Advertisement

ಲಿಂಗನಮಕ್ಕಿ ಭರ್ತಿಗೆ 7 ಅಡಿ ಬಾಕಿ

09:26 PM Aug 13, 2021 | Team Udayavani |

ಹೊನ್ನಾವರ: ನಿರೀಕ್ಷೆಯಂತೆ ಲಿಂಗನಮಕ್ಕಿ ಅಣೆಕಟ್ಟು ತುಂಬುತ್ತ ಬಂದಿದೆ. ಅಣೆಕಟ್ಟಿನ ಜಲಾಗಾರ ಶೇ. 85.18 ರಷ್ಟು ಭರ್ತಿಯಾಗಿದ್ದು ವಿಶಾಲವಾಗಿ ಸಮುದ್ರದಂತೆ ತೋರುತ್ತಿದ್ದು ತೆರೆಗಳು ಅಣೆಕಟ್ಟನ್ನು ಮುತ್ತಿಡುತ್ತಿವೆ.

Advertisement

ಶರಾವತಿಕೊಳ್ಳ ಇನ್ನು ನಿದ್ದೆಗೆಡಬೇಕಾಗಿದೆ. ಗುರುವಾರ 0.15 ಫೂಟ್‌ ಮಾತ್ರ ಏರಿದೆ. ಅಣೆಕಟ್ಟಿನ ಒಳಹರಿವು 11,174 ಕ್ಯೂಸೆಕ್‌ ಇದೆ. ಜಲಾನಯನ ಪ್ರದೇಶದಲ್ಲಿ 13.80 ಮಿಮೀ ಮಳೆ ಸುರಿದಿದೆ. ಲಿಂಗನಮಕ್ಕಿ ಅಣೆಕಟ್ಟು ಆರಂಭವಾದ ಮೇಲೆ ಕೇವಲ ನಾಲ್ಕಾರು ಬಾರಿ ಪೂರ್ತಿ ತುಂಬಿ ಸ್ಯೂಸ್‌ ಗೇಟ್‌ ತೆರೆದು ನೀರು ಬಿಡಲಾಗಿದೆ. ಹೆಚ್ಚಿನ ವರ್ಷ ಪೂರ್ತಿ ತುಂಬುತ್ತ 1817 ಅಡಿ ತಲುಪಿದ ಮೇಲೆ ಮಳೆ ನಿಂತು ಹೋದ ದಾಖಲೆ ಇದೆ. ನಂತರ ಒರತೆಯ ನೀರು 1819 ಅಡಿಗಳಿಗೆ ತಲುಪಿ ಗಂಗಾಪೂಜೆ ನೆರವೇರಿದೆ.

1980ರಲ್ಲಿ ನೆರೆ ಬಂದ ವರ್ಷ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಸುರಿದು ಮೊದಲ ದಿನ 4ಅಡಿ, ಮರುದಿನ 3ಅಡಿ ನೀರು ಬಂದ ಕಾರಣ ಅನಿವಾರ್ಯವಾಗಿ ನೀರು ಬಿಡಲಾಗಿತ್ತು. ಅದೇ ಕಾಲಕ್ಕೆ ಶರಾವತಿ ಕೊಳ್ಳದಲ್ಲಿ ಮಳೆ ಇತ್ತು. ಕೊಳ್ಳವನ್ನು ಸೇರಿಕೊಳ್ಳುವ ಗೇರುಸೊಪ್ಪಾ ಕಲ್ಕಟ್ಟೆ, ಮಾಗೋಡು, ಹಡಿನಬಾಳ, ಭಾಸ್ಕೇರಿ ಹೊಳೆಗಳು ತುಂಬಿ ಹರಿದ ಪರಿಣಾಮ ಶರಾವತಿ ಎಡಬಲದಂಡೆಯನ್ನು ಮೀರಿ ಕಿಮೀ ವಿಸ್ತಾರದಲ್ಲಿ ಹೊನ್ನಾವರದ ತಗ್ಗುಪ್ರದೇಶಕ್ಕೂ ನೀರು ನುಗ್ಗಿತ್ತು.

ಅಮವಾಸ್ಯೆ ಭರ್ತಿ ಇದ್ದ ಕಾರಣ ಸಮುದ್ರಕ್ಕೆ ನೀರು ಸೇರಿಕೊಳ್ಳುವುದು ವಿಳಂಬವಾಗಿ ಅನಾಹುತ ಸಂಭವಿಸಿತ್ತು. ನಂತರ ಕೆಲವು ವರ್ಷ ಲಿಂಗನಮಕ್ಕಿಯಲ್ಲಿ ನೀರು ತುಂಬಿದರೂ ಗೇಟು ತೆರೆದರೂ ಸ್ವಲ್ಪಸ್ವಲ್ಪ ನೀರು ಬಿಟ್ಟ ಕಾರಣ, ಶರಾವತಿಕೊಳ್ಳದಲ್ಲಿ ಮಳೆ ಇಲ್ಲದ ಕಾರಣ ನೆರೆ ಬರಲಿಲ್ಲ. ಈ ಬಾರಿ ಎಲ್ಲೆಡೆ ಮಳೆ ಇದೆ. ಲಿಂಗನಮಕ್ಕಿ ತುಂಬುತ್ತಿದೆ. ಟೇಲರೀಸ್‌ ಆಣೆಕಟ್ಟು ತನ್ನ 55 ಮೀಟರ್‌ ಹತ್ತಿರದಲ್ಲಿದೆ. ಆದ್ದರಿಂದ ಇನ್ನೂ ಕೆಲವು ದಿನ ಕುತೂಹಲ ಉಳಿದುಕೊಳ್ಳಲಿದೆ. ಕೆಪಿಸಿ ಮಾಮೂಲಿಯಂತೆ ನೀರು ಬಿಡುವ ಅಂತಿಮ ಸೂಚನೆ ನೀಡಿ ಶರಾವತಿಕೊಳ್ಳದ ಜನರನ್ನು ಎಚ್ಚರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next