ಕೆಂಗೇರಿ: ಇಲ್ಲಿನ ಪರಿಸರಕ್ಕೆ ಹಾನಿ ಮಾಡುತ್ತಿರುವ ಲಿಂಗಧೀರನಹಳ್ಳಿ ಕಸದ ಘಟಕವನ್ನು ಸ್ಥಗಿತಗೊಳಿಸಬೇಕು ಎಂದು ಲಿಂಗಧೀರನಹಳ್ಳಿ ಸುತ್ತಮುತ್ತಲಿನ ನಿವಾಸಿಗಳು ಕ್ಷೇತ್ರದ ಶಾಸಕ ರಾದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದರು.
ಪ್ರಧಾನಿ ಮೋದಿ 72ನೇ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿರುವ “ಸೇವಾ ಸಪ್ತಾಹ’ ಹಿನ್ನೆಲೆಯಲ್ಲಿ ಯಶವಂತಪುರ ಕ್ಷೇತ್ರದ ಚಿಕ್ಕೇಗೌಡನಪಾಳ್ಯ ಸರ್ಕಾರಿ ಶಾಲೆಯಲ್ಲಿ ಸಸಿ ನೆಡಲು ಆಗಮಿಸಿದ್ದ ಸಚಿವರನ್ನು ಭೇಟಿ ಮಾಡಿದ ಐವತ್ತಕ್ಕೂ ಹೆಚ್ಚು ಸ್ಥಳೀಯರು ತ್ಯಾಜ್ಯ ಘಟಕದಿಂದ ಆಗುತ್ತಿರುವ ಸಂಕಷ್ಟಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ತ್ಯಾಜ್ಯ ಸಂಸ್ಕರಣಾ ಕಾಯ್ದೆ ಅನ್ವಯ ಘಟಕದ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಬಫರ್ ಜೋನ್ ಎಂದು ಪರಿಗಣಿಸಬೇಕು. ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಈ ನಿಯಮಗಳನ್ನು ಇಲ್ಲಿ ಗಾಳಿಗೆ ತೂರಲಾಗಿದೆ. ಕೂಗಳತೆ ದೂರದಲ್ಲಿ ಸರ್ಕಾರಿ ಶಾಲೆ ಕೂಡ ಇದೆ.
ಮೆಟ್ಟಕಲ್ಲು ಪಾಳ್ಯ ಗ್ರಾಮವೂ ಇದೆ. ಹೀಗಿದ್ದರೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಮೇರೆಗೆ ತ್ಯಾಜ್ಯ ವಿಲೇವಾರಿ ಘಟಕ ತೆರೆಯಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಬಿಬಿಎಂಪಿ ತಪ್ಪು ಮಾಹಿತಿ ನೀಡಿದೆ. ಸರ್ಕಾರದ ಈ ನಡೆಯಿಂದ ಈಗಾಗಲೇ ಇಲ್ಲಿನ ಅನೇಕ ಮಂದಿ ಮನೆ ಖಾಲಿ ಮಾಡಿ ಹೋಗಿದ್ದಾರೆ. ಮನೆ ಬಿಡಲು ಸಾಧ್ಯವಾಗದ ನಾವು ನಿತ್ಯ ಹಿಂಸೆ ಅನುಭವಿಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ತ್ಯಾಜ್ಯ ವಿಲೇವಾರಿ ಘಟಕದಿಂದ ಹೊರ ಬರುತ್ತಿರುವ ದುರ್ವಾಸನೆಯಿಂದ ಉಸಿರಾಡಲು ಸಾಧ್ಯವಾಗುತ್ತಿಲ್ಲ. ಮಕ್ಕಳು ವಾಂತಿ, ತಲೆನೋವು, ಕೆಮ್ಮಿನಂತಹ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಕೀಟ ಬಾಧೆಯಿಂದ ಬದುಕು ದುಸ್ತರವಾಗಿದೆ ಎಂದು ಅಳಲು ತೋಡಿಕೊಂಡರು. ಮನವಿಗೆ ಸ್ಪಂದಿಸಿದ ಸಚಿವ ಎಸ್.ಟಿ.ಸೋಮಶೇಖರ್ ಇದೇ ವೇಳೆ, ತ್ಯಾಜ್ಯ ವಿಲೇವಾರಿ ವಿಭಾಗದ ವಿಶೇಷ ಆಯುಕ್ತರಿಗೆ ಕರೆ ಮಾಡಿ ಸ್ಥಳ ಪರಿಶೀಲಿಸಿ ಈ ಕುರಿತು ಸೂಕ್ತ ವರದಿ ನೀಡುವಂತೆ ಸೂಚಿಸಿದರು.
ಈ ವೇಳೆ ಪಾಲಿಕೆ ಮಾಜಿ ಸದಸ್ಯ ಆರ್ಯ ಶ್ರೀನಿವಾಸ್, ಮುಖಂಡರಾದ ಅನಿಲ್ ಚಳಗೇರಿ, ವಾಜರಹಳ್ಳಿ ಶಶಿಕುಮಾರ್, ದೀಪಕ್ ಶೆಟ್ಟಿ, ಆರ್. ಪಿ.ಪ್ರಕಾಶ್, ಆರ್.ಶಿವಮಾದಯ್ಯ, ಪ್ರಕಾಶ್, ಪ್ರ. ಕಾ.ಪ್ರಕಾಶ್, ಶ್ರೀನಾಥ್, ನವೀನ್ ಯಾದವ್ ಸೇರಿ ದಂತೆ ಮತ್ತಿತರರು ಉಪಸ್ಥಿತರಿದ್ದರು.