಾಲದ ಆಹಿ°ಕ ಅನುಷ್ಠಾನ ನಂತರ ಗುರು ಪಾದುಕೆಗಳಿಗೆ, ಶ್ರೀ ಚಕ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಹಿರಿಯ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿಯರು ಗುರು ನಿವಾಸದಿಂದ ಆಗಮಿಸಿ, ಮಠದ ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಶಾರದಾಂಬಾ ದೇಗುಲಕ್ಕೆ ತೆರಳಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಹಾಮಂಗಳಾರತಿ ನಂತರ ಭಕ್ತರಿಗೆ ಪ್ರಸಾದ ನೀಡಿದರು.
ಕಿರಿಯ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳು ದೋಣಿಯಲ್ಲಿ ತುಂಗಾ ನದಿ ದಾಟಿ, ಗಂಗಾ ಪೂಜೆ ನೆರವೇರಿಸಿದ ಬಳಿಕ ವಾದ್ಯಮೇಳದೊಂದಿಗೆ ಮಠದ ಹೊರ ಪ್ರಾಕಾರ ಮತ್ತು ಒಳ ಪ್ರಾಕಾರದ ದೇಗುಲಗಳಿಗೆ ಆಗಮಿಸಿ, ಪೂಜೆ ಸಲ್ಲಿಸಿದರು. ನಂತರ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಮಂಗಳಾರತಿ ಸ್ವೀಕರಿಸಿದರು. ಜಗದ್ಗುರುಗಳು ಶಾರದಾಂಬೆಗೆ ಪೂಜೆ ಸಲ್ಲಿಸಿದ ಬಳಿಕ, ಶ್ರೀ ಶಾರದಾ ದೇಗುಲದಲ್ಲಿ ಮಠದ ಆಡಳಿತಾ ಧಿಕಾರಿ ಗೌರಿಶಂಕರ್ ಅವರು ಗುರು ಪಾದುಕೆ ಹಾಗೂ ಸರಸ್ವತಿ ಪೂಜೆ ನೆರವೇರಿಸಿದರು.
ಸರಸ್ವತಿ ಪೂಜೆ, ಮಕ್ಕಳಿಗೆ ಅಕ್ಷರಭ್ಯಾಸ: ಶನಿವಾರ ಮೂಲಾ ನಕ್ಷತ್ರದ ಪ್ರಯುಕ್ತ ಸರಸ್ವತಿ ಪೂಜೆ ಏರ್ಪಡಿಸಲಾಗಿತ್ತು. ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿದರು. ಅಲ್ಲದೆ, ಮಠದ ಯಾಗಶಾಲೆಯಲ್ಲಿ ಹೋಮ, ಪಾರಾಯಣ, ಸುಹಾಸಿನಿ ಪೂಜೆ ಸಹಿತ ಅನೇಕ ಧಾರ್ಮಿಕ ಕೈಂಕರ್ಯಗಳು ನಡೆದವು.
ಕಿರಿಯ ಶ್ರೀಗಳ ದರ್ಬಾರ್: ರಾತ್ರಿ ನಡೆದ ದಿಂಡಿ ದೀಪಾರಾಧನೆಯಲ್ಲಿ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳು ದರ್ಬಾರ್ ನಡೆಸಿದರು. ದೇವಿಯ ಉತ್ಸವ ಮೂರ್ತಿಯನ್ನು ಮಠದ ಒಳ ಪ್ರಾಕಾರದಲ್ಲಿ ಸ್ವರ್ಣ ರಥದಲ್ಲಿ ಕುಳ್ಳಿರಿಸಿ 3 ಸುತ್ತು ಪ್ರದಕ್ಷಿಣೆ ಹಾಕಲಾಯಿತು. ನಂತರ, ಜಗದ್ಗುರುಗಳು ಮಹಾಮಂಗಳಾರತಿ ಸ್ವೀಕರಿಸಿದರು. ಮೂಲಾ ನಕ್ಷತ್ರದ ದಿನ ರಾತ್ರಿ ನಡೆಯುವ ಜಗದ್ಗುರುಗಳ ರಾಜ ದರ್ಬಾರಿನಲ್ಲಿ ಮಠಕ್ಕೆ ದತ್ತಿ ಕಾಣಿಕೆಗಳನ್ನು ನೀಡಿದ ಮಹಾರಾಜರ ಹೆಸರಿನಲ್ಲಿ ದೇವಿಗೆ ಕಾಣಿಕೆ ಸಮರ್ಪಣೆ ನಡೆಯಿತು. ಶನಿವಾರದಿಂದ ಮಹಾನವಮಿವರೆಗೆ ಪ್ರತಿನಿತ್ಯ ರಾತ್ರಿ ದರ್ಬಾರಿನ ನಂತರ ಶ್ರೀಗಳವರು ಆಸೀನರಾಗಿದ್ದ ಸ್ವರ್ಣ ಸಿಂಹಾಸನಕ್ಕೆ ಪೂಜೆ ಸಲ್ಲಿಸಲಾಗುತ್ತದೆ.