ನ್ಯೂಯಾರ್ಕ್: ಇದು ಅಮೆರಿಕದ ಹೆಪ್ಟತ್ಲೀಟ್ ಲಿಂಡ್ಸೆ ಫ್ಲಾಶ್ ಅವರ ಸಾಹಸಗಾಥೆ. 31 ವರ್ಷದ ಫ್ಲಾಶ್ ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅಂಕಣಕ್ಕಿಳಿಯಲಿದ್ದಾರೆ. ಇದರಲ್ಲೇನೂ ವಿಶೇಷವಿಲ್ಲ, ಆದರೆ ಫ್ಲಾಶ್ ನಾಲ್ಕೂವರೆ ತಿಂಗಳ ಗರ್ಭಿಣಿ! ಇದು ಎಲ್ಲರ
ಹುಬ್ಬೇರುವಂತೆ ಮಾಡಿದೆ.
ಇದನ್ನೂ ಓದಿ:ಜಮ್ಮು ವಾಯುನೆಲೆ ಆಯ್ತು ಈಗ ಪಾಕ್ ನಲ್ಲಿರುವ ಭಾರತ ರಾಯಭಾರ ಕಚೇರಿಯೊಳಗೆ ಡ್ರೋನ್ ಪತ್ತೆ
“ಎಲ್ಲ ಕತೆಗೂ ಒಂದು ಮುಕ್ತಾಯ ಇದೆ. ಆದರೆ ಜೀವನದಲ್ಲಿ ಪ್ರತಿಯೊಂದು ಮುಕ್ತಾಯ ಎನ್ನುವುದು ಹೊಸ ಆರಂಭ’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ತಮ್ಮ ಸಾಹಸಕ್ಕೊಂದು ಮುನ್ನುಡಿ ಬರೆದಿದ್ದಾರೆ ಲಿಂಡ್ಸೆ ಫ್ಲಾಶ್.
“ಗರ್ಭಿಣಿಯರ ಓಟದ ಕುರಿತು, ಅವರ ಅಭ್ಯಾಸದ ಕುರಿತು ಅದೆಷ್ಟೋ ಕತೆಗಳಿವೆ. ನನಗಿದು ಖುಷಿ ಕೊಡುವ ಸಂಗತಿ. ಮಹಿಳೆಯೊಬ್ಬಳಿಗೆ ಇದೂ ಸಾಧ್ಯ ಎಂಬುದನ್ನು ಸಾಧಿಸಿ ತೋರುವುದು ನನ್ನ ಪಾಲಿನ ಸಂತಸದ ವಿಷಯ.ಮಾನಸಿಕವಾಗಿ ನಾವು ಗಟ್ಟಿಗೊಳ್ಳಬೇಕು, ಅಷ್ಟೇ…’ ಎಂದು
ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಲಿಂಡ್ಸೆ ಫ್ಲಾಶ್. ವೈದ್ಯರ ಸಲಹೆ ಮೇರೆಗೆ ಅವರು ಸ್ಪರ್ಧೆಗೆ ಇಳಿಯಲಿದ್ದಾರೆ.
2012 ಮತ್ತು 2016 ಒಲಿಂಪಿಕ್ಸ್ ಆಯ್ಕೆ ಟ್ರಯಲ್ಸ್ ನಲ್ಲೂ ಲಿಂಡ್ಸೆ ಫ್ಲಾಶ್ ಪಾಲ್ಗೊಂಡಿದ್ದರು. ಆದರೆ ಅಲ್ಲಿ ಕ್ರಮವಾಗಿ 14ನೇ ಹಾಗೂ 9ನೇ ಸ್ಥಾನ ಪಡೆದು ಅವಕಾಶ ವಂಚಿತರಾಗಿದ್ದರು.
7 ಕ್ರೀಡೆಗಳ ಸಮ್ಮಿಲನ
ಹೆಪ್ಟತ್ಲಾನ್ 7 ವಿವಿಧ ಸ್ಪರ್ಧೆಗಳನ್ನು ಒಳಗೊಂಡ ಅತ್ಯಂತ ಕಠಿನ ಕ್ರೀಡೆ. 100 ಮೀ. ಹರ್ಡಲ್ಸ್, ಹೈಜಂಪ್, ಶಾಟ್‌ಪುಟ್, 200 ಮೀ. ಸ್ಪ್ರಿಂಟ್, ಲಾಂಗ್‌ಜಂಪ್, ಜಾವೆಲಿನ್ ತ್ರೊ ಮತ್ತು 800 ಮೀ. ಓಟವನ್ನು ಇದು ಒಳಗೊಂಡಿರುತ್ತದೆ. ನಾಲ್ಕೂವರೆ ತಿಂಗಳ ಗರ್ಭಿಣಿಯೊಬ್ಬಳು ಇದನ್ನು ಹೇಗೆ ನಿಭಾಯಿಸ ಬಲ್ಲಳು ಎಂಬುದನ್ನೊಮ್ಮೆ ಕಲ್ಪಿಸಿಕೊಂಡರೇನೇ ರೋಮಾಂಚನ, ಅಚ್ಚರಿಯಾಗುತ್ತದೆ!