ನವದೆಹಲಿ: ಮಿಂಚು ಹೊಡೆದು ಸುಮಾರು 26ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಘಟನೆ ಪಶ್ಚಿಮಬಂಗಾಳದ ವಿವಿಧ ಪ್ರದೇಶಗಳಲ್ಲಿ ಸೋಮವಾರ (ಜೂನ್ 07) ನಡೆದಿದೆ ಎಂದು ವರದಿ ತಿಳಿಸಿದೆ. ಹೂಗ್ಲಿ ಜಿಲ್ಲೆಯಲ್ಲಿ 11 ಮಂದಿ, ಮುರ್ಶಿದಾಬಾದ್ ನಲ್ಲಿ 9, ಬಂಕುರಾದಲ್ಲಿ ಇಬ್ಬರು, ಮಿಡ್ನಾಪುರದಲ್ಲಿ ಇಬ್ಬರು ಹಾಗೂ ಪಶ್ಚಿಮ ಮಿಡ್ನಾಪುರದಲ್ಲಿ ಇಬ್ಬರು ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಜಗದಾಳ ಗ್ರಾಮದಲ್ಲಿ ಒಂದೇ ಕುಟುಂಬದ 12 ಮಂದಿಗೆ ಕೋವಿಡ್: ಬೆಚ್ಚಿಬಿದ್ದ ಗ್ರಾಮಸ್ಥರು
ಘಟನೆಯಲ್ಲಿ ಜೀವ ಕಳೆದುಕೊಂಡವರ ಬಗ್ಗೆ ಸಾಂತ್ವಾನ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರಾಣಕಳೆದುಕೊಂಡ ಕುಟುಂಬ ಸದಸ್ಯರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ(ಪಿಎಂಎನ್ ಆರ್ ಎಫ್) ಯಿಂದ ತಲಾ ಎರಡು ಲಕ್ಷ ರೂಪಾಯಿ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಪಶ್ಚಿಮಬಂಗಾಳದ ವಿವಿಧೆಡೆ ಮಿಂಚು ಹೊಡೆದು ಪ್ರಾಣಕಳೆದುಕೊಂಡ ಕುಟುಂಬದವರಿಗೆ ಸಾಂತ್ವಾನ ಹೇಳುತ್ತೇನೆ. ಅಲ್ಲದೇ ಘಟನೆಯಲ್ಲಿ ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಮಿಂಚು ಹೊಡೆದು ಗಾಯಗೊಂಡವರಿಗೆ ತಲಾ 50 ಸಾವಿರ ಪರಿಹಾರ ಕೊಡುವುದಾಗಿ ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ. ಅಲ್ಲದೇ ಉತ್ತರ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಜೂನ್ 11ರ ಹೊತ್ತಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದಿರುವುದಾಗಿ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.