ಧಾರವಾಡ: ಪ್ರಸ್ತುತ ದಿನಮಾನದ ಘಟನೆ, ಸಾಹಿತ್ಯ ವಲಯ ಸೇರಿ ವಿವಿಧ ಕ್ಷೇತ್ರದಲ್ಲಿನ ಬೆಳವಣಿಗೆ ಬಗ್ಗೆ ಅಂಧರೂ ಸಹ ಇದೀಗ ಪತ್ರಿಕೆ ಓದಿ ತಿಳಿದುಕೊಳ್ಳುವ ಕಾಲ ಸನ್ನಿಹಿತವಾಗಿದೆ.ಈ ಹಿಂದೆ ಬೇರೆಯವರಿಂದ ಪತ್ರಿಕೆ ಓದಿಸಿ ಕೇಳುತ್ತಿದ್ದ ಅಂಧರೂ ಈಗ ತಾವೇ ಪತ್ರಿಕೆ ಓದಿ ಪ್ರಸ್ತುತ ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಅದಕ್ಕಾಗಿಯೇ ಧಾರವಾಡದ ಸಹನಾ ಅಂಗವಿಕಲರ ಸೇವಾ ಪ್ರತಿಷ್ಠಾನ ಅಂಧರಿಗಾಗಿಯೇ ವಿಶೇಷವಾಗಿ ರೂಪಿಸಿರುವ ಬ್ರೈಲ್ ಲಿಪಿ ಒಳಗೊಂಡ ‘ಬೆಳಕು’ ಹೆಸರಿನ ದ್ವೈಮಾಸಿಕ ಪತ್ರಿಕೆ ಲೋಕಾರ್ಪಣೆಗೆ ಸಿದ್ಧಗೊಂಡಿದೆ.
ನೂರು ಪುಟಗಳ ಪತ್ರಿಕೆ: ನೂರು ಪುಟಗಳನ್ನು ಒಳಗೊಂಡಿರುವ ಈ ಪತ್ರಿಕೆಯಲ್ಲಿ ಸಾಮಾನ್ಯ ಜ್ಞಾನ, ಶ್ರೇಷ್ಠ ಸಾಹಿತಿಗಳ ಕಿರು ಪರಿಚಯ, ಪ್ರಾಚೀನ ಸಾಹಿತ್ಯದಲ್ಲಿರುವ ಕಥೆ, ಕವನ, ಚರಿತ್ರೆ, ಅಂಧ ಸಾಧಕರ ಅಂಕಣ, ಪ್ರಚಲಿತ ವಿದ್ಯಮಾನಗಳು, ಆಧುನಿಕ ಸಾಹಿತ್ಯ, ಕಾನೂನು ಪರಿಚಯ, ವ್ಯಕ್ತತ್ವ ವಿಕಸನ, ಪ್ರವಾಸ ಕಥನ ಸೇರಿ 25ಕ್ಕೂ ಹೆಚ್ಚು ವಿಭಾಗದ ವಿವಿಧ ವಿಷಯ ಇರಲಿದೆ. ಅಂಧ ಮಕ್ಕಳಲ್ಲಿ ಓದಿನ ಅಭಿರುಚಿ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯದ 50 ಅಂಧ ಮಕ್ಕಳ ಶಾಲೆಗಳಿಗೆ, ರಾಜ್ಯದ 40ಕ್ಕೂ ಹೆಚ್ಚು ಕಾಲೇಜುಗಳಿಗೆ ‘ಬೆಳಕು’ ಉಚಿತವಾಗಿ ಪೂರೈಸಲು ಯೋಜನೆ ರೂಪಿಸಲಾಗಿದೆ. ಆಸಕ್ತರು 150 ರೂ. ವಾರ್ಷಿಕ ಚಂದಾ ಪಾವತಿಸಿ ಪತ್ರಿಕೆ ಪಡೆಯಬಹುದಾಗಿದೆ.
ಸಂಪಾದಕ ಮಂಡಳಿ: ಸಹನಾ ಅಂಗವಿಕಲರ ಸೇವಾ ಪ್ರತಿಷ್ಠಾನ ಸಂಸ್ಥೆಯ ಧಾರವಾಡ ಶಾಖೆಯ ಸಂಚಾಲಕ ರಾಮಚಂದ್ರ ಧೋಂಗಡೆ ಸಂಪಾದಕ, ಡಾ.ಚಿಲುಮಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಲಿದ್ದು, ಈ ಪತ್ರಿಕೆಗೆ ಸಲಹೆ, ಮಾರ್ಗದರ್ಶನ ನೀಡಲು ಸಂಪಾದಕ ಮಂಡಳಿ ರಚಿಸಲಾಗಿದೆ. ಮಕ್ಕಳ ಸಾಹಿತಿ ಡಾ.ಆನಂದ ಪಾಟೀಲ ಗೌರವ ಸಂಪಾದಕ ಸ್ಥಾನ ಪಡೆದಿದ್ದು, ಮಂಡಳಿ ಸದಸ್ಯರಾಗಿ ಸಾಹಿತಿಗಳಾದ ಮಲ್ಲಿಕಾರ್ಜುನ ಹಿರೇಮಠ, ಡಾ.ಬಾಳಣ್ಣ ಶೀಗಿಹಳ್ಳಿ, ಅಂಧ ಕವಿ ಬಾಪೂ ಖಾಡೆ, ಪ್ರತಿಷ್ಠಾನ ಅಧ್ಯಕ್ಷ ವಿ.ನರಸಿಂಹಯ್ಯ ಕಾರ್ಯ ನಿರ್ವಹಿಸಲಿದ್ದಾರೆ.
ಪ್ರತಿಷ್ಠಾನದಿಂದಲೇ ವೆಚ್ಚ: ಈ ಪತ್ರಿಕೆಯ ಒಂದು ಪುಟಕ್ಕೆ ನಾಲ್ಕು ರೂ. ವೆಚ್ಚ ತಗಲಿದ್ದು, ಅದರಂತೆ ನೂರು ಪುಟಗಳ ಪತ್ರಿಕೆಯ ಒಂದು ಪ್ರತಿಗೆ 400 ರೂ. ವೆಚ್ಚ ಆಗಲಿದೆ. ಈ ವೆಚ್ಚವನ್ನು ಪ್ರತಿಷ್ಠಾನವೇ ಭರಿಸಲಿದೆ. ಸದ್ಯ ಜು.15ರಂದು ಪತ್ರಿಕೆಯ ಮೊದಲ ಸಂಚಿಕೆ ಲೋಕಾರ್ಪಣೆಯಾಗಲಿದೆ. ಅದಕ್ಕಾಗಿ ನೂರು ಪ್ರತಿ ಸಿದ್ಧಪಡಿಸಲಾಗುತ್ತಿದೆ. ಪತ್ರಿಕೆಯ ಮೊದಲ ಸಂಚಿಕೆಯ ರೂಪರೇಷೆ ಸಿದ್ಧಗೊಂಡಿದೆ. ಜು.4ರಂದು ಬ್ರೈಲ್ ಲಿಪಿಯ ಮುದ್ರಣಕ್ಕೆ ಚಾಲನೆ ಸಿಗಲಿದೆ. ಜು.15ರಂದು ಗಣ್ಯರಿಂದ ಲೋಕಾರ್ಪಣೆ ಮಾಡಿಸಲು ಉದ್ದೇಶಿಸಲಾಗಿದೆ. ಅಂಧರ ಶಾಲೆ-ಕಾಲೇಜುಗಳಿಗೆ ಉಚಿತ ಪೂರೈಸಲಿರುವ ಈ ಪತ್ರಿಕೆಗೆ ಆಸಕ್ತ ಅಂಧರು ಹಾಗೂ ಸಂಘ-ಸಂಸ್ಥೆಗಳು 150 ರೂ. ಆಕರಣೆ ಮಾಡಿ ವಾರ್ಷಿಕ ಚಂದಾದಾರರಾಗುವ ಮೂಲಕ ‘ಬೆಳಕು’ ವಿಸ್ತರಿಸಲು ಕೈ ಜೋಡಿಸಬೇಕಿದೆ.
‘ವಚನ ವರ್ಷ’ವೂ ಸಿದ್ಧ
ಖ್ಯಾತ ಸಂಶೋಧಕ ಡಾ| ಎಂ.ಎಂ. ಕಲಬುರ್ಗಿ ಅವರ ಹತ್ಯೆಯಾದ ಬಳಿಕ ಬಿಡುಗಡೆಯಾದ ಅವರ ‘ವಚನ ವರ್ಷ’ ಪುಸ್ತಕವೂ ಬ್ರೈಲ್ ಲಿಪಿಯಲ್ಲಿ 50 ಪ್ರತಿ ಸಿದ್ಧವಾಗಿವೆ. ಬಸವಣ್ಣರ ಆಯ್ದ 108 ವಚನಗಳ ಸಂಗ್ರಹದ ಬ್ರೈಲ್ ಲಿಪಿಯ ಒಳಗಣ್ಣಿಗೊಂದು ಬೆಳಕು (ಬಸವ ವಚನಾಮೃತ) 50 ಪ್ರತಿಯನ್ನು ಸಿದ್ಧ ಮಾಡಿಕೊಳ್ಳಲಾಗಿದೆ.
ಎರಡು ತಿಂಗಳಿಗೊಮ್ಮೆ ವರ್ಷಕ್ಕೆ ಆರು ಸಂಚಿಕೆ ಮುದ್ರಣಗೊಳ್ಳಲಿದೆ. ಸದ್ಯ ಅಂಧ ಶಾಲೆಗಳಿಗೆ ಉಚಿತವಾಗಿ ಪೂರೈಸಲು ಯೋಜನೆ ರೂಪಿಸಲಾಗಿದೆ. ಪತ್ರಿಕೆಗೆ ಪ್ರೋತ್ಸಾಹ ಅಗತ್ಯವಿದೆ.
● ರಾಮಚಂದ್ರ ಧೋಂಗಡೆ, ಸಂಚಾಲಕ,
ಸಹನಾ ಅಂಗವಿಕಲರ ಸೇವಾ ಪ್ರತಿಷ್ಠಾನ
ಶಶಿಧರ್ ಬ್ನುದಿ