Advertisement
ತ್ಯಾಗಮೂರ್ತಿ ಬಾಹುಬಲಿ ಅಖಂಡ ಮೂರ್ತಿಯಿರುವ ವಿಂಧ್ಯಗಿರಿಯು ವಿಶೇಷ ಕಳೆಯೊಂದಿಗೆ ಭಕ್ತರು, ಪ್ರವಾಸಿರನ್ನು ಸೆಳೆಯುತ್ತಿದೆ. ವರ್ಣಮಯ ದೀಪದ ವ್ಯವಸ್ಥೆ, ಹೂವಿನ ಅಲಂಕಾರದಿಂದ ಗಿರಿಯ ಕೆಳಭಾಗದ ಮೆಟ್ಟಿಲುಗಳ ಪ್ರವೇಶ ದ್ವಾರದಲ್ಲಿನ ಮಂಟಪದ ಪ್ರತಿಕೃತಿ ವಿಶೇಷವಾಗಿದೆ. ಗಿರಿಯಲ್ಲಿನ 630 ಮೆಟ್ಟಿಲಿನ ಎರಡೂ ಬದಿಯ ಸರಳಿನ ತಡೆಗೆ ಅಳವಡಿಸಿರುವ ವಿದ್ಯುತ್ ದೀಪಾಲಂಕಾರ ರಾತ್ರಿ ವೇಳೆ ವಿಶೇಷ ಆಕರ್ಷಣೆ ತಂದುಕೊಟ್ಟಿದೆ.
ಮನೆಗಳು ಸುಣ್ಣಬಣ್ಣ ಬಳಿದುಕೊಂಡು ಸಿಂಗಾರಗೊಂಡಿದ್ದರೆ ರಸ್ತೆಗಳಲ್ಲಿ ಚಿತ್ತಾಕರ್ಷಕ ರಂಗೋಲಿಗಳು ಮೆರುಗು ತಂದಿವೆ. ದೊಡ್ಡ ಬೆಟ್ಟ, ಚಿಕ್ಕ ಬೆಟ್ಟ, ಕಲ್ಯಾಣಿಯು ವಿಶೇಷವಾಗಿ ಸಿಂಗಾರಗೊಂಡಿದ್ದು, ವಿದ್ಯುತ್ ದೀಪಾಲಂಕಾರ ಮೆರುಗು ಹೆಚ್ಚಿಸಿದೆ. ಜೈನ ಧರ್ಮೀಯರು ಮಾತ್ರವಲ್ಲದೇ ಹೋಬಳಿಯಲ್ಲಿರುವ ಸರ್ವ ಧರ್ಮೀಯರು ಉತ್ಸಾಹದಿಂದ ಪಾಲ್ಗೊಳ್ಳುವ ಮೂಲಕ ಬೆಳಗೊಳದ ಊರ ಉತ್ಸವದಂತೆ ಆಚರಿಸುವುದು ಹಿಂದಿನಿಂದ ನಡೆದು ಬಂದಿದ್ದು, ಈಗಲೂ ಮುಂದುವರಿದಿದೆ. ದಿಗಂಬರ ಮುನಿಗಳು ವಿಂಧ್ಯಗಿರಿಗೆ ಬಂದು ಹೋಗುವಾಗ ಅವರು ನಡೆದಾಡುವ ಹಾದಿಯಲ್ಲಿ ನೀರು ಹರಿಸಿ ಜನ ಗೌರವಿಸುತ್ತಾರೆ. ರಸ್ತೆಯಲ್ಲಿ ಎದುರಾದಾಗ ಬಾಗಿ ನಮಸ್ಕರಿಸುತ್ತಾರೆ. ಒಟ್ಟಾರೆ ಊರ ಉತ್ಸವದಿಂದ ಜನ ಸಂಭ್ರಮದಲ್ಲಿದ್ದಾರೆ.
Related Articles
Advertisement
ನಾನಾ ಸೇವೆ: ವಿಂಧ್ಯಗಿರಿಯ ಸುತ್ತಮುತ್ತಲಿನ ಕೆಲ ನಿವಾಸಿಗಳು ಬೆಟ್ಟವಿಳಿದು ಬಂದವರು ದಣಿವಾರಿಸಿಕೊಳ್ಳಲೆಂದು ಮನೆಗಳ ಮುಂದೆ ಬಾಟಲಿಗಳಲ್ಲಿ ನೀರು ತುಂಬಿಸಿಟ್ಟು ನೆರವಾಗುತ್ತಿದ್ದಾರೆ. ಮಂಗಾಯಿ ಬಸದಿ ರಸ್ತೆಯ ಕೆಲ ನಿವಾಸಿಗಳು ಮನೆಯ ಮುಂದೆ ಟೇಬಲ್‌ಗಳ ಮೇಲೆ ನೀರಿನ ಬಾಟಲಿಯಿಟ್ಟು ಸ್ಪಂದಿಸುತ್ತಿದ್ದಾರೆ. ದ್ವಿಚಕ್ರ ವಾಹನಗಳಲ್ಲಿ ತೆರಳುವ ಸ್ಥಳೀಯರು ಪ್ರವಾಸಿಗರು, ಸ್ವಯಂಸೇವಕರಿಗೆ ಡ್ರಾಪ್ ನೀಡುವ ಜತೆಗೆ ಮಾರ್ಗದರ್ಶನ ನೀಡಿ ಸಹಕಾರ ನೀಡುತ್ತಿದ್ದಾರೆ. ಶಾಲಾ- ಕಾಲೇಜು ವಿದ್ಯಾರ್ಥಿಗಳು ನಾನಾ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು ಸಂಭ್ರಮಿಸುತ್ತಿದ್ದಾರೆ.
ತಮ್ಮ ದಿನನಿತ್ಯದ ಜೀವನದಲ್ಲಿ ಗೊಮ್ಮಟಗಿರಿ ಒಂದು ಭಾಗವಾಗಿದ್ದರೂ ಮಹಾಮಸ್ತಕಾಭಿಷೇಕ ಉತ್ಸವ ಸ್ಥಳೀಯರಲ್ಲಿ ವಿಶೇಷ ಆಕರ್ಷಣೆ ಹುಟ್ಟಿಸಿದೆ. ಸಾಮಾನ್ಯ ಸಂದರ್ಭದ ಸಣ್ಣ ಕುರುಹೂ ಕಾಣದಂತೆ ಸೃಷ್ಟಿಯಾಗಿರುವ ವೈಭವದ ಉತ್ಸವದ ಪ್ರತಿಕ್ಷಣವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಸ್ಥಳೀಯರು, ಶಾಲಾ- ಕಾಲೇಜು ವಿದ್ಯಾರ್ಥಿಗಳು, ಪಾರಿಗಳು, ಕೃಷಿಕರು ಹೀಗೆ ಆಬಾಲವೃದ್ಧರಾದಿಯಾಗಿ ಎಲ್ಲರೂ ಬಾಹುಬಲಿಯ ಮಹಾಮಜ್ಜನ ಉತ್ಸವಕ್ಕಾಗಿ ಪುಳಕಗೊಂಡಿದ್ದಾರೆ.
ಕಣ್ತುಂಬಿಕೊಳ್ಳಲು ಕಾತರ: ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವಕ್ಕೆ ಚಾಲನೆಯೊಂದಿಗೆ ಮಹಾಮಸ್ತಕಾಭಿಷೇಕ ಉತ್ಸವದ ಬಹುಕಾಲದ ಸಿದ್ಧತೆಗೆ ಬಹುತೇಕ ತೆರೆ ಬಿದ್ದಂತಂತಾಗಿದೆ. ರಾಜ್ಯ, ರಾಷ್ಟ್ರದ ಪ್ರವಾಸಿಗರು, ಭಕ್ತರು ಮಾತ್ರವಲ್ಲದೆ ವಿದೇಶಿಗರು, ಅನಿವಾಸಿ ಭಾರತೀಯರು ದೊಡ್ಡ ಸಂಖ್ಯೆಯಲ್ಲಿ ವಿಂಧ್ಯಗಿರಿಯತ್ತ ಮುಖ ಮಾಡಿದ್ದಾರೆ. ಫೆ.17ಕ್ಕೆ ನಡೆಯಲಿರುವ ಮಹಾಮಜ್ಜನವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ಕಾತರರಾಗಿದ್ದಾರೆ. ಒಟ್ಟಾರೆ ಇಡೀ ಶ್ರವಣಬೆಳಗೊಳ ಕ್ಷೇತ್ರ ಸಂಭ್ರಮದ ಜತೆಗೆ ಧಾರ್ಮಿಕ, ಭಕ್ತಿ ಆಚರಣೆಗಳಲ್ಲಿ ಮಿಂದಿದೆ.
ಹಾಲ್ನೊರೆಯ ಮೂರ್ತಿ ಬಿಂಬ981ರಲ್ಲಿ ವಯೋವೃದ್ಧ ಗುಳ್ಳಕಾಯಜ್ಜಿ ಸಣ್ಣ ಗಿಂಡಿಯಲ್ಲಿ ಮಾಡಿದ ಅಭಿಷೇಕದಿಂದ ಇಡೀ ಬಾಹುಬಲಿ ಮೂರ್ತಿ ತೋಯ್ದು ಹಾಲು ಹೊಳೆಯಾಗಿ ಬೆಟ್ಟದ ಕೆಳಗೆ ಹರಿದು ಬೆಳಗೊಳವಾಯಿತು ಎಂಬುದು ಪ್ರತೀತಿ. ಹಾಗಾಗಿ ಈ ಬಾರಿ ಮಹಾಮಸ್ತಕಾಭಿಷೇಕದ ಲಾಂಛನದಲ್ಲಿ ಗುಳ್ಳಕಾಯಜ್ಜಿ ಕೈಯಲ್ಲಿನ ಕೊಡದಿಂದ ಹಾಲು ಬಾಹುಬಲಿ ಮೂರ್ತಿಯ ಮಸ್ತಕದ ಮೇಲೆ ಸುರಿಯುತ್ತಿರುವ ರೂಪಕವನ್ನು ಮೂಡಿಸಲಾಗಿದೆ. ಹಾಲ್ನೊರೆಯಲ್ಲಿ ಮಿಂದ ಮೂರ್ತಿಯ ಲಾಂಛನವನ್ನೇ ಬೆಳಗೊಳದಾದ್ಯಂತ ಕಂಬ, ಕಟ್ಟಡ, ಗೋಡೆ, ಮರಗಳಿಗೆ ಅಳವಡಿಸಿರುವುದು ವಿಶೇಷ ಗಮನ ಸೆಳೆಯುತ್ತಿದೆ. ಹೆಮ್ಮೆಯ ಸಂಗತಿ
ಮಹಾಮಸ್ತಕಾಭಿಷೇಕವು ಬೆಳಗೊಳದ ಪಾರಂಪರಿಕ, ಐತಿಹಾಸಿಕ ಉತ್ಸವ. ಜಗತ್ತಿನಾದ್ಯಂತ ಜನರನ್ನು ಸೆಳೆಯುವ ಉತ್ಸವಕ್ಕೆ ನಮ್ಮೂರು ಸಾಕ್ಷಿಯಾಗುವುದು ನಮಗೆ ಎಲ್ಲಿಲ್ಲದ ಸಂತೋಷ. ತಾತ್ಕಾಲಿಕ ವ್ಯವಸ್ಥೆಗಳಿಗೆ ಭೂಮಿ ನೀಡುವುದು, ಸಂಚಾರದಲ್ಲಿ ಬದಲಾವಣೆ, ನಿರ್ಬಂಧ, ಪ್ರವಾಸಿಗರ ಜನಜಂಗಳಿಯಿಂದ ನಮಗೇನೂ ತೊಂದರೆಯಿಲ್ಲ. ಬದಲಿಗೆ ನಮ್ಮೂರ ಖ್ಯಾತಿ ಹೆಚ್ಚಾಗುವುದು ಹೆಮ್ಮೆಯ ಸಂಗತಿ ಎನ್ನುತ್ತಾರೆ ಹೊಸಹಳ್ಳಿಯ ವೆಂಕಟೇಶ್. ಐ ಯಾಮ್ ರಿಯಲಿ ಎಕ್ಸೆ„ಟೆಡ್
ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕದ ಬಗ್ಗೆ ಆರು ತಿಂಗಳ ಹಿಂದೆ ಇಂಟರ್‌ನೆಟ್‌ನಲ್ಲಿ ಓದಿದ್ದೆ. ಹಾಗಾಗಿ, ಭಾರತ ಪ್ರವಾಸವನ್ನು ಇದೇ ಅವಧಿಗೆ ಹೊಂದಿಸಿಕೊಂಡೆ. ಎರಡು ವಾರದ ಹಿಂದಷ್ಟೇ ಭಾರತಕ್ಕೆ ಬಂದಿದ್ದು, ಮೊದಲ ಬಾರಿ ದಕ್ಷಿಣ ಭಾರತ ಪ್ರವಾಸ ಕೈಗೊಂಡಿದ್ದೇನೆ. ಏಕಶಿಲೆಯಲ್ಲಿ ಇಷ್ಟು ದೊಡ್ಡ ಮೂರ್ತಿ ನಿರ್ಮಾಣದ ಕಲ್ಪನೆಯೇ ಇರಲಿಲ್ಲ. ಆ ಮೂರ್ತಿ ಬಾಹುಬಲಿಯ ವ್ಯಕ್ತಿತ್ವ, ತ್ಯಾಗವನ್ನು ಸಾರುವಂತಿದೆ. ಕ್ಷಣಕಾಲ ಮೂರ್ತಿ ನನ್ನನ್ನು ಹಿಡಿದಿಟ್ಟುಕೊಂಡಿತ್ತು. ಮೂರ್ತಿಯ ದರ್ಶನ ರೋಮಾಂಚನ ಉಂಟು ಮಾಡಿದ್ದು, ಐ ಯಾಮ್ ರಿಯಲಿ ಎಕ್ಸೆ„ಟೆಡ್…’ ಎಂದು ಪ್ರವಾಸಿಗ ಮ್ಯಾಂಚೆಸ್ಟರ್‌ನ ಕೊಲಿನ್ ಶಾರ್ಪಲ್ಸ್ ಹೇಳಿದರು. ಕೀರ್ತಿಪ್ರಸಾದ್ ಎಂ.