Advertisement
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಮುಂದಾಳತ್ವದಲ್ಲಿ ಬೆಂಗಳೂರಿನ ಅವರ ನಿವಾಸದಲ್ಲಿ ಬುಧವಾರ ಈ ಸಭೆ ನಡೆಯಿತು. ಅಖೀಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸೇರಿದಂತೆ ಮಹಾಸಭೆಯ ಪದಾಧಿಕಾರಿಗಳು ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮ ಪ್ರತಿಪಾದಿಸುವ ಬಸವರಾಜ ಹೊರಟ್ಟಿ ಮತ್ತು ಬಸವರಾಜ ರಾಯರಡ್ಡಿ ಸೇರಿದಂತೆ ಮುಂಚೂಣಿ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಇನ್ನೊಬ್ಬ ಮುಖಂಡ ಎಂ.ಬಿ. ಪಾಟೀಲ್ ಗೈರಾಗಿದ್ದರು.
Related Articles
Advertisement
ತಜ್ಞರ ಸಮಿತಿ: ವೀರಶೈವ ಮತ್ತು ಲಿಂಗಾಯತ ಎರಡೂ ಬೇರೆ ಎನ್ನುವುದನ್ನು ವಾದ ಮಾಡುತ್ತಿರುವ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಾರರು, ಯಾವ ಹೆಸರಿಗೆ ದಾಖಲೆಗಳು, ಪುರಾವೆಗಳಿದ್ದಾವೆ ಎನ್ನುವುದನ್ನು ಪರಿಶೀಲಿಸಲು ಕಾನೂನು ಮತ್ತು ಧಾರ್ಮಿಕ ವಿಷಯದಲ್ಲಿ ಪ್ರಾವಿಣ್ಯತೆ ಪಡೆದಿರುವ ತಜ್ಞರ ಸಮಿತಿ ರಚಿಸುವಂತೆ ಸಭೆಯಲ್ಲಿ ಸಲಹೆ ನೀಡಿದ್ದಾರೆ. ಅವರ ಸಲಹೆಯನ್ನು ಮಹಾಸಭೆಯ ಮುಖಂಡರು ಒಪ್ಪಿಕೊಂಡಿದ್ದು, ಮುಂದಿನ ಸಭೆಯಲ್ಲಿ ತಜ್ಞರ ಸಮಿತಿ ನೇಮಕ ಮಾಡುವ ತೀರ್ಮಾನ ಕೈಗೊಂಡಿರುವುದಾಗಿ ತಿಳಿದು ಬಂದಿದೆ.
ಮಹಾಸಭೆಗೆ ಶರಣು: ವೀರಶೈವ ಮಹಾಸಭೆಗೂ ಲಿಂಗಾಯತರಿಗೂ ಸಂಬಂಧ ಇಲ್ಲ ಎಂದು ಬಂಡಾಯ ಎದ್ದಿದ್ದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಗಾರರು, ಎಲ್ಲರೂ ಒಂದಾಗಿ ಹೋಗುವ ಕುರಿತು ಮಹಾಸಭೆಯ ನಾಯಕರ ಮಾತುಗಳಿಗೆ ಬೆಲೆ ಕೊಡಲು ಒಪ್ಪಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ, ಲಿಂಗಾಯತ ಹೋರಾಟಗಾರರು ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ಸಮಾವೇಶಗಳನ್ನು ನಡೆಸಲು ತೀರ್ಮಾನಿಸಿರುವುದರಿಂದ ಅವುಗಳನ್ನು ತಕ್ಷಣಕ್ಕೆ ರದ್ದುಗೊಳಿಸಲು ಹಿಂದೇಟು ಹಾಕಿದ್ದಾರೆ. ಸಮಾವೇಶ ಆಯೋಜಕರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿ, ತಮ್ಮ ಪ್ರತ್ಯೇಕತೆಯ ಹೋರಾಟವನ್ನು ಇನ್ನೂ ಜೀವಂತವಾಗಿಡುವ ಸೂಚನೆ ನೀಡಿದ್ದಾರೆ.
ವೀರ-ಲಿಂಗಾಯತ ಎಂದ ರಾಯರೆಡ್ಡಿ: ವೀರಶೈವದಲ್ಲಿ ಶೈವ ಪದ ಬರುವುದರಿಂದ ಶೈವ ಪಂಥದ ಆಚರಣೆ ಆಗುತ್ತದೆ. ಅದು ಮತ್ತೆ ಹಿಂದೂ ಧರ್ಮವನ್ನೇ ಅನುಕರಣೆ ಮಾಡಿದಂತಾಗುತ್ತದೆ. ಹೀಗಾಗಿ ಹಿಂದೂ ಧರ್ಮದಿಂದ ಸಂಪೂರ್ಣ ಭಿನ್ನವಾಗಿರಬೇಕೆಂದರೆ, ಶೈವ ಆಚರಣೆಗಳನ್ನು ಬಿಡಬೇಕಾಗುತ್ತದೆ. ಅದಕ್ಕಾಗಿ ವೀರಶೈವದಲ್ಲಿರುವ “ಶೈವ’ ಪದವನ್ನು ಕೈ ಬಿಟ್ಟು ವೀರ-ಲಿಂಗಾಯತ ಎಂದು ಹೆಸರಿಡಿ ಎಂದು ಸಲಹೆ ನೀಡಿದರು ಎಂದು ತಿಳಿದು ಬಂದಿದೆ.