ಹಾರೂಗೇರಿ: ಜಾತೀಯತೆ, ಅಪರಾಧ, ಭ್ರಷ್ಟಾಚಾರವೆಂಬ ರೋಗ ಭಾರತದಾದ್ಯಂತ ಹಬ್ಬಿದೆ. ಚಿಕಿತ್ಸೆ ನೀಡದಿದ್ದಲ್ಲಿ ಎಲ್ಲರನ್ನೂ ಬಲಿ ತೆಗೆದುಕೊಳ್ಳಲಿದೆ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ ಹೇಳಿದರು.
ಸಮೀಪದ ಲಕ್ಷ್ಮೀ ನಗರದ ಆಜೂರ ತೋಟದಲ್ಲಿ ಶುಕ್ರವಾರ ಲಿಂ.ರಾಮಪ್ಪ ಬಸಪ್ಪ ಆಜೂರ, ಲಿಂ|ಗಂಗಮ್ಮ ರಾಮಪ್ಪ ದರೂರ ಅವರ 28ನೇ ಸ್ಮರಣೋತ್ಸವ ನಿಮಿತ್ತ ಹಮ್ಮಿಕೊಳ್ಳಲಾದ ಆಜೂರ ಪ್ರತಿಷ್ಠಾನದ ಜಿಲ್ಲೆ ಮತ್ತು ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.
ಭ್ರಷ್ಟಾಚಾರ ನಿಷೇಧ ಕಾಯ್ದೆ ಜಾರಿಯಾಗಿ 30 ವರ್ಷ ಕಳೆದರೂ ದೇಶದಲ್ಲಿ ಭ್ರಷ್ಟಾಚಾರ ಕಡಿಮೆಯಾಗಿಲ್ಲ. ಭ್ರಷ್ಟರಾಜಕಾರಣಿಗಳು ಅಮಾಯಕ ಮತದಾರರಿಗೆ ಆಮೀಷ ಒಡ್ಡುತ್ತಿದ್ದಾರೆ. ಮತದಾರ ಭ್ರಷ್ಟರಾದರೆ ದೇಶಕ್ಕೆ ಉಳಿಗಾಲವಿಲ್ಲ ಎಂದರು.
ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮದ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಆಶೀರ್ವಚನ ನೀಡಿ, ಸುಶಿಕ್ಷಿತ, ವಿದ್ಯಾವಂತರಿಂದಲೇ ಮಾನವೀಯ ಸಂಬಂಧಗಳು, ನೈತಿಕತೆ ಮರೆಯಾಗುತ್ತಿವೆ. ಮಾರ್ಕ್ಸ್ ಗಳು ರಿಮಾರ್ಕ್ಸ್ಗಳಾಗದಂತೆ ಮಕ್ಕಳಿಗೆ ಸಂಸ್ಕಾರ ಕೊಡಬೇಕು. ಜನ್ಮಕೊಟ್ಟ ತಂದೆ-ತಾಯಿಗಳನ್ನು ಪ್ರೀತಿಸುವುದೇ ನಿಜವಾದ ಶಿಕ್ಷಣ ಎಂದರು.
ಆಜೂರ ಪುಸ್ತಕ ಪ್ರತಿಷ್ಠಾನದ ಜಿಲ್ಲಾ ಮತ್ತು ರಾಜ್ಯಮಟ್ಟದ ಅತ್ಯುತ್ತಮ ಕೃತಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಡಾ.ಅರಳಿ ನಾಗರಾಜ, ರಾಮದುರ್ಗದ ಸುನಂದಾ ಭರಮನಾಯ್ಕರ, ಬಾಗಲಕೋಟದ ಡಾ.ಪ್ರಕಾಶ ಖಾಡೆ, ಬಳ್ಳಾರಿಯ ಡಾ.ಎ.ಎನ್.ಸಿದ್ಧೇಶ್ವರಿ, ಧಾರವಾಡದ ಡಾ.ಭರಮಪ್ಪ ಭಾವಿ, ಹುನಗುಂದದ ನಿಂಗಮ್ಮ ಭಾವಿಕಟ್ಟಿ, ಧಾರವಾಡದ ಎ.ಎ.ದರ್ಗಾ, ಅಥಣಿಯ ಬಿ.ಆರ್.ಗಂಗಪ್ಪನವರ, ಕೂಡ್ಲಗಿಯ ಎಚ್.ಧನಂಜಯ ಅವರಿಗೆ ರಾಜ್ಯಮಟ್ಟದ ಹಾಗೂ ಹಾರೂಗೇರಿಯ ರವೀಂದ್ರ ಹೋಳ್ಕರ, ಬೆಳಗಾವಿ ಶಾಂತಾ ಮಸೂತಿ, ಕುಡಚಿ ಅಶೋಕ ಕಾಂಬಳೆ, ಬೆಳಗಾವಿ ಸಿ.ಜಿ.ಮಠಪತಿ, ಅಥಣಿ ಭಾರತಿ ಅಲಿಬಾದಿ ಅವರಿಗೆ ಜಿಲ್ಲಾಮಟ್ಟದ ಅತ್ಯುತ್ತಮ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರತಿಷ್ಠಾನದ ಗೌರವಾಧ್ಯಕ್ಷ ಹಂದಿಗುಂದದ ಶ್ರೀ ಶಿವಾನಂದ ಸ್ವಾಮೀಜಿ ಸಮಾರಂಭದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಶೇಗುಣಸಿ ವೀಕ್ತಮಠದ ಮಹಾಂತ ದೇವರು, ಬೆಲ್ಲದಬಾಗೇವಾಡಿಯ ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಪ್ರಭು ಸ್ವಾಮೀಜಿ, ಶ್ರೀ ಸಂಪಾದನಾ ಸ್ವಾಮೀಜಿ ಉಪಸ್ಥಿತರಿದ್ದರು.
ವಿಶ್ರಾಂತ ಪ್ರಾಚಾರ್ಯ ಬಿ.ಆರ್.ಆಜೂರ ಸ್ವಾಗತಿಸಿದರು. ಮಹಾಂತೇಶ ಮುಗಳಖೋಡ ಕಾರ್ಯಕ್ರಮ ನಿರೂಪಿಸಿದರು. ಬಾಬುರಾವ ಶರಣರು ವಂದಿಸಿದರು.