ಬೆಂಗಳೂರು : ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ತೀವ್ರಗೊಂಡಿದ್ದು, ಕಲಬುರಗಿಯಲ್ಲಿ ಭಾನುವಾರ ಬೃಹತ್ ಲಿಂಗಾಯತರ ಸಮಾವೇಶ ನಡೆಸಿ ರಾಷ್ಟ್ರೀಯ ಬಸವ ಸೇನೆಯನ್ನು ಹುಟ್ಟು ಹಾಕಲಾಗಿದೆ.
ಬಸವಣ್ಣನವರ ಆದರ್ಶಗಳನ್ನು ಪ್ರಚಾರ ಪಡಿಸುವ ಉದ್ದೇಶ ದಿಂದ ಬಸವ ಸೇನೆ ಹುಟ್ಟು ಹಾಕಲಾಗಿದ್ದು, ಸಚಿವ ವಿನಯ್ ಕುಲಕರ್ಣಿ ಅವರು ಮೊದಲ ಅಧ್ಯಕ್ಷರಾಗಿದ್ದಾರೆ.
ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸಚಿವ ಎಂ.ಬಿ ಪಾಟೀಲ್ ‘ನಮ್ಮ ಹೋರಾಟ ನಿಲ್ಲುವುದಿಲ್ಲ. ನಾನು ಬಸವಣ್ಣನ ಕರ್ಮಭೂಮಿಯಲ್ಲಿ ನಿಂತಿದ್ದೇನೆ. ಶೇಕಡಾ 80 ನಮ್ಮ ಜನರು ಬೆಂಬಲ ನೀಡಿದ್ದಾರೆ. ಕೇವಲ 20 ಶೇಕಡಾ ಜನರು ಬೆಂಬಲ ನೀಡಿಲ್ಲ, ಅವರ ಮನೆಗೆ ಬೇಕಾದರೂ ತೆರಳಿ ಬೆಂಬಲ ಕೋರುತ್ತೇವೆ’ಎಂದರು.
ಇದೇ ವೇಳೆ ‘ವೀರಶೈವ ಎನ್ನುವುದು ಮೈಸೂರು ಭಾಗದಲ್ಲಿ ಬರುವ ಲಿಂಗಾಯತದ 38 ಉಪ ಜಾತಿಗಳಲ್ಲಿ ಒಂದು’ ಎಂದು ಎಂ.ಬಿ.ಪಾಟೀಲ್ ಹೇಳಿದರು.
ಬೃಹತ್ ಸಮಾವೇಶಕ್ಕೂ ಮೆರವಣಿಗೆ ನಡೆಸಲಾಗಿದ್ದು, ವಿವಿಧ ಮಠಾಧೀಶರು, ರಾಜಕೀಯ ನಾಯಕರು ಸೇರಿದಂತೆ 1 ಲಕ್ಷಕ್ಕೂ ಅಧಿಕ ಲಿಂಗಾಯತರು ಭಾಗಿಯಾಗಿದ್ದರು.
ಬೆಂಗಳೂರಿನಲ್ಲಿ ರಾಷ್ಟ್ರೀಯ ಸಮಾವೇಶ
ಡಿಸೆಂಬರ್ 10 ರಂದು ಬೆಂಗಳೂರಿನಲ್ಲಿ ಬೃಹತ್ ರಾಷ್ಟ್ರ ಮಟ್ಟದ ಸಮಾವೇಶ ನಡೆಸಲು ತೀರ್ಮಾನಿಸಲಾಗಿದ್ದು, 25 ಲಕ್ಷ ಜನರನ್ನು ಸೇರಿಸಿ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆಗಾಗಿ ಒತ್ತಯಿಸಲು ತೀರ್ಮಾನಿಸಲಾಗಿದೆ.