ಬೆಂಗಳೂರು: ರಾಜ್ಯದ ಪ್ರವಾಹಪೀಡಿತ ಪ್ರದೇಶಗಳು ಸೇರಿ ವಿವಿಧ ಜಿಲ್ಲೆಗಳಲ್ಲಿ ದುರಸ್ತಿಗೊಳ್ಳಬೇಕಿರುವ ಶಾಲೆಗಳ ಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ. 7492 ಪ್ರಾಥಮಿಕ ಮತ್ತು 285 ಪ್ರೌಢಶಾಲೆಗಳು ಸೇರಿ 7,777 ಶಾಲೆಗಳು ದುರಸ್ತಿಗೊಳ್ಳಬೇಕಿದೆ. ಒಟ್ಟಾರೆ 53 ಕೋಟಿ ರೂ. ಅನುದಾನ ಅವಶ್ಯವಿದೆ. 33 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ತಿಳಿಸಿದೆ. ಅಂದರೆ, ಅಂದಾಜು 20 ಕೋಟಿ ರೂ. ಅನುದಾನ ಕೊರತೆ ಉಂಟಾಗಲಿದೆ.
7,492 ಶಾಲೆಗಳ ದುರಸ್ತಿಗಾಗಿ ಪ್ರಾಥಮಿಕ ಶಾಲೆಗಳಿಗೆ 32.4 ಕೋಟಿ ರೂ. ಹಾಗೂ ಪ್ರೌಢಶಾಲೆಗೆ 20.72 ಕೋಟಿ ರೂ.ಗಳ ಅವಶ್ಯವಿದೆ. ಒಂದು ಘಟಕಕ್ಕೆ (ಒಂದು ಕೊಠಡಿ) 2 ಲಕ್ಷ ರೂ.ಗಳ ವರೆಗೆ ಅನುದಾನ ನೀಡಲಾಗುತ್ತದೆ. ಪ್ರಾಥಮಿಕ ಶಾಲೆಗೆ 12.53 ಕೋಟಿ ರೂ. ಹಾಗೂ ಪ್ರೌಢಶಾಲೆಗೆ 21.28 ಕೋಟಿ ರೂ. ಸೇರಿ 33.81 ಕೋಟಿ ರೂ.ಗಳನ್ನು ಅನುದಾನ ಪಡೆಯಬಹುದಾಗಿದೆ ಎಂದು ತಿಳಿಸಿದೆ.
ಪ್ರಾಥಮಿಕ ಶಾಲೆಗಳ ಪೈಕಿ ಚಿಕ್ಕೋಡಿಯಲ್ಲಿ ಅತಿ ಹೆಚ್ಚು 1,305 ಶಾಲೆಗಳು ಹಾಳಾಗಿವೆ. ನಂತರದ ಸ್ಥಾನದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 1,074, ಗದಗ 1,025, ಬೆಳಗಾವಿಯಲ್ಲಿ 868, ಹಾವೇರಿ 464, ಮೈಸೂರು 450 ಶಾಲೆಗಳು ದುರಸ್ತಿಗೊಂಡಿವೆ. ಕಲಬುರಗಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಯಾವುದೇ ಶಾಲೆಗಳು ದುರಸ್ತಿಗೊಂಡಿಲ್ಲ ಎಂದು ಮಾಹಿತಿ ನೀಡಲಾಗಿದೆ.
ಪ್ರೌಢಶಾಲೆಗಳ ಪೈಕಿ ಮಂಗಳೂರಿನಲ್ಲಿ ಅತಿ ಹೆಚ್ಚು 95 ಶಾಲೆಗಳು ದುರಸ್ತಿಗೊಂಡಿವೆ. ನಂತರ ಶಿವಮೊಗ್ಗ 87, ಬೆಳಗಾವಿಯಲ್ಲಿ 57 ಶಾಲೆಗಳು ದುರಸ್ತಿಗೊಂಡಿದ್ದು, ಕೊಪ್ಪಳದಲ್ಲಿ ಯಾವುದೇ ಶಾಲೆಗಳು ದುರಸ್ತಿಗೊಂಡಿಲ್ಲ.
ಸದ್ಯ ಶಾಲೆಗಳನ್ನು ಎಣಿಕೆ ಮಾಡಲಾಗಿದೆ. ಕೊಠಡಿಗಳ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲಾ ಪಂಚಾಯಿತಿಗಳ ಮೂಲಕ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಸ್ಥಳೀಯ ಎಂಜಿನಿಯರ್‌ಗಳು ದುರಸ್ತಿಗೆ ತಗಲುವ ವೆಚ್ಚದ ಪಟ್ಟಿಯನ್ನು ಸಿದ್ಧಗೊಳಿಸುತ್ತಿದ್ದಾರೆ. ಸದ್ಯದಲ್ಲಿಯೇ ಸಂಪೂರ್ಣ ಚಿತ್ರಣ ಸಿಗಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಪ್ರವಾಹದಿಂದ ರಾಜ್ಯದ 50 ಸಾವಿರಕ್ಕೂ ಹೆಚ್ಚು ಶಾಲೆಗಳು ಶಿಥಿಲಗೊಂಡಿರುವ ಬಗ್ಗೆ “
ಉದಯವಾಣಿ’ ಆಗಸ್ಟ್ 12 ರಂದು ವಿಶೇಷ ವರದಿ ಮಾಡಿತ್ತು.