Advertisement

LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!

09:16 PM Nov 05, 2024 | Team Udayavani |

ನ್ಯೂಯಾರ್ಕ್‌: ಚಂದ್ರ ಮತ್ತು ಮಂಗಳನ ಅಂಗಳದಲ್ಲಿ ಮರ ಬಳಸಿ ಮನೆ ಕಟ್ಟುವ ಯೋಜನೆಯನ್ನು ಹೊಂದಿರುವ ವಿಜ್ಞಾನಿಗಳು, ಇದರ ಸಾಧ್ಯಾಸಾಧ್ಯತೆಯನ್ನು ಅರ್ಥ ಮಾಡಿಕೊಳ್ಳಲು ಮರದಿಂದ ತಯಾರಿಸಿದ ಉಪಗ್ರಹವನ್ನು ಉಡಾವಣೆ ಮಾಡಿದ್ದಾರೆ. ಇದು ವಿಶ್ವದಲ್ಲೇ ಮೊದಲ ಮರದ ಉಪಗ್ರಹ ಎಂಬ ಖ್ಯಾತಿ ಪಡೆದುಕೊಂಡಿದೆ.

Advertisement

ಜಪಾನ್‌ನ ಕ್ಯೋಟೋ ವಿವಿ ಮತ್ತು ಸುಮಿಟಾಮೋ ಫಾರೆಸ್ಟ್ರಿ ಸೇರಿ ತಯಾರು ಮಾಡಿರುವ ಈ ಉಪಗ್ರಹವನ್ನು ಅಮೆರಿಕದ ಸ್ಪೇಸ್‌ಎಕ್ಸ್‌ನ ರಾಕೆಟ್‌ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಉಡಾವಣೆ ಮಾಡಲಾಗಿದೆ. ಬಳಿಕ ಇದನ್ನು ಭೂಮಿಯಿಂದ 400 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಅಳವಡಿಸಲಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಅಂಗೈ ಅಗಲ ಇರುವ ಈ ಉಪಗ್ರಹಕ್ಕೆ ಲಿಗ್ನೊಸ್ಯಾಟ್‌ ಎಂದು ಹೆಸರಿಡಲಾಗಿದೆ. ಬಾಹ್ಯಾಕಾಶಕ್ಕೆ ಕಳುಹಿಸುವ ನವೀಕರಿಸಬಹುದಾದ ವಸ್ತುವಿನ ಮೇಲೆ ಕಾಸ್ಮಿಕ್‌ ಪರಿಣಾಮ ಏನಾಗಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಲು ಹಾಗೂ ಇದರ ಮೂಲಕ ಬಾಹ್ಯಾಕಾಶದಲ್ಲಿ ಮನುಷ್ಯದ ಜೀವನ ಕುರಿತ ಅಧ್ಯಯನ ಕೈಗೊಳ್ಳಲಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಚಂದ್ರ, ಮಂಗಳನ ಅಂಗಳದಲ್ಲಿ ಮರದ ಮನೆ!

ಕ್ಯೋಟೋ ಸಂಸ್ಥೆಯ ಪ್ರಮುಖ ಗುರಿ ಚಂದ್ರ ಮತ್ತು ಮಂಗಳನ ಮೇಲೆ ಮರದಿಂದ ಮನೆ ನಿರ್ಮಾಣ ಮಾಡುವುದಾಗಿದೆ. ಇದಕ್ಕಾಗಿ 50 ವರ್ಷಗಳ ಗುರಿ ಹಾಕಿಕೊಳ್ಳಲಾಗಿದ್ದು, ನಾಸಾ ಪ್ರಮಾಣಿತ ಮರದ ಉಪಗ್ರಹವನ್ನು ತಯಾರು ಮಾಡುವ ಉದ್ದೇಶವಿದೆ. ಪ್ರಸ್ತುತ ಈ ಉಪಗ್ರಹವನ್ನು ಜಪಾನ್‌ನಲ್ಲಿ ಸಿಗುವ ಮ್ಯಾಗ್ನೊಲಿಯಾ ಹೊನೊಕಿ ಎಂಬ ಮರದಲ್ಲಿ ತಯಾರಿಸಲಾಗಿದೆ ಎಂದು ವಿಜ್ಞಾನಿ ಟಾಕೋ ಡಾಯ್‌ ಹೇಳಿದ್ದಾರೆ.

Advertisement

ಮರದ ಬಳಕೆ ಏಕೆ?

– ಬಾಹ್ಯಾಕಾಶದಲ್ಲಿ ನೀರು ಅಥವಾ ಆಮ್ಲಜನಕ ಇಲ್ಲದಿರುವುದರಿಂದ ಮರ ಬೇಗ ಹಾಳಾಗಲ್ಲ

– ಬಾಹ್ಯಾಕಾಶದಲ್ಲಿ ಕಸವನ್ನು ಕಡಿಮೆ ಮಾಡಬೇಕು ಎಂಬ ಕೂಗು ಎದ್ದಿದೆ

– ಮರದ ಉಪಗ್ರಹ ಭೂಮಿ ತಲುಪುವ ಸಮಯದಲ್ಲಿ ಉರಿದುಹೋಗುತ್ತದೆ. ಹೀಗಾಗಿ ಪರಿಸರಕ್ಕೆ ಹಾನಿ ತಪ್ಪಿಸಬಹುದು

– ಲೋಹದ ಉಪಗ್ರಹಗಳು ವಾತಾವರಣಕ್ಕೆ ಬಿಡುಗಡೆ ಮಾಡುವ ಅಲ್ಯುಮಿನಿಯಂ ಆಕ್ಸೆ„ಡ್‌ ಇದರಲ್ಲಿ ಬಿಡುಗಡೆಯಾಗುವುದಿಲ್ಲ

ಡಾಟಾ ಸೆಂಟರ್‌ಗಳೂ ಮರದಿಂದ ನಿರ್ಮಾಣ?

ಬಾಹ್ಯಾಕಾಶದಲ್ಲಿ ವಿಕಿರಣಗಳು ಉಪಗ್ರಹ ಒಳಗಿರುವ ಸೆಮಿಕಂಡಕ್ಟರ್‌ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಲಿಗ್ನೊಸ್ಯಾಟ್‌ ಅಧ್ಯಯನ ಮಾಡಲಿದೆ. ಇದು ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಡಾಟಾ ಸೆಂಟರ್‌ಗಳನ್ನು ಮರದಿಂದ ನಿರ್ಮಾಣ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next