ಮೆಲ್ಬರ್ನ್ : ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾಜಿ ನಾಯಕಿ ಲೀಸಾ ಸ್ಥಾಲೇಕರ್ ಬಿಸಿಸಿಐ ನಡತೆ ವಿರುದ್ಧ ಆಕ್ರೋಶ ಹೊರಗೆಡಹಿದ್ದಾರೆ.
ಇತ್ತೀಚೆಗೆ ಭಾರತ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಮನೆಯಲ್ಲಿ ಎರಡು ದುರಂತ ಸಂಭವಿಸಿದರೂ ಬಿಸಿಸಿಐ ಅವರನ್ನು ಸಂಪರ್ಕಿಸಿಲ್ಲ, ಸಾಂತ್ವನವನ್ನೂ ಹೇಳಿಲ್ಲ ಎಂದು ಕಿಡಿಕಾರಿದ್ದಾರೆ.
“ವೇದಾ ಅವರನ್ನು ಇಂಗ್ಲೆಂಡ್ ಸರಣಿಗೆ ಏಕೆ ಆಯ್ಕೆ ಮಾಡಿಲ್ಲ ಎಂಬುದನ್ನು ನಾನಿಲ್ಲಿ ಪ್ರಸ್ನಿಸುವುದಿಲ್ಲ. ಆದರೆ ವೇದಾ ಬಿಸಿಸಿಐ ಒಡಂಬಡಿಕೆಗೆ ಒಳಪಡುವ ಆಟಗಾರ್ತಿ. ಅವರ ಕುಟುಂಬದಲ್ಲಿ ಎರಡು ದುರಂತ ಸಂಭವಿಸಿದರೂ ಬಿಸಿಸಿಐ ಕನಿಷ್ಠ ಆಕೆಯನ್ನು ಸಂಪರ್ಕಿಸಿ ಸಮಾಧಾನಪಡಿಸುವ ಸೌಜನ್ಯವನ್ನೂ ತೋರಿಲ್ಲ. ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ಇವರಿಗೆ ಮಾದರಿಯಾಗಬೇಕು.
ಅದು ಮಾಜಿ ಆಟಗಾರರನ್ನೂ ನಿರಂತರ ಸಂಪರ್ಕಿಸುತ್ತಲೇ ಇರುತ್ತದೆ’ ಎಂದು ಲೀಸಾ ಸ್ಥಾಲೇಕರ್ ನೋವಿನಿಂದ ಹೇಳಿದರು.
ಬಂಗಾಲದ ವಿಕೆಟ್ ಕೀಪರ್ ಶ್ರೀವತ್ಸ ಗೋಸ್ವಾಮಿ ಕೂಡ ಲೀಸಾ ಸ್ಥಾಲೇಕರ್ ಹೇಳಿಕೆಯನ್ನು ಬೆಂಬಲಿಸಿದ್ದಾರೆ.