ಭಾರತೀಯ ಆಧ್ಯಾತ್ಮಿಕ ಪರಂಪರೆ ಬಹಳ ಭಿನ್ನವಾದದ್ದು, ಅಗಾಧವಾದದ್ದು, ಅಷ್ಟೇ ವಿಶಿಷ್ಟವಾದದ್ದು. ಇಲ್ಲಿ ಮಹಾತ್ಮರಿಗೆ ಯಾವತ್ತೂ ಬರವಿಲ್ಲ. ದೇಶಕ್ಕೆ ಮಾತ್ರವೇಕೆ, ರಾಜ್ಯಕ್ಕೆ ಮಾತ್ರವೇಕೆ, ಜಿಲ್ಲೆ, ತಾಲೂಕುಗಳಲ್ಲೂ ಮಹಾತ್ಮರು ಇರುತ್ತಾರೆ. ಇಲ್ಲಿ ಯಾರೂ ಇಲ್ಲದ, ಮಾರ್ಗದರ್ಶಕರ ಕೊರತೆಯಿರುವ ಕಾಲವೂ ಇಲ್ಲ, ಪ್ರದೇಶವೂ ಇಲ್ಲ. ಭಾರತದಲ್ಲಿ ಅಧ್ಯಾತ್ಮ ಆ ಮಟ್ಟದಲ್ಲಿ ಬೆಳೆದಿರುವುದು ಇದಕ್ಕೆ ಕಾರಣ. ವಿದೇಶದಲ್ಲಿ ಇಂತಹ ಸ್ಥಿತಿಯಿಲ್ಲ, ಎಂದೋ ಹುಟ್ಟಿದ ಯಾರೋ ಒಬ್ಬಿಬ್ಬರನ್ನು ಇಂದಿಗೂ ದೇವರು ಎಂದು ಪೂಜಿಸುತ್ತಾರೆ.
ಅವರು ಹಾಕಿಕೊಟ್ಟ ಮಾರ್ಗವನ್ನೇ ಇಂದಿಗೂ ಅನುಸರಿಸುತ್ತಾರೆ. ಎಷ್ಟೋ ಸಾವಿರ ವರ್ಷದ ಹಿಂದೆ ಇಲ್ಲಿ ಜನಿಸಿದ್ದ ರಾಮ, ಕೃಷ್ಣರನ್ನೇ ಅನುಸರಿಸಬೇಕಾದ ಅನಿವಾರ್ಯತೆ ಭಾರತೀಯರಿಗಿಲ್ಲ. ಅವರವರಿಗೆ ಒಪ್ಪಿಗೆಯಾಗಿದ್ದನ್ನು ಅವರವರು ಮಾಡಬಹುದು. ಮರದ ಕೆಳಗಿರುವ ಕಲ್ಲಿನ ತುಂಡನ್ನೂ ದೇವರು ಎಂದು ಪೂಜಿಸಬಹುದು. ತಮ್ಮೂರಿನಲ್ಲಿ ಮೊನ್ನೆಯಷ್ಟೇ ಕಣ್ಣು ಬಿಟ್ಟು ಇನ್ನೂ ಹತ್ತುವರ್ಷ ತುಂಬಿರದ ಬಾಲಕನನ್ನೂ ಹಿಂಬಾಲಿಸಬಹುದು. ಇಲ್ಲಿನ ಜನ ಈ ಚಿಕ್ಕ ಹುಡುಗನಿಗೇನು ಗೊತ್ತು ಎಂದು ತರ್ಕಿಸುವುದಿಲ್ಲ. ಇದಕ್ಕೆ ಕಾರಣ ಇಲ್ಲಿನ ಆಧ್ಯಾತ್ಮಿಕ ಪರಂಪರೆ.
ಅದು ಹತ್ತಾರು ಸಾವಿರ ವರ್ಷಗಳ ಹಿಂದಿನದ್ದು. ಅಂತಹ ಮಹಾತ್ಮರನ್ನು ನೋಡಿ ನೋಡಿ, ಈ ಜನಾಂಗದ ವಂಶವಾಹಿಗಳಲ್ಲಿ ಮಹಾತ್ಮರನ್ನು ಗುರ್ತಿಸುವ ಸುಲಭ ಶಕ್ತಿಯಿರುತ್ತದೆ. ಹಾಗಾಗಿ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಕಾಮಾರಪುಕುರ ಎಂಬ ಹಳ್ಳಿಯಲ್ಲಿ ಹುಟ್ಟಿದ ಗದಾಧರ ಎಂಬ ವ್ಯಕ್ತಿಯನ್ನು ಭಾರತೀಯರು ರಾಮ ಮತ್ತು ಕೃಷ್ಣರ ಮರು ಅವತಾರ ಎಂದು ಸುಲಭವಾಗಿ ನಂಬಿತು. ಅವರ ಪತ್ನಿ ಶಾರದಾಮಾತೆಯನ್ನು ಸೀತೆಯ ಮರು ಅವತಾರವೆಂದು ಸ್ವೀಕರಿಸಿತು!
ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಜೀವಿತಾವಧಿಯಲ್ಲಿ ತಾನೇ ಹಿಂದೆ ರಾಮ, ಕೃಷ್ಣನಾಗಿದ್ದೆ ಎನ್ನುವುದನ್ನು ಹಲವು ಸಂದರ್ಭಗಳಲ್ಲಿ ಸೂಚಿಸಿದ್ದಾರೆ. ಅವರ ಮುಖ್ಯಶಿಷ್ಯರಲ್ಲಿ ಒಬ್ಬರಾಗಿದ್ದ ಸ್ವಾಮಿ ಬ್ರಹ್ಮಾನಂದರನ್ನು ಅವರು ರಾಖಾಲ್ ಎಂದು ಕರೆಯುತ್ತಿದ್ದರು. ತಾನು ಕೃಷ್ಣನಾಗಿದ್ದಾಗ ತನ್ನೊಂದಿಗೆ ದನ ಕಾಯುತ್ತಿದ್ದ ರಾಖಾಲನೇ ಇಂದಿನ ಬ್ರಹ್ಮಾನಂದ ಎಂದು ಹೇಳುತ್ತಿದ್ದರು. ಗಿರೀಶ್‌ಚಂದ್ರ ಘೋಷ್ ಒಮ್ಮೆ; ಹಿಂದೆ ಯಾರು ರಾಮನಾಗಿದ್ದನೋ, ಕೃಷ್ಣನಾಗಿದ್ದನೋ, ಅವನೇ ಇಂದು ಶ್ರೀರಾಮಕೃಷ್ಣನಾಗಿದ್ದಾನೆ ಎಂದಿದ್ದನ್ನು ರಾಮಕೃಷ್ಣರು ಸಮ್ಮತಿಸಿದ್ದರು.
ಶಾರದಾಮಾತೆ ರಾಮೇಶ್ವರಕ್ಕೆ ಹೋಗಿದ್ದಾಗ ತಾನು ಸೀತೆ ಎಂಬ ಲಕ್ಷಣವೊಂದನ್ನು ಪರೋಕ್ಷವಾಗಿ ತೋರಿದ್ದರು. ಇಂತಹ ಪರಮಹಂಸ ಮತ್ತು ಶಾರದಾಮಾತೆಯ ನಡುವಿನ ವಯಸ್ಸಿನ ಅಂತರ 18 ವರ್ಷ! ಇವರಿಬ್ಬರು ವಿವಾಹವಾದಾಗ ಇಬ್ಬರ ವಯಸ್ಸೆಷ್ಟು ಗೊತ್ತಾ? ಶಾರದಾಮಾತೆಗೆ 5, ಶ್ರೀರಾಮಕೃಷ್ಣರಿಗೆ 23 ವರ್ಷ! ಜಯರಾಂಬಟಿ ಮಾತೆಯವರ ಹುಟ್ಟೂರು. ಅದರ ಪಕ್ಕ ಸಿಹೋರ್ ಎಂಬ ಹಳ್ಳಿಯಿದೆ. ಅಲ್ಲಿನ ಜಾತ್ರೆಗೆ 3 ವರ್ಷದ ಶಾರದಾ ಮಾತೆ ಹೋಗಿದ್ದಾಗ ಒಂದು ಅಚ್ಚರಿಯ ಘಟನೆ ನಡೆದಿತ್ತು.
ಅಲ್ಲೊಬ್ಬರು ಹೆಂಗಸು, ಅಲ್ಲಿರುವ ಹುಡುಗರನ್ನೆಲ್ಲ ತೋರಿಸಿ ನೀನು ಯಾರನ್ನು ಮದುವೆಯಾಗುತ್ತೀಯ ಎಂದು ಕೇಳಿದರು. ಆ ಪುಟ್ಟ ಹುಡುಗಿ ಅಲ್ಲೇ ತುಸು ದೂರದಲ್ಲಿ ಕುಳಿತಿದ್ದ ರಾಮಕೃಷ್ಣರತ್ತ ಕೈದೋರಿದ್ದರು! ಇಡೀ ಜೀವನಪೂರ್ತಿ ಈ ಇಬ್ಬರೂ ಪರಸ್ಪರ ದೈಹಿಕವಾಗಿ ಸೇರಲೇ ಇಲ್ಲ. ರಾಮಕೃಷ್ಣರ ಪಕ್ಕದಲ್ಲಿ ಒಮ್ಮೆ ಶಾರದಾಮಾತೆ ಮಲಗಿದ್ದರು. ಆಗ ಶ್ರೀರಾಮಕೃಷ್ಣರಿಗೆ ಅನಿಸಿತು, ನಿಜಕ್ಕೂ ನಾನು ಕಾಮಮುಕ್ತನಾಗಿರುವೆನಾ? ಓ ದೇಹವೇ, ನಿನಗೆ ನಿಜಕ್ಕೂ ಅದು ಬೇಕಿದ್ದರೆ, ಇಲ್ಲಿ ಪಕ್ಕದಲ್ಲಿದೆ ಒಪ್ಪಿಸಿಕೊ ಎಂದು ಶ್ರೀಮಾತೆಯವರ ಮೇಲೆ ಕೈಇಡಲು ಹೋದರು.
ಕೂಡಲೇ ಅವರು ಬಾಹ್ಯಪ್ರಜ್ಞೆಯನ್ನು ಕಳೆದುಕೊಂಡು ಗಾಢಸಮಾಧಿಗೆ ಹೋದರು. ಅವತ್ತಿನಿಂದ ಪರಮಹಂಸರಿಗೆ ತಮ್ಮ ಬ್ರಹ್ಮಚರ್ಯದ ಮೇಲೆ ಎಂದಿಗೂ ಅನುಮಾನ ಮೂಡಲಿಲ್ಲ. ತಮ್ಮ ಜೀವನಪೂರ್ತಿ ಶಾರದಾ ಮಾತೆಯನ್ನು ಕಾಳಿಯಂತೆ ಪೂಜಿಸುತ್ತ ಬದುಕಿದರು. ರಾಮಕೃಷ್ಣರು ದೇಹತ್ಯಾಗ ಮಾಡಿದ ಮೇಲೂ ಶಾರದಾಮಾತೆ ತಾಳಿಯನ್ನು ತೆಗೆದಿಡಲಿಲ್ಲ, ಪರಮಹಂಸರಿಗೆ ಸಾವಿಲ್ಲ ಎನ್ನುವುದು ಅವರ ನಂಬಿಕೆಯಾಗಿತ್ತು. ಕಲಿಯುಗದ ಶ್ರೀರಾಮ- ಸೀತೆಯ ಬದುಕು, ಪ್ರೀತಿ ಹೀಗಿತ್ತು.
* ನಿರೂಪ