ಪತ್ರ ಓದಿ ಬಹಳ ಖುಷಿಯಾಗಿತ್ತು. ಅವಳೇ ಕೊಡಿಸಿದ, ಅವಳಿಗೆ ಇಷ್ಟವಾದ ನೀಲಿ ಬಣ್ಣದ ಅಂಗಿ ಹಾಕಿಕೊಂಡು ಅವಳ ಪ್ರೀತಿಯ ಗುಲಾಬಿ ಹೂ ಮತ್ತು ಡೈರಿ ಮಿಲ್ಕ್ ಚಾಕ್ಲೆಟ್ ತಗೆದುಕೊಂಡು ಹೋಗಿದ್ದೆ. ಅವಳು ಸಂತೋಷದಿಂದಲೇ ಅವನ್ನು ತೆಗೆದುಕೊಂಡು, ಕೇಕ್ ಕಟ್ ಮಾಡಿ, ಹಾಡು ಹಾಡುತ್ತಾ ತೊಡೆಯ ಮೇಲೆ ಮಲಗಿದ್ದಳು…
“ನಿಜ ಹೇಳುತ್ತೇನೆ ಹುಡುಗ. ನೀನು ಬೇರೆ ಹುಡುಗಿಯರ ಜೊತೆ ಮಾತಾಡಿದರೆ ನನಗೆ ತುಂಬಾ ಕೋಪ ಬರುತ್ತೆ, ನೀನು ನನಗೆ ಬೇಕು. ನನಗೇ ಬೇಕು ಅನ್ನೋ ಹುಚ್ಚು ಪ್ರೀತಿ ಕಣೋ ನಂದು. ನಾನು ನಿನ್ನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡಿದ್ದೀನಿ. ನೀನು ನನ್ನ ತೊಡೆ ಮೇಲೆ ಮಲಗೋದು, ಕೈ- ಕೈ ಹಿಡಿದುಕೊಂಡು ಪಾರ್ಕಿನ ತುಂಬಾ ಅಡ್ಡಾಡೋದು ಅಂದ್ರೆ ನನಗೆ ಬಹಳ ಇಷ್ಟ. ಜೊತೇಲಿ ಇದ್ದಾಗಲೆಲ್ಲ ನಿನ್ನ ಕೈ ಬಿಡಲೇಬಾರದು, ಸೂರ್ಯ ಮುಳುಗಿ ಸಂಜೆಯಾಗಲೇಬಾರದು ಅನ್ನಿಸುತ್ತೆ.
ಇದಕ್ಕಿಂತಲೂ ಇಷ್ಟವಾಗೋದು ಏನು ಗೊತ್ತಾ? ನಿನ್ನ ಮುದ್ದು ಮಾತು, ಅದರಲ್ಲೂ ನಿನ್ನ ತುಂಟತನ. ತುಂಟ ಮಾತುಗಳು ನನಗೆ ಬಹಳ ಇಷ್ಟ. ನಾನು ಯಾವಾಗಲೂ ಅದನ್ನೇ ನೆನಪು ಮಾಡಿಕೊಳ್ಳುತ್ತಾ ಮಲಗುತ್ತೇನೆ. ಆವಾಗ ಏನೋ ಒಂಥರಾ ಖುಷಿ. ನಿನ್ನ ಹೆಗಲ ಮೇಲೆ ತಲೆ ಇಟ್ಟು ಮಗು ಥರ ಮಲಗಬೇಕು ಅನ್ನೋ ಆಸೆ ಕಣೋ. ನೀನು ಯಾವಾಗಲೂ ನನ್ನ ಜೊತೆಯೇ ಇರಬೇಕು ಅನ್ನುವುದೊಂದೇ ನನ್ನ ಹಿರಿಯಾಸೆ. ನೀನಿಲ್ಲದ ಬದುಕನ್ನು ಊಹಿಸಿಕೊಳ್ಳೋದೂ ಕಷ್ಟ.
ಏಳು ವರ್ಷದಿಂದ ನನ್ನ ಹುಟ್ಟುಹಬ್ಬವನ್ನು ನೀನು ಬಹಳ ಖುಷಿಯಿಂದ ನನ್ನ ಜೊತೇನೆ ಆಚರಿಸಿದ್ದಿಯಾ. ಈ ಸಾರಿ ನಿನ್ನ ಬರ್ತ್‌ಡೇ ಆಚರಣೆ ಎಲ್ಲಾ ನಂದು. ಪ್ರತಿ ವರ್ಷಕ್ಕಿಂತ ಈ ವರ್ಷ ನಿಂಗೆ ಬಹಳ ಖುಷಿ ಇರುತ್ತೆ ಅನ್ಕೋತೀನಿ; ನಿನಗೂ ದೊಡ್ಡ ಗಿಫ್ಟ್ ಇದೆ…’
ಈ ವಿವರಣೆಯಿದ್ದ ಪತ್ರ ಓದಿ ಬಹಳ ಖುಷಿಯಾಗಿತ್ತು. ಅವಳೇ ಕೊಡಿಸಿದ, ಅವಳಿಗೆ ಇಷ್ಟವಾದ ನೀಲಿ ಬಣ್ಣದ ಅಂಗಿ ಹಾಕಿಕೊಂಡು ಅವಳ ಪ್ರೀತಿಯ ಗುಲಾಬಿ ಹೂ ಮತ್ತು ಡೈರಿ ಮಿಲ್ಕ್ ಚಾಕ್ಲೆಟ್ ತಗೆದುಕೊಂಡು ಹೋಗಿದ್ದೆ. ಅವಳು ಸಂತೋಷದಿಂದಲೇ ಅವನ್ನು ತೆಗೆದುಕೊಂಡು, ಕೇಕ್ ಕಟ್ ಮಾಡಿ, ಹಾಡು ಹಾಡುತ್ತಾ ತೊಡೆಯ ಮೇಲೆ ಮಲಗಿದ್ದಳು. ಏನೋ ತಂಪು ಹತ್ತಿದಂತಾಗಿ ನೋಡಿದರೆ ನನ್ನ ತೊಡೆ ಅವಳ ಕಣ್ಣೀರಿನಿಂದ ಒದ್ದೆಯಾಗಿತ್ತು. ಅಯ್ಯೋ ಅಳುತ್ತಿದ್ದಾಳಲ್ಲ ಅನ್ನಿಸಿ ಗಾಬರಿಯಾಯಿತು. ದಡಬಡಿಸಿ ಮೇಲೆದ್ದು “ಯಾಕೆ ಅಳುತ್ತಿದ್ದೀಯಾ?’ ಎಂದರೆ ಮರು ಮಾತಿಲ್ಲದೆ ಒಂದು ಕಾರ್ಡನ್ನು ಕೈಗಿಟ್ಟಳು. ಹುಟ್ಟುಹಬ್ಬಕ್ಕೆ ಕೊಟ್ಟಿರೋ ಕಾರ್ಡ್ ಇದು. ಎಮೋಷನ್ ತಡೆಯಲು ಸಾಧ್ಯವಾಗದೆ ಅಳುತ್ತಾ ಇದ್ದಾಳೇನೋ ಎಂದುಕೊಂಡು ತೆಗೆದು ನೋಡಿದರೆ, ಅದು ಅವಳ ಮದುವೆಯ ಕರೆಯೋಲೆಯಾಗಿತ್ತು.
ಅವಾಗಲೇ ಗೊತ್ತಾಗಿದ್ದು, ಅದೇ ಅವಳು ಕೊಡಬೇಕು ಎಂದಿದ್ದ ಸರ್‌ಪ್ರೈಸ್ ಎಂದು. ಅಳುತ್ತಾ “ನನ್ನನ್ನು ಕ್ಷಮಿಸಿ ಬಿಡು’ ಎಂದವಳನ್ನು ಮತ್ತೆ ನೋಡಿದ್ದು ಮದುಮಗಳಾಗಿಯೇ…
– ಕಿರಣ ಪಿ. ನಾಯ್ಕನೂರ, ಗದಗ