ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಶನಿವಾರದಿಂದ (ನ.24) ಮೂರು ದಿನ “ಮಿಂಚಿನ ಮತದಾರರ ನೋಂದಣಿ ಅಭಿಯಾನ’ ನಡೆಯಲಿದೆ ಎಂದು ಬಿಬಿಎಂಪಿ ಆಯುಕ್ತ, ನಗರ ಚುನಾವಣಾಧಿಕಾರಿ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ ವ್ಯಾಪ್ತಿಯ ಎಲ್ಲ 28 ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಮೂರು ದಿನವೂ ಬೆಳಗ್ಗೆ 10ರಿಂದ 5 ಗಂಟೆವರೆಗೆ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಅದರಂತೆ ಅಧಿಕಾರಿಗಳು ಕ್ಷೇತ್ರದ ಕರಡು ಮತದಾರರ ಪಟ್ಟಿಯೊಂದಿಗೆ ಹಾಜರಿರಲಿದ್ದು, ಹೊಸದಾಗಿ ಹೆಸರು ಸೇರಿಸಬಹುದಾಗಿದೆ ಎಂದು ಹೇಳಿದರು.
ಮತದಾರರ ಪಟ್ಟಿಗೆ ಈವರೆಗೆ ಸೇರ್ಪಡೆಯಾಗದವರು ಮನೆ ವಿಳಾಸ ದೃಢೀಕರಣದ ಪ್ರತಿ ಹಾಗೂ ಭಾವಚಿತ್ರದೊಂದಿಗೆ ನಮೂನೆ-6ನ್ನು ಭರ್ತಿ ಮಾಡಿ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸಬೇಕು. ಜತೆಗೆ 2019ರ ಜ.1ರ ವೇಳೆಗೆ 18 ವರ್ಷ ತುಂಬುವವರು ಸಹ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶವಿದ್ದು, ವಿಳಾಸ ಬದಲಾವಣೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಅಭಿಯಾನದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಿದವರ ಮಾಹಿತಿಯನ್ನು ನ.30ರಂದು ತಂತ್ರಾಂಶಕ್ಕೆ ಅಪ್‌ಲೋಡ್ ಮಾಡಲಾಗುವುದು. ನಂತರ ದಾಖಲೆಗಳನ್ನು ಪರಿಶೀಲಿಸಿ ಜ.4ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗುವುದು.
ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕವೂ ಮತದಾರರ ನೋಂದಣಿ ಪ್ರಕ್ರಿಯೆ ಮುಂದುವರಿಯಲಿದ್ದು, ನಾಮಪತ್ರ ಸಲ್ಲಿಕೆಗೆ 10 ದಿನ ಮೊದಲು ಹೆಸರನ್ನು ಪಟ್ಟಿಗೆ ಸೇರಿಸಬಹುದಾಗಿದೆ. ಅಂತಹ ಹೆಸರುಗಳನ್ನು ಹೆಚ್ಚುವರಿ ಮತದಾರರ ಪಟ್ಟಿಯಲ್ಲಿ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು.
“ಚುನಾವಣಾ’ ಆ್ಯಪ್‌ನಲ್ಲಿ ಮಾಹಿತಿ ಲಭ್ಯ: ಮತದಾರರ ಪಟ್ಟಿಗೆ ಹೆಸರು ಸೇರಿಸುವವರು, ವಿಳಾಸ ಬದಲಾವಣೆ ಹಾಗೂ ಪಟ್ಟಿಯಿಂದ ಹೆಸರು ತೆಗೆಸುವವರ ಅನುಕೂಲಕ್ಕಾಗಿ ಚುನಾವಣಾ ಆಯೋಗದಿಂದ “ಚುನಾವಣಾ’ ಎಂಬ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡರೆ, ಸಮೀಪದ ಮತದಾನದ ಕೇಂದ್ರಗಳ ಮಾಹಿತಿ ಲಭ್ಯವಾಗಲಿದೆ. ಇದರೊಂದಿಗೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಅರ್ಜಿ ನೀಡಬಹುದು ಎಂದು ತಿಳಿಸಿದರು.
ಕಳೆದೊಂದು ತಿಂಗಳಲ್ಲಿ ಮತದಾರರ ನೋಂದಣಿ ವಿವರ
-ಹೊಸದಾಗಿ ಸೇರ್ಪಡೆಗೊಂಡವರು 31,609
-ಮತದಾರರ ಪಟ್ಟಿಯಿಂದ ಹೆಸರು ತೆಗೆದವರು 49,066
-ವಿಳಾಸ ಬದಲಾವಣೆಗೆ ಅರ್ಜಿ ನೀಡಿದವರು 6,355
-ಮತಗಟ್ಟೆ ಬದಲಾವಣೆಗೆ ಅರ್ಜಿ ಸಲ್ಲಿಸಿದವರು 1,425