Advertisement

60 ಲಕ್ಷ ಮೌಲ್ಯದ ಮದ್ಯ ಬಿಕರಿ

05:31 PM May 05, 2020 | Suhan S |

ವಿಜಯಪುರ: ಕೋವಿಡ್ 19 ಲಾಕ್‌ಡೌನ್‌ನಿಂದಾಗಿ ಒಂದೂವರೆ ತಿಂಗಳಿಂದ ಬಂದ್‌ ಆಗಿದ್ದ ಮದ್ಯದಂಗಡಿಗಳು ಜಿಲ್ಲಾದ್ಯಂತ ಸೋಮವಾರ ಆರಂಭಗೊಂಡಿವೆ. ಸೋಮವಾರ ಒಂದೇ ದಿನ ಜಿಲ್ಲಾದ್ಯಂತ 60 ಲಕ್ಷ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಅಬಕಾರಿ ಮೂಲಗಳು ತಿಳಿಸಿವೆ.

Advertisement

ಕಳೆದ 40 ದಿನಗಳಿಂದ ನಿಷೇಧಗೊಂಡಿದ್ದ ಮದ್ಯ ಮಾರಾಟವೂ ಸೋಮವಾರದಿಂದ ಆರಂಭಗೊಂಡಿದೆ. ಮದ್ಯದ ಅಂಗಡಿಗಳ ಮುಂದೆ ಸಾಲುಗಟ್ಟಿದ್ದ ಮದ್ಯವ್ಯಸನಿಗಳು ಮದ್ಯ ಕೊಳ್ಳುವ ಧಾವಂತದಲ್ಲಿದ್ದರು. ಸೀಲ್‌ಡೌನ್‌ ಮಾಡಲಾದ ಬಡಾವಣೆಗಳ ವ್ಯಾಪ್ತಿಯ ಐದು ವೈನ್‌ ಸ್ಟೋರ್ಸ್‌ ಗಳು ಬಂದ್‌ ಮಾಡಲಾಗಿದೆ. ಪ್ರಾಥಮಿಕ ಮಾಹಿತಿ ಜಿಲ್ಲೆಯಲ್ಲಿ ಪ್ರಕಾರ ಲೈಸನ್ಸ್‌ ಇರುವ 90 ವೈನ್‌ಶಾಪ್‌ಗ್ಳಲ್ಲಿ ಹಾಗೂ ಸರ್ಕಾರಿ ಮಾರಾಟದ 40 ಎಂಎಸ್‌ಐಎಲ್‌ ಮಳಿಗೆಗಳಿಂದ ಸೋಮವಾರ ಒಂದೇ ದಿನ 60 ಲಕ್ಷ ರೂ. ವಹಿವಾಟ ನಡೆದಿದೆ ಎಂದು ಅಬಕಾರಿ ಮೂಲಗಳು ತಿಳಿಸಿವೆ.

ಮರುಕಳಿಸಿದ ವೈಭವ: ಒಂದೂವರೆ ತಿಂಗಳಿನಿಂದ ಸಂಚಾರ ದಟ್ಟಣೆ ಇಲ್ಲದೇ ಬಿಕೋ ಎನ್ನುತ್ತಿದ್ದ ರಸ್ತೆಗಳು ಸೋಮವಾರ ಲಾಕ್‌ಡೌನ್‌ ಸಡಿಲಿಕೆಯಿಂದ ಮರಳಿ ವೈಭವ ಪಡೆದಿದ್ದವು. ಮದ್ಯದ ಅಂಗಡಿಗಳೊಂದಿಗೆ ಚಿನ್ನ, ಬಟ್ಟೆ, ಮೊಬೈಲ್‌ ಶಾಪ್‌ ಸೇರಿದಂತೆ ವಿವಿಧ ವಹಿವಾಟು ಆರಂಭಗೊಂಡಿವೆ. ಆದರೆ ಮದ್ಯದ ಹೊರತಾಗಿ ಇತರೆ ಅಂಗಡಿಗಳಲ್ಲಿ ಕೊಳ್ಳುವವರೇ ಇಲ್ಲದೇ ಬಹುತೇಕ ವಹಿವಾಟು ನಿಸ್ತೇಜವಾಗಿತ್ತು.

ರಸ್ತೆಗಿಳಿದ ವಾಹನಗಳು: ಲಾಕ್‌ಡೌನ್‌ ಸಡಿಲಿಕೆ ಇದ್ದರೂ ಬಸ್‌ ಸಂಚಾರ ಆರಂಭಗೊಂಡಿರಲಿಲ್ಲ. ಆದರೆ ದ್ವಿಚಕ್ರ ವಾಹನದಲ್ಲಿ ಒಬ್ಬರ ಪ್ರಯಾಣ, ಲಘು ವಾಹನಗಳಲ್ಲಿ ಇಬ್ಬರು-ಮೂವರು ಮಾತ್ರ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯುವ ಷರತ್ತು ವಿಧಿಸಲಾಗಿತ್ತು. ಹೀಗಾಗಿ ಏಕಾಏಕಿ ಸಾವಿರಾರು ವಾಹನಗಳು ಬೀದಿಗೆ ಇಳಿದಿದ್ದವು. ಇದರಿಂದ ಲಾಕ್‌ ಡೌನ್‌ ಬಳಿಕ ಸಂಚಾರವಿಲ್ಲದೇ ನಿರ್ಜನವಾಗಿದ್ದ ರಸ್ತೆಗಳು ಮರಳಿ ಹಳೆಯ ವೈಭವ ಪಡೆದಿವೆ. ಇತರೆ ಅಂಗಡಿ ಆರಂಭ: ಇನ್ನು ಚಿನ್ನ, ಬಟ್ಟೆಯಂಥ ಇತರೆ ವಹಿವಾಟಿಗೂ ಅವಕಾಶ ಕಲ್ಪಿಸಿದ್ದರಿಂದ ಬಹುತೇಕ ವ್ಯಾಪಾರ ಆರಂಭಗೊಂಡಿದ್ದವು. ಚಿನ್ನದ ವ್ಯಾಪಾರ ಆರಂಭಗೊಂಡಿದ್ದರೂ ನೀರಸವಾಗಿತ್ತು. ಬಟ್ಟೆ ವ್ಯಾಪಾರಿಗಳು ಕೊಳ್ಳುವವರಿಲ್ಲದೇ ಲಾಕ್‌ ಡೌನ್‌ ಸಡಿಲಿಕೆ ಮೊದಲ ದಿನವೇ ಮಂಕಾಗಿದ್ದರು.

ಮೊಬೈಲ್‌ ಅಂಗಡಿಗಳು ಕೂಡ ತೆರೆದಿದ್ದರೂ ನಿರೀಕ್ಷಿತ ವ್ಯಾಪಾರ ಇರಲಿಲ್ಲ. ಲಾಕ್‌ಡೌನ್‌ ಸಡಿಲಿಕೆ ಇದ್ದರೂ ಬಸ್‌ ಸಂಚಾರ ಇಲ್ಲದೇ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನಗರ ಪ್ರದೇಶಗಳಿಗೆ ಬರಲು ಸಾಧ್ಯವಾಗಿಲ್ಲ. ಸ್ವಂತ ವಾಹನ ಇದ್ದರೂ ಬೈಕ್‌ನಲ್ಲಿ ಒಬ್ಬರಿಗೆ, ಕಾರುಗಳಲ್ಲಿ ಚಾಲಕ ಸೇರಿ ಮೂವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಇದೆ. ಮತ್ತೂಂದೆಡೆ ಒಂದೂವರೆ ತಿಂಗಳಿಂದ ಕೆಲಸ ಇಲ್ಲದೇ ಇರುವ ದುಡ್ಡನ್ನು ಕುಳಿತು ಉಣ್ಣುವುದಕ್ಕೆ ಬಳಸಿದ್ದಾರೆ. ಕಾರಣ ಜನರಲ್ಲಿ ಆರ್ಥಿಕ ಶಕ್ತಿ ಇಲ್ಲದ್ದರಿಂದ ಮಾರುಕಟ್ಟೆಯಲ್ಲಿ ಕೊಳ್ಳುವ ಧಾವಂತ ಕಂಡು ಬರಲಿಲ್ಲ.

Advertisement

ನಗರದ ಪ್ರಮುಖ ವ್ಯಾಪಾರಿ ಕೇಂದ್ರವಾದ ಲಾಲಬಹಾದ್ದೂರ ಶಾಸ್ತ್ರಿ ಮಾರುಕಟ್ಟೆ ಪ್ರದೇಶದಲ್ಲಿ ಬೆಳಿಗ್ಗೆ ವಹಿವಾಟು ಆರಂಭಗೊಂಡಿತ್ತು. ಆದರೆ ಇಕ್ಕಾಟ್ಟಾದ ಪ್ರದೇಶ ಇರುವ ಕಾರಣ ಪೊಲೀಸರು ಈ ವಾಣಿಜ್ಯ ಕೇಂದ್ರದಲ್ಲಿ ವಹಿವಾಟು ಬಂದ್‌ ಮಾಡಿಸಿದ್ದರು. ಲಾಕ್‌ಡೌನ್‌ ಬಳಿಕ ನಗರದ ಹೊರ ಪ್ರದೇಶದಲ್ಲಿ ತರಕಾರಿ ಮಾರುಕಟ್ಟೆಗೆ ವ್ಯವಸ್ಥೆ ಮಾಡಿದ್ದರಿಂದ ನಗರದ ತರಕಾರಿ ಮಾರುಕಟ್ಟೆಯಲ್ಲಿ ವಹಿವಾಟು ಕಂಡು ಬರಲಿಲ್ಲ.

ಬ್ಯಾಂಕ್‌ಗಳೆದುರು ಸರದಿ: ಇನ್ನು ಬ್ಯಾಂಕ್‌ಗಳ ಮುಂದೆ ಜನರು ಕೃಷಿ ಸಮ್ಮಾನ ಸೇರಿದಂತೆ ವಿವಿಧ ಯೋಜನೆಗಳ ಹಣ ಪಡೆಯಲು ಜನರು ಸಾಲುಗಟ್ಟಿದ್ದರು. ಹಲವು ಬ್ಯಾಂಕ್‌ಗಳಲ್ಲಿ ವಿವಿಧ ಯೋಜನೆಗಳ ಹಣ ಜಮೆ ಆಗಿರುವ ಮಾಹಿತಿ-ಹಣ ಪಡೆಯುವ ಕುರಿತು ಗ್ರಾಹಕರು ಹಾಗೂ ಬ್ಯಾಂಕ್‌ ಸಿಬ್ಬಂದಿ ಮಧ್ಯೆ ಸಣ್ಣ ಮಟ್ಟದ ಸಿಡುಕುಗಳು ಕಂಡು ಬಂದವು. ಸಾರ್ವಜನಿಕ ಸಂಚಾರಕ್ಕೆ ಬಸ್‌ ಸಂಚಾರ ಇಲ್ಲದಿದ್ದರೂ ಸರ್ಕಾರ ಹೊರ ಜಿಲ್ಲೆಯವರು ತಮ್ಮ ತವರಿಗೆ ಮರಳಲು ಉಚಿತವಾಗಿ ಬಸ್‌ ಸೌಲಭ್ಯ ಕಲ್ಪಿಸಿದೆ. ಹೀಗಾಗಿ ಜಿಲೆಯಲ್ಲಿರುವ ಹೊರ ಪ್ರದೇಶಗಳ ಜನರು ಬಸ್‌ ನಿಲ್ದಾಣದ ಕೌಂಟರ್‌ ಮುಂದೆ ಸಾಲುಗಟ್ಟಿದ್ದರು. ಬೆಂಗಳೂರಿನಲ್ಲಿರುವ ಜಿಲ್ಲೆಯ ಕಾರ್ಮಿಕರನ್ನು ಕರೆತರಲು ಜಿಲ್ಲೆಯ ವಿವಿಧ ವಿಭಾಗಗಳಿಂದ ನಿನ್ನೆ 60 ಬಸ್‌ಗಳು ತೆರಳಿದ್ದು, ಇಂದು ಮತ್ತೆ 70 ಬಸ್‌ಗಳು ಬೆಂಗಳೂರಿಗೆ ಪ್ರಯಾಣ ಬೆಳೆಸಿವೆ. ಈ ಬಸ್‌ಗಳಲ್ಲಿ ಬೆಂಗಳೂರು ಭಾಗದ ಜಿಲ್ಲೆಗಳಿಗೆ ಹೋಗಲು ಜನರು ಕೌಂಟರ್‌ ಮುಂದೆ ಸಾಲುಗಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next