ನಿಯೋನ್ (ಸ್ವಿಟ್ಜರ್‌ಲ್ಯಾಂಡ್): ಆಸ್ಟ್ರೇಲಿಯದ ಮಾಜಿ ಕ್ರಿಕೆಟ್ ಆಟಗಾರ್ತಿ ಲಿಸಾ ಸ್ಥಾಲೇಕರ್ ಅವರನ್ನು ಫೆಡರೇಶನ್ ಆಫ್ ಇಂಟರ್‌ನ್ಯಾಶನಲ್ ಕ್ರಿಕೆಟರ್ ಅಸೋಸಿಯೇಶನ್ (ಎಫ್ಐಸಿಎ) ನ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಎಫ್ಐಸಿಎ ಅಧ್ಯಕ್ಷರಾಗಿ ವನಿತೆಯೊಬ್ಬರನ್ನು ಆಯ್ಕೆ ಮಾಡುತ್ತಿರುವುದು ಇದೇ ಮೊದಲ ಸಲವಾಗಿದೆ.
ಸ್ವಿಟ್ಜರ್‌ಲ್ಯಾಂಡಿನ ನಿಯೋನ್‌ನಲ್ಲಿ ನಡೆದ ಎಫ್ಐಸಿಎ ಕಾರ್ಯಕಾರಿ ಸಮಿತಿ ಸಭೆಯಲ್ಲಿ 2013ರ ವನಿತಾ ವಿಶ್ವಕಪ್ ವಿಜೇತೆ ಸ್ಥಾಲೇಕರ್ ಅವರನ್ನು ಈ ಸ್ಥಾನಕ್ಕೆ ನೇಮಕ ಮಾಡಲು ನಿರ್ಧರಿಸಲಾಯಿತು.
ಇಂಗ್ಲೆಂಡಿನ ಕ್ರಿಕೆಟಿಗ ವಿಕ್ರಮ್ ಸೋಲಂಕಿ ಅವರ ಉತ್ತರಾಧಿಕಾರಿಯಾಗಿ ಸ್ಥಾಲೇಕರ್ ಕರ್ತವ್ಯ ನಿರ್ವಹಿಸಲಿದ್ದಾರೆ.
ಎಫ್ಐಸಿಎಯ ಹೊಸ ಅಧ್ಯಕ್ಷರಾಗಲು ಉತ್ಸುಕನಾಗಿದ್ದೇನೆ ಮತ್ತು ಇದೊಂದು ಗೌರವದ ಹೊಣೆಗಾರಿಕೆ ಎಂದು ಸ್ಥಾಲೇಕರ್ ಪ್ರತಿಕ್ರಿಯೆ ನೀಡಿದ್ದಾರೆ. ನಾವೀಗ ಆಟದ ಹೊಸ ಹಂತವನ್ನು ಪ್ರವೇಶಿಸುತ್ತಿದ್ದೇವೆ.
ಅದೀಗ ಪುರುಷ ಮತ್ತು ವನಿತಾ ಆಟಗಾರ್ತಿಯರಿಗೆ ಹೆಚ್ಚೆಚ್ಚು ಕ್ರಿಕೆಟ್ ಆಟವನ್ನು ಒಳಗೊಂಡಿದೆ. ಹೆಚ್ಚು ದೇಶಗಳು ಕ್ರಿಕೆಟ್ ಆಡುತ್ತಿರುವ ಕಾರಣ ಇದು ಖಂಡಿತವಾಗಿಯೂ ಜಾಗತಿಕ ಕ್ರೀಡೆ ಎಂಬುದನ್ನು ತೋರಿಸುತ್ತದೆ ಎಂದವರು ತಿಳಿಸಿದರು.