ಲಿಂಗಸುಗೂರು: ಮೆಣಸಿನಕಾಯಿ ಬೆಳೆಗೆ ಈ ಬಾರಿ ಬೆಲೆಯಿದ್ದರೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಳೆದ ಬೆಳೆಯನ್ನು ಸಾಗಣೆ ಮಾಡಲು ಸಾರಿಗೆ ವ್ಯವಸ್ಥೆಯಿಲ್ಲದೆ ರೈತರು ಪರದಾಡುವಂತೆ ಆಗಿದೆ. ಪಟ್ಟಣ ಸೇರಿದಂತೆ ಆನೆಹೊಸೂರು, ಗುಡದನಾಳ, ಚಿತ್ತಾಪುರ, ಬೆಂಡೋಣಿ, ಗುರಗುಂಟಾ ಹಾಗೂ ತಾಲೂಕಿನ ಅನೇಕ ಗ್ರಾಮಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬ್ಯಾಡಗಿ ಕಡ್ಡಿಗಾಯಿ, ಡಬ್ಬಿಗಾಯಿ, ಸೀಜಂಟಾ ಸೀಡ್ಸ್, ಗುಂಟೂರು ತಳಿಯ ಮೆಣಸಿನಕಾಯಿ ಬೆಳೆ ಬೆಳೆಯಲಾಗಿದೆ.
ಮಳೆರಾಯನು ಕೈಕೊಟ್ಟಿದ್ದು, ನಾರಾಯಣಪುರ ಬಲದಂಡೆ, ರಾಂಪೂರ ಏತ ನೀರಾವರಿ ಯೋಜನೆ ನಾಲೆಯಲ್ಲಿ ಸಮರ್ಪಕ ನೀರಿಲ್ಲದಿದ್ದರೂ ಮೆಣಸಿನಕಾಯಿ ಬೆಳೆಯಲಾಗಿದೆ. ರೈತರು ಆಳು ಕಾಳು, ಬಿತ್ತನೆ ಬೀಜ, ಕ್ರಿಮಿನಾಶಕ ಹಾಗೂ ಇತರೆ ಖರ್ಚು ಸೇರಿದಂತೆ ಪ್ರತಿ ಎಕರೆಗೆ 1.30 ಲಕ್ಷ ರೂ. ವೆಚ್ಚ ಮಾಡುತ್ತಿದ್ದಾರೆ. ಕಡಿಮೆ ಪ್ರಮಾಣದಲ್ಲಿ ಬೆಳೆದ ರೈತರು ಹಾವೇರಿ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತೆರಳಿ ಮಾರಾಟ ಮಾಡಿದ್ದಾರೆ. ಕೆಲವೆಡೆ ಅಧಿಕ ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆದ ರೈತರು ಇದ್ದಲ್ಲಿಗೆ ದಲ್ಲಾಲಿಗಳು ಬಂದು ಖರೀದಿಸುತ್ತಾರೆ. ಆದರೆ ಈ ಬಾರಿ 20ರಿಂದ 30 ಸಾವಿರ ರೂ. ವರೆಗೆ ಬೆಲೆ ಇತ್ತು.
ಕೊರೊನಾ ಸೋಂಕು ಹರಡದಿರಲು ದೇಶವೇ ಲಾಕ್‌ಡೌನ್ ಆಗಿದ್ದರಿಂದ ಸಾರಿಗೆ ಸಂಚಾರ ಮತ್ತು ಮಾರುಕಟ್ಟೆ ಎಲ್ಲವೂ ಸ್ತಬ್ಧವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ರೈತರು 400ಕ್ಕೂ ಹೆಚ್ಚು ಕ್ವಿಂಟಲ್ ಮೆಣಸಿನಕಾಯಿ ಸಂಗ್ರಹ ಮಾಡಿಕೊಂಡು ಇಟ್ಟುಕೊಂಡಿದ್ದಾರೆ. ಇದ್ದ ಬೆಳೆ ಸಂರಕ್ಷಿಸುವುದು ಇಲ್ಲಿನ ರೈತರಿಗೆ ಸವಾಲಿನ ಪ್ರಶ್ನೆಯಾಗಿದೆ. ಮೆಣಸಿನಕಾಯಿ ಸಂಗ್ರಹಿಸಲು ಕೋಲ್ಡ್ ಸ್ಟೋರೇಜ್ ಕೂಡ ಇಲ್ಲ. ಇದರಿಂದ ರೈತರು ತಮ್ಮ ಬೆಳೆಯನ್ನು ರಕ್ಷಣೆ ಮಾಡಲು ಆಪ್ ಹೊದಿಸಿದ್ದಾರೆ.
ಈ ಬಾರಿ ಮೆಣಸಿನಕಾಯಿ ಇಳುವರಿ ಹಾಗೂ ಬೆಲೆಯೂ ಚೆನ್ನಾಗಿಯೂ ಇತ್ತು. ಆದರೆ ಕೊರೊನಾ ಪರಿಣಾಮದಿಂದ ಲಾಕ್‌ಡೌನ್ ಆಗಿ ಮಾರುಕಟ್ಟೆ ಹಾಗೂ ಸಾರಿಗೆ ವ್ಯವಸ್ಥೆ ಬಂದ್ ಆಗಿದ್ದರಿಂದ ಸಂಕಷ್ಟ ಎದುರಾಗಿದೆ.
ಶ್ರೀನಿವಾಸ, ರೈತ
ಶಿವರಾಜ ಕೆಂಭಾವಿ