ಜಮಖಂಡಿ: ದೇವರು ಮತ್ತು ಸಮಾಜ ಎರಡು ಒಂದೇ ಆಗಿದ್ದು, ಸಮಾಜದ ಕಾಯಕ ದಾಸೋಹವೇ ದೇವರ ಸೇವೆ. ಮುಗ್ಧ ಜೀವಿಗಳ ಅಳಿಲು ಸೇವೆಗಳು ದೇವರ ಸೇವೆ. ಜೀವಿಗಳನ್ನು ಬಿಟ್ಟು ದೇವರಿಲ್ಲ ಬಹಿರಂಗ ಪೂಜೆಗೆ ಬೆಲೆಯಿಲ್ಲ ಎಂದು ಬಸವಜ್ಯೋತಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಪ್ರೊ| ಬಸವರಾಜ ಕಡ್ಡಿ ಹೇಳಿದರು.
ನಗರದ ಡಾ| ರಂಗನಾಥ ಸೋನವಾಲ್ಕರ್ ಸದನ ಆವರಣದಲ್ಲಿ ಲಯನ್ಸ್ ಸಂಸ್ಥೆ ಹಮ್ಮಿಕೊಂಡಿದ್ದ ಲಯನ್ಸ್ ಸಂಸ್ಥೆಯ 11ನೇ ಪ್ರಾಂತೀಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಲಯನ್ಸ್ ಸಂಸ್ಥೆ 317ಬಿ ಜಿಲ್ಲಾ ಪ್ರಥಮ ಉಪಗವರ್ನರ್ ಸುಗ್ಗಲಾ ಯಳಮೇಲಿ ಮಾತನಾಡಿ, ರಕ್ತನಿಧಿ, ಕಣ್ಣಿನ ಆಸ್ಪತ್ರೆ ಸಹಿತ ಲಯನ್ಸ್ ಸಂಸ್ಥೆ ಗುರುತಿಸಿರುವ ಶಾಶ್ವತ ಯೋಜನೆ ಕೈಗೊಳ್ಳಬೇಕು. ಶಾಶ್ವತ ಯೋಜನೆಗಳಿಗಾಗಿ ಸಾಕಷ್ಟು ಅನುದಾನ ಲಭ್ಯವಿದೆ. ಕ್ಯಾನ್ಸರ್ ಜಾಗೃತಿ, ಹಸಿವು ನಿವಾರಣೆ ಕಾರ್ಯಕ್ರಮ ಸಹಿತ ವಿವಿಧ ಸೇವೆಗಳ ಯೋಜನೆಗಳಿಗೆ ಅನುದಾನ ಲಭ್ಯವಿದೆ ಎಂದರು.
ಮೂಡಲಗಿ ತಾಲೂಕು ಕಸಾಪ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ| ಸಂಜಯ ಶಿಂಧೆಹಟ್ಟಿ ಹಾಗೂ ಆಲಬಾಳ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಎಸ್. ಬೃಂಗಿಮಠ ಅವರನ್ನು ಸನ್ಮಾನಿಸಲಾಯಿತು.
ಲಯನ್ಸ್ ಸಂಸ್ಥೆ ಹೊರತಂದಿರುವ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಜಮಖಂಡಿ ಲಯನ್ಸ್ ಸಂಸ್ಥೆಗೆ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮ ಜರುಗಿತು. ಆನಂದ ಚೌಗಲಾ ಹಾಗೂ ರಮೇಶ ಕೋರೆ ಅವರಿಗೆ ಲಯನ್ಸ್ ಸಂಸ್ಥೆಯ ಪಿನ್ ಮತ್ತು ಸದಸ್ಯತ್ವ ಪ್ರಮಾಣ ಪತ್ರ ನೀಡಲಾಯಿತು.
ಲಯನ್ಸ್ ಸಂಸ್ಥೆ ಎಚ್.ಆರ್.ಮಹಾರಡ್ಡಿ, ವಲಯ-ಎ ಚೇರಮನ್ ಸಂಜೀವಕುಮಾರ ಓಸ್ವಾಲ್, ವಲಯ-ಸಿ ಚೇರಮನ್ ವಿಶ್ವನಾಥ ಗುಂಡಾ, ಡಾ| ಎಚ್.ಜಿ.ದಡ್ಡಿ, ಡಾ| ರೇಣುಕಾ ಸೋನವಾಲ್ಕರ, ಪಿ.ಡಿ.ಜನವಾಡ, ಡಾ| ಮಂಜುನಾಥ ಮಲಘಾಣ, ವಿಜಯ ಕಟಗಿ, ಬಿ.ಕೆ. ಕೊಣ್ಣೂರ, ಚಿನ್ಮಯ ಜಿರಲಿ, ಡಾ| ಶ್ರೀಶೈಲ ತೇಲಿ ಇದ್ದರು.