ಬೆಳಗಾವಿ: ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗಬೇಕೆಂದು ಆಗ್ರಹಿಸಿ ಆ.22ರಂದು ಬೆಳಗಾವಿ ನಗರದ ಲಿಂಗರಾಜ ಕಾಲೇಜು ಮೈದಾನದಲ್ಲಿ “ಲಿಂಗಾಯತ ಮಹಾರ್ಯಾಲಿ’ ಆಯೋಜಿಸಲಾಗಿದೆ ಎಂದು ಜಿಲ್ಲಾ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಸಮಿತಿ ಕಾರ್ಯದರ್ಶಿ ಶಿವಾನಂದ ಜಾಮದಾರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಿಂಗಾಯತ ಧರ್ಮ 850 ವರ್ಷಗಳ ಇತಿಹಾಸ ಹೊಂದಿದ್ದು,
72 ಒಳ ಪಂಗಡ, ಜಾತಿ, ವರ್ಗದ ಜನರನ್ನು ಒಳಗೊಂಡಿದೆ. ಬಸವಣ್ಣನವರ ಕಾಲದಲ್ಲಿಯೇ ಇದೊಂದು ಸ್ವತಂತ್ರ ಧರ್ಮ ಎಂದು ಸ್ಥಾಪಿತವಾಗಿದೆ.
ಸುಪ್ರೀಂಕೋರ್ಟ್ ಆದೇಶಗಳಲ್ಲಿ, ಹಿಂದೂ ವಿವಾಹ ಕಾಯ್ದೆಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಎಂದು ನಮೂದಿಸಲಾಗಿದೆ. ಬಸವಣ್ಣನವರು ಸ್ಥಾಪಿಸಿರುವ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಲು ಈ ರ್ಯಾಲಿ ಹಮ್ಮಿಕೊಳ್ಳಲಾಗಿದೆ.
ಮೊದಲ ಹಂತದಲ್ಲಿ ಬೀದರನಲ್ಲಿ ಲಿಂಗಾಯತ ಮಹಾರ್ಯಾಲಿ ನಡೆಸಿ, ಶಕ್ತಿ ಪ್ರದರ್ಶಿಸಿ ಯಶಸ್ವಿಯಾಗಿದ್ದೇವೆ. ಅದೇ ಮಾದರಿಯಲ್ಲಿ ಬೆಳಗಾವಿ ನಗರದಲ್ಲಿ ಬೃಹತ್ ರ್ಯಾಲಿ ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಣ್ತೆರೆಸಲಾಗುವುದು ಎಂದು ಹೇಳಿದರು.
ನಾಗನೂರು ರುದ್ರಾಕ್ಷಿ ಮಠದ ಡಾ| ಶ್ರೀ ಸಿದ್ದರಾಮ ಸ್ವಾಮೀಜಿ ರ್ಯಾಲಿಯ ನೇತೃತ್ವ ವಹಿಸಲಿದ್ದಾರೆ. ಲಿಂಗಾಯತ ಮಠಾಧೀಶರು, ವಿವಿಧ ಸಂಘಟನೆಗಳ ಸೇರಿ ಲಕ್ಷಾಂತರ ಜನ ಭಾಗವಹಿಸಲಿದ್ದಾರೆ ಎಂದರು.
ವೀರಶೈವ ಜಾತಿಗೂ, ಲಿಂಗಾಯತ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಕೆಲವು ವರ್ಷಗಳಿಂದ ವೀರಶೈವರು ಲಿಂಗಾಯತರನ್ನು ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ತುಳಿಯುವ ಕೆಲಸ ಮಾಡುತ್ತಿದ್ದಾರೆ. ಪಂಚ ಪೀಠಗಳೇ ಲಿಂಗಾಯತ ಧರ್ಮದ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಲಿಂಗಾಯತ ಸ್ವತಂತ್ರ ಧರ್ಮ ಆಗಬೇಕೆಂಬದೇ ನಮ್ಮ ಉದ್ದೇಶ. ನಮ್ಮ ಧರ್ಮವನ್ನೇ ಕೇಳುತ್ತಿದ್ದೇವೆಯೇ ಹೊರತು ಬೇರೆ ಧರ್ಮವನ್ನಲ್ಲ.
– ಶಿವಾನಂದ ಜಾಮದಾರ,
ಸ್ವತಂತ್ರ ಧರ್ಮ ಹೋರಾಟ ಸಮಿತಿ ಕಾರ್ಯದರ್ಶಿ.