Advertisement

ಬೆಳಕು ಮೀನುಗಾರಿಕೆ ಅಕ್ರಮ ಅಲ್ಲ

12:40 AM Mar 07, 2019 | |

ಮಲ್ಪೆ: ಬೆಳಕು ಮೀನುಗಾರಿಕೆ ಅಕ್ರಮವಲ್ಲ. ಸರಿಯಾದ ಅರಿವಿಲ್ಲದ ಕೆಲವರು ರಾಜಕೀಯ ವ್ಯಕ್ತಿಗಳ ಒತ್ತಡ ಮತ್ತು ಹಣಬಲದಿಂದ ಪರ್ಸೀನ್ ಮೀನುಗಾರರ ಮೇಲೆ ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಎಂದು ಮಲ್ಪೆ ಪರ್ಸೀನ್ ಮೀನುಗಾರರ ಸಂಘ ಆಪಾದಿಸಿದೆ.

Advertisement

ಪರ್ಸೀನ್ ಮೀನುಗಾರರು 45 ಎಂ.ಎಂ. ಗಾತ್ರದ ಬಲೆ ಬಳಸಿ ಮೀನು ಹಿಡಿಯುವುದರಿಂದ ಸಣ್ಣ ಮರಿಮೀನುಗಳು ನಾಶವಾಗುವುದಿಲ್ಲ. ಸಂಬಂಧಪಟ್ಟ ಎಲ್ಲ ಇಲಾಖಾ ತಜ್ಞರು ಬೆಳಕು ಮೀನುಗಾರಿಕೆ ಮಾಡಿಕೊಂಡು ಬಂದ ಬೋಟಿನ ಮೀನನ್ನು ಇಳಿಸುವ ವೇಳೆಯಲ್ಲಿ ಬಂದು ಪರಿಶೀಲನೆ ನಡೆಸಲಿ ಎಂದು ಸಂಘದ ಅಧ್ಯಕ್ಷ ಯಶೋಧರ ಅಮೀನ್‌ ತಿಳಿಸಿದ್ದಾರೆ.

ಆಳಸಮುದ್ರ ಬೋಟನ್ನು ಪರೀಕ್ಷೆ ಮಾಡಿ
ಆಳಸಮುದ್ರ ಮೀನುಗಾರರು ದಿನದ 24 ಗಂಟೆ ನಿರಂತರ ಟ್ರಾಲಿಂಗ್‌ ಮಾಡಿ 35 ಎಂ.ಎಂ. ಗಾತ್ರದೊಳಗಿನ ಬಲೆಯಿಂದ ಸಣ್ಣ ಗಾತ್ರದ ಮರಿಮೀನು ಹಿಡಿದು, ಮೀನಿನ ಮೊಟ್ಟೆಯನ್ನು ನಾಶ ಮಾಡುತ್ತಾರೆ. ಮರಿಬೊಂಡಾಸ್‌, ಮರಿಕಪ್ಪೆ ಬೊಂಡಾಸ್‌, ಮರಿಸಿಲ್ವರ್‌ ಮೀನು(ಪಾಂಬಲ್‌), 10ರಿಂದ 20ಟನ್‌ಗಳಷ್ಟು ಮರಿ (ಚಲ್ಟ್) ಮೀನುಗಳನ್ನು ಹಿಡಿದು ತರುತ್ತಾರೆ. ಆಳಸಮುದ್ರ ಮೀನುಗಾರರು ಹಿಡಿದು ತಂದ ಮೀನನ್ನೂ ಕೂಡ ಸಂಬಂಧಪಟ್ಟ ಇಲಾಖಾ ತಜ್ಞರು ಮೀನು ಖಾಲಿ ಮಾಡುವ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರೆ ನಿಜಾಂಶ ಬಯಲಾಗಲಿದೆ ಎಂದು ಪರ್ಸೀನ್ ಮೀನುಗಾರರು ತಿಳಿಸಿದ್ದಾರೆ.

ಇದು ಕಾನೂನು ಉಲ್ಲಂಘನೆ ಅಲ್ಲವೆ?
ಕೇಂದ್ರ ಸರಕಾರದ ಕಾನೂನಿನ ಪ್ರಕಾರ 280ಅಶ್ವಶಕ್ತಿಯ ಎಂಜಿನ್‌ ಬಳಸಿ ಮೀನುಗಾರಿಕೆ ಮಾಡಲು ಮಾತ್ರ ಅವಕಾಶ, ಆದರೆ ಆಳಸಮುದ್ರ ಮೀನುಗಾರರು 490 ಅಶ್ವಶಕ್ತಿ ಎಂಜಿನ್‌ಬಳಸಿ ಮೀನುಗಾರಿಕೆ ಮಾಡುವುದು ಕಾನೂನು ಉಲ್ಲಂಘನೆಯಲ್ಲವೆ ಎಂದು ಪ್ರಶ್ನಿಸಿದ್ದಾರೆ.

ತೀರ್ಪು ಪುನರ್‌ ಪರಿಶೀಲನೆಯಾಗಲಿ
ಬೆಳಕು ಮೀನುಗಾರಿಕೆಯಿಂದ ಸಾವಿರಾರು ಮಂದಿ ಮೀನುಗಾರರು ಜೀವನ ನಡೆಸುತ್ತಿದ್ದಾರೆ. ಈಗಾಗಲೇ ಪರ್ಸಿನ್‌ ಬೋಟಿನವರು ಬ್ಯಾಂಕ್‌ಗಳಲ್ಲಿ 40ರಿಂದ 50 ಲಕ್ಷ ಸಾಲ ಮಾಡಿ ಬೋಟು ಬಲೆ ಮಾಡಿರುತ್ತಾರೆ. ಆದ್ದರಿಂದ ಉಚ್ಚ ನ್ಯಾಯಾಲಯವು ತೀರ್ಪುನ್ನು ಪುನರ್‌ ಪರಿಶೀಲನೆ ನಡೆಸಿ ಪರ್ಸಿನ್‌ ಮೀನುಗಾರರಿಗೆ ನ್ಯಾಯವಾದ ತೀರ್ಪನ್ನು ನೀಡಬೇಕು ಎಂದು ಪರ್ಸಿನ್‌ ಮೀನುಗಾರರ ಸಂಘ ಆಗ್ರಹಿಸಿದೆ.

Advertisement

ಪರ್ಸೀನ್ ಮೀನುಗಾರಿಕೆ
ನಿಲ್ಲಿಸುವ ಹುನ್ನಾರ: ಆರೋಪ

ಮಲ್ಪೆ ಡೀಪ್‌ಸೀ ಟ್ರಾಲ್‌ಬೋಟ್‌ ಸಂಘದ ಕೆಲವರು ಪರ್ಸೀನ್ ಮೀನುಗಾರಿಕೆಯನ್ನು ನಿಲ್ಲಿಸುವ ಹುನ್ನಾರ ನಡೆಸುತ್ತಿದ್ದಾರೆ. ಡೀಪ್‌ಸೀ ಸಂಘದ ಅಧ್ಯಕ್ಷ ಕಿಶೋರ್‌ ಡಿ. ಸುವರ್ಣ, ದಯಾನಂದ ಕುಂದರ್‌, ಕರುಣಾಕರ ಸಾಲ್ಯಾನ್‌, ವಿಠಲ ಕರ್ಕೇರ ಅವರು ನಾಡದೋಣಿಯವರಿಗೆ ತಪ್ಪು ಮಾಹಿತಿ ನೀಡಿ, ಮಾತೃ ಸಂಘದ ನಿಯಮವನ್ನು ಬದಿಗೊತ್ತಿ, ಸಂಬಂಧಪಟ್ಟ ಇಲಾಖೆ ಮತ್ತು ಮೀನುಗಾರ ಸಂಘದ ಅನುಮತಿ ಪಡೆಯದೆ ಸರ್ವಾಧಿಕಾರ ಧೋರಣೆಯಿಂದ ಮೀನುಗಾರರ ನಡುವೆ ಭಿನ್ನಾಬಿಪ್ರಾಯ, ಕಲಹಕ್ಕೆ ಕಾರಣರಾಗುತ್ತಾರೆ ಎಂದು ಮಲ್ಪೆ ಪರ್ಸೀನ್ ಮೀನುಗಾರರ ಸಂಘ ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next