ಬೆಂಗಳೂರು: ಲಿಂಗಾಯಿತ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಲಿಂಗಾಯತ ಧರ್ಮ ಮಹಾಸಭಾದ ಪೋಷಕಾಧ್ಯಕ್ಷೆ ಮಾತೆ ಮಹಾದೇವಿ ಆರೋಪಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಮತ್ತು ಲಿಂಗಾಯಿತ ಎರಡೂ ಸಮಾನಾಂತರವಾದ ರೈಲ್ವೆ ಹಳಿಗಳಿದ್ದ ಹಾಗೆ, ಅವು ಎಂದೂ ಒಂದುಗೂಡಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಯವರು ಈ ಬಗ್ಗೆ ವಿಳಂಬ ನೀತಿ ಅನುಸರಿಸದೆ ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿದರು.
ರಾಜ್ಯಸರ್ಕಾರದ ವಿಳಂಬ ನೀತಿ ವಿರೋಧಿಸಿ ನ.19 ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಆವರಣದಲ್ಲಿ ಲಿಂಗಾಯತ ಧರ್ಮದ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಲಾಗಿದೆ. ನಿವೃತ್ತ ನ್ಯಾ.ಅರಳಿ ನಾಗರಾಜ್, ಪ್ರಗತಿಪರ ಚಿಂತಕ ಚಂದ್ರಶೇಖರ ಪಾಟೀಲ್, ಸಿ.ಎಸ್.ದ್ವಾರಕನಾಥ್, ಅರವಿಂದ ಮಾಲಗತ್ತಿ, ಇಂದೂದರ ಹೊನ್ನಾಪುರ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ವೀರಶೈವ ಮತ್ತು ಲಿಂಗಾಯತ ಹಿಂದು ಧರ್ಮದೊಳಗಿನ ಎರಡು ಸಂಪ್ರದಾಯಗಳಾಗಿವೆ. ಹೀಗಾಗಿ ಹಿಂದು ಧರ್ಮವನ್ನು ಬಿಟ್ಟು ಈ ಧರ್ಮಗಳು ಹೋಗಬೇಕಾಗಿಲ್ಲ ಎಂಬ ಪೇಜಾವರ ಶ್ರೀಗಳ ಹೇಳಿಕೆ ಸರಿಯಲ್ಲ. ಲಿಂಗಾಯತ ಧರ್ಮ ಅನೇಕ ರೀತಿಯಿಂದ ಭಿನ್ನವಾಗಿದೆ.
ಹಿಂದು ಧರ್ಮದಲ್ಲಿ ಯಜ್ಞ-ಯಾಗಗಳ ಕಲ್ಪನೆ ಇದೆ.ಆದರೆ ಲಿಂಗಾಯತ ಧರ್ಮ ಇದನ್ನು ನಿರಾಕರಿಸುತ್ತದೆ. ಈ ಧರ್ಮ ಏಕದೇವೋಪಾಸಕ ಧರ್ಮವಾಗಿದೆ. ನಾವು ಹಿಂದು ವಿರೋಧಿಗಳಲ್ಲ.ಆದ್ದರಿಂದ ಪೇಜಾವರ ಶ್ರೀಗಳು ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆ ಸಂಬಂಧ ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರಬೇಕು ಎಂದು ಒತ್ತಾಯಿಸಿದರು.