ಲಿಂಗಸುಗೂರು: ಪ್ರಸಕ್ತ ಮುಂಗಾರು ಹಂಗಾಮಿಗೆ ತಾಲೂಕಿನ ಒಟ್ಟು 69, 850 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಉತ್ತಮ ಮಳೆಯಾಗಿದ್ದರಿಂದ ಕೃಷಿ ಚಟುವಟಿಕೆ ಚುರುಕಿನಿಂದ ಸಾಗಿದೆ.
ತಾಲೂಕಿನಲ್ಲಿ ಮೇ ಕೊನೆವಾರದಿಂದ ಜೂನ್ ಆರಂಭದ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ತಮ್ಮ ಭೂಮಿ ಹದಗೊಳಿಸಿ ಬಿತ್ತನೆಗೆ ಸಜ್ಜಗೊಳಿಸಿದ್ದಾರೆ. ಇನ್ನೂ ಕೆಲವಡೆ ಬಿತ್ತನೆ ಕಾರ್ಯ ಭರದಿಂದ ಸಾಗಿದೆ. ತಾಲೂಕಿನಲ್ಲಿ ಬೌಗೋಳಿಕ ವಿಸ್ತೀರ್ಣ 1.94 ಲಕ್ಷ ಹೆಕ್ಟೇರ್ ಇದೆ. ಇದರಲ್ಲಿ 1.55 ಲಕ್ಷ ಹೆಕ್ಟೇರ್ ಬಿತ್ತನೆಯಾಗುವ ಕೃಷಿ ಭೂಮಿ. ಮುಂಗಾರು ಹಂಗಾಮಿನಲ್ಲಿ 0.67 ಲಕ್ಷ ಹೆಕ್ಟೇರ್ ಖುಷ್ಕಿ ಹಾಗೂ 0.16 ಹೆಕ್ಟೇರ್ ನೀರಾವರಿ ಪ್ರದೇಶ ಹೊಂದಿದೆ. ತೊಗರಿ 15930 ಹೆಕ್ಟೇರ್, ಹೆಸರು 1600 ಹೆಕ್ಟೇರ್, ಅಲಸಂದಿ 170 ಹೆಕ್ಟೇರ್, ಸೂರ್ಯಕಾಂತಿ 12455 ಹೆಕ್ಟೇರ್, ಹೈಬ್ರಿಡ್ ಸಜ್ಜೆ 27500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.
ಭತ್ತ 2 ಸಾವಿರ ಕ್ವಿಂಟಲ್, ಹೈಬ್ರಿಡ್ ಸಜ್ಜೆ 350 ಕ್ವಿಂಟಲ್, ತೊಗರಿ 650 ಕ್ವಿಂಟಲ್ ಬಿತ್ತನೆ ಬೀಜಗಳು ಸೇರಿದಂತೆ ಇನ್ನಿತರ ಬೆಳೆಗಳ ಭೀಜಗಳು ತಾಲೂಕಿನ ಲಿಂಗಸುಗೂರು, ಗುರುಗುಂಟಾ, ಮುದಗಲ್ಲ, ಮಸ್ಕಿ ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ದಾಸ್ತಾನು ಮಾಡಲಾಗಿದೆ. ಅದರಂತೆ ಕಳೆದ ವಾರದಿಂದ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ಧರದಲ್ಲಿ ಬಿತ್ತನೆ ಬೀಜ ಮಾರಾಟ ಮಾಡಲಾಗುತ್ತಿದೆ. ಮುಂಗಾರು ಹಂಗಾಮಿಗಾಗಿ ತಾಲೂಕಿನಲ್ಲಿ ಈ ಭಾರಿ ತೊಗರಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗುವ ಲಕ್ಷಣಗಳು ಕಾಣುತ್ತಿವೆ.
ತಾಲೂಕಿನಲ್ಲಿ ಈಗಾಗಲೇ ಉತ್ತಮ ಮಳೆಯಾಗಿದ್ದರಿಂದ ಕೃಷಿ ಚಟುವಟಿಕೆಗಳು ಚುರುಕಿನಿಂದ ಸಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ರಿಯಾಯಿತಿ ದರದಲ್ಲಿ ಮಾರಾಟವೂ ನಡೆದಿದೆ.
ಮಹಾಂತೇಶ ಹವಾಲ್ದಾರ,
ಕೃಷಿ ಸಹಾಯಕ ನಿರ್ದೇಶಕ
ಶಿವರಾಜ ಕೆಂಭಾವಿ