Advertisement

ಭಾವುಕ ಜೀವಿಯ ಏರಿಳಿತ!

01:40 PM May 14, 2017 | Team Udayavani |

ಚಿತ್ರ: ಲಿಫ್ಟ್  ಮ್ಯಾನ್‌ ನಿರ್ಮಾಣ: ರಾಮ್‌  ನಿರ್ದೇಶನ: ಕಾರಂಜಿ ಶ್ರೀಧರ್‌

Advertisement

ತಾರಾಗಣ: ಸುಂದರ್‌ರಾಜ್‌,ಸುರೇಶ್‌ ಹೆಬ್ಳೀಕರ್‌, ಸುನೀಲ್‌ ಪುರಾಣಿಕ್‌, ನಿಹಾರಿಕಾ, ಅರುಣ ಬಾಲರಾಜ್‌, ಶೀತಲ್‌ಶೆಟ್ಟಿ ಇತರರು.

ಒಂದು ಲಿಫ್ಟ್. ಇನ್ನೊಂದು ಸ್ಟುಡಿಯೋ. ಒಂದೆಡೆ ಸ್ಟುಡಿಯೋದಲ್ಲಿ ಇಬ್ಬರ ನಡುವಿನ ಮಾತುಕತೆ. ಇನ್ನೊಂದೆಡೆ ಲಿಫ್ಟ್ನಲ್ಲಿ ಬರುವ ಜನರ ತರಹೇವಾರಿ ವ್ಯಥೆ. ಇದು “ಲಿಫ್ಟ್ ಮ್ಯಾನ್‌’ ಒಬ್ಬನ ಬದುಕಿನ ಏರಿಳಿತಗಳ ಚಿತ್ರಣ. ಸಾಮಾನ್ಯವಾಗಿ ಇಂತಹ ಕಥೆಗಳನ್ನು ತೆರೆಯ ಮೇಲೆ ಅಳವಡಿಸುವುದಕ್ಕೆ ತಾಳ್ಮೆ ಬೇಕು. ಅದು ನಿರ್ದೇಶಕರಲ್ಲಿದೆ. ಆದರೆ, ಆ ತಾಳ್ಮೆ ನೋಡುಗರಲ್ಲೂ ಇರುತ್ತಾ ಎಂಬುದಕ್ಕೆ ಉತ್ತರಿಸುವುದು ಕಷ್ಟ. ಯಾಕೆಂದರೆ, ಸ್ಟುಡಿಯೋವೊಂದರಲ್ಲಿ ನಡೆಯುವ ಚರ್ಚೆ ಮತ್ತು ಫ್ಲ್ಯಾಶ್‌ಬ್ಯಾಕ್‌ ದೃಶ್ಯಗಳಲ್ಲೇ ಸಿನಿಮಾ ಗಿರಕಿ ಹೊಡೆಯುತ್ತಾ ಹೋಗುತ್ತೆ. ಕಥೆಯಲ್ಲಿ ಗಟ್ಟಿತನವಿದೆ. ಆದರೆ, ನಿರೂಪಣೆಯಲ್ಲಿ ಹಿಡಿತ ತಪ್ಪಿದೆ.

ಇನ್ನಷ್ಟು ಬಿಗಿಯಾದ ಹಿಡಿತವಿಟ್ಟುಕೊಂಡಿದ್ದರೆ ಚಿತ್ರ “ಲಿಫ್ಟ್’ ಆಗುವ ಸಾಧ್ಯತೆ ಇತ್ತು. ಒಂದು ಕಥೆ ಹೇಳುವ ವಿಧಾನವೇನೋ ಚೆನ್ನಾಗಿದೆ. ಆದರೆ, ಅದನ್ನು ತೋರಿಸುವ ವಿಧಾನದಲ್ಲಿ ಒಂದಷ್ಟು ಏರಿಳಿತಗಳಿವೆ. ಒಂದು ಟಿವಿ ಮುಂದೆ ಕುಳಿತು ವ್ಯಕ್ತಿಯೊಬ್ಬನ ನೋವಿನ ಎಪಿಸೋಡ್‌ ನೋಡಿದ ಅನುಭವ ಆಗುತ್ತೇ ಹೊರತು, ಆ ವ್ಯಕ್ತಿಯ ಬದುಕಿನ ಚಿತ್ರಣ ಅಷ್ಟು ಬೇಗ ತಾಗುವುದಿಲ್ಲ. ಹಾಗಾಗಿಯೇ, ಇಂತಹ ಕಥೆಗಳನ್ನು ದೃಶ್ಯರೂಪದಲ್ಲಿ ನೋಡಲು ತಾಳ್ಮೆ ಬೇಕೆನಿಸುವುದು ನಿಜ.

ಒಂದು ಟಿವಿ ಸ್ಟುಡಿಯೋ ಮೂಲಕ ಲಿಫ್ಟ್ಮ್ಯಾನ್‌ವೊಬ್ಬನ 20 ವರ್ಷಗಳ ಅನುಭವವನ್ನು ಹೇಳುವ ತಂತ್ರಗಾರಿಕೆಯಲ್ಲಿ ನಿರ್ದೇಶಕರು ಜಾಣ್ಮೆ ಮೆರೆದಿದ್ದಾರೆ.ಇಲ್ಲಿ ಟಿವಿ ಎಪಿಸೋಡ್‌ ಕಡಿಮೆ ಮಾಡಿ, ಸಂಪೂರ್ಣ ಫ್ಲ್ಯಾಶ್‌ಬ್ಯಾಕ್‌ನತ್ತ ಹೋಗಿದ್ದರೆ, “ಲಿಫ್ಟ್ಮ್ಯಾನ್‌’ ಶ್ರಮವನ್ನು ಕೊಂಡಾಡಬಹುದಿತ್ತೇನೋ? ಆದರೂ, ಮೊದಲರ್ಧ ಸ್ವಲ್ಪ ತಾಳ್ಮೆ ಕೆಡಿಸಿದರೂ, ದ್ವಿತಿಯಾರ್ಧದಲ್ಲಿ ಒಂದಷ್ಟು ತಿರುವು ಪಡೆದುಕೊಳ್ಳುತ್ತಾ ಹೋಗುತ್ತೆ. ಇಲ್ಲಿ ಭಾವುಕತೆ ಇದೆ. ಭಾವನೆಗಳೂ ತುಂಬಿವೆ. ಒಬ್ಬ ಐಎಎಸ್‌ ಅಧಿಕಾರಿ ಹಾಗೂ ಲಿಫ್ಟ್ ಮ್ಯಾನ್‌ ನಡುವಿನ ಆತ್ಮೀಯತೆಯ ಸಾರವೂ ಇದೆ.

Advertisement

ಅಲ್ಲಲ್ಲಿ ಮಾನವೀಯ ಮೌಲ್ಯವೂ ಓಡಾಡುತ್ತೆ, ಕೆಲವೊಮ್ಮೆ ಅಸಾಹಯಕತೆಯೂ ಇಣುಕಿ ನೋಡುತ್ತೆ. ಇವೆಲ್ಲದರ ಒದ್ದಾಟದಲ್ಲಿ ಆ “ಲಿಫ್ಟ್ಮ್ಯಾನ್‌’ ಹೇಗೆ ಬದುಕಿನ ಏರಿಳಿತಗಳನ್ನು ಎದುರಿಸುತ್ತಾನೆ ಅನ್ನೋದೇ ಚಿತ್ರಣ. ಪ್ರೀತಿಸಿದ ಹುಡುಗಿಯನ್ನು ಕೈ ಹಿಡಿಯಬೇಕಾದರೆ, ಕಸ ಗುಡಿಸುವುದಾದರೂ ಸರಿ ಸರ್ಕಾರಿ ಕೆಲಸ ಇರಬೇಕು ಎಂಬ ಹುಡುಗಿ ಅಪ್ಪ ಹೇಳಿದ್ದನ್ನೇ ಚಾಲೆಂಜಿಂಗ್‌ ಆಗಿ ತೆಗೆದುಕೊಂಡು, ಸರ್ಕಾರಿ ಕೆಲಸ ಹುಡುಕೋಕೆ ವಿಧಾನಸೌಧ ಮೆಟ್ಟಿಲೇರುವ ಮಂಜಪ್ಪ, “ಲಿಫ್ಟ್’ನೊಳಗೆ ಹೋಗುತ್ತಿದ್ದಂತೆಯೇ, ಬರುವ ಜನರೆಲ್ಲ ಫ‌ಸ್ಟ್‌ ಫ್ಲೋರ್‌, ಸೆಕೆಂಡ್‌ ಫ್ಲೋರ್‌ ಹೀಗೆ ಹೇಳುತ್ತಾ ಹೋಗುತ್ತಾರೆ. ಅತ್ತ ಮಂಜಪ್ಪ ಕೂಡ ಕಕ್ಕಾಬಿಕ್ಕಿಯಾಗಿ, ಜನರು ಹೇಳಿದ ಫ್ಲೋರ್‌ಗಳಿಗೆ ಲಿಫ್ಟ್ ಬಟನ್‌ ಒತ್ತಿ ಅವರನ್ನು ಬಿಡುತ್ತಾನೆ. ಹೊರ ಹೋಗೋರೆಲ್ಲಾ, ಕೈಗಷ್ಟು ಕಾಸು ಇಟ್ಟು, ಕಾಫಿಗೆ ಇಟ್ಕೊ ಅಂತ ಹೇಳಿ ಹೊರ ನಡೆಯುತ್ತಾರೆ. ಮಂಜಪ್ಪ,ಅದನ್ನೇ ಕೆಲಸ ಅಂತ ಮಾಡುತ್ತಾನೆ. ಸರ್ಕಾರ ನೇಮಕ ಮಾಡದಿದ್ದರೂ, ತನಗೆ ಸರ್ಕಾರಿ ಕೆಲಸ ಸಿಕ್ಕಿದೆ ಅಂತ ಹೇಳಿ ಮದುವೆ ಮಾಡಿಕೊಳ್ಳುತ್ತಾನೆ. ಮಕ್ಕಳೂ ಆಗುತ್ತವೆ. ವಯಸ್ಸೂ ಆಗುತ್ತೆ. ಆ ಇಪ್ಪತ್ತು ವರ್ಷಗಳ ಅನುಭವದಲ್ಲಿ ವಿಭಿನ್ನ ವ್ಯಕ್ತಿಗಳನ್ನು ನೋಡುವ ಮಂಜಪ್ಪ, ಕುಟುಂಬದವರ ಆಸೆ, ಆಕಾಂಕ್ಷೆ ಈಡೇರಿಸಲಾಗದೆ ಒದ್ದಾಡುತ್ತಾನೆ. ಎಷ್ಟೋ ಜನರನ್ನು ಲಿಫ್ಟ್ ಮಾಡುವ ಮಂಜಪ್ಪನ ಬದುಕು ಕೂಡ ಏರಳಿತಗಳ ಮಧ್ಯೆ ಸಿಲುಕಿಕೊಳ್ಳುತ್ತೆ. ಅದರಿಂದ ಹೊರಬರುತ್ತಾನೋ, ಇಲ್ಲವೋ ಎಂಬ ಕುತೂಹಲವಿದ್ದರೆ ಒಮ್ಮೆ ಚಿತ್ರ ನೋಡಲ್ಲಡ್ಡಿಯಿಲ್ಲ.

ಸುಂದರ್‌ರಾಜ್‌ ವೃತ್ತಿ ಬದುಕಿನಲ್ಲಿ ಇದು ನೆನಪಲ್ಲುಳಿಯುವ ಪಾತ್ರವೆಂದರೆ, ತಪ್ಪಿಲ್ಲ. ಅವರು ಪಾತ್ರದಲ್ಲಿ ಜೀವಿಸಿದ್ದಾರೆ. ಅಸಹಾಯಕ ವ್ಯಕ್ತಿಯಾಗಿ, ಅಲ್ಲಲ್ಲಿ ಕಣ್ಣು ಒದ್ದೆಯಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುರೇಶ್‌ಹೆಬ್ಳೀಕರ್‌ ಒಳ್ಳೆಯ ಅಧಿಕಾರಿಯಾಗಿ ಇರುವಷ್ಟು ಕಾಲ ಇಷ್ಟವಾಗುತ್ತಾರೆ. ಉಳಿದಂತೆ ನಿಹಾರಿಕಾ ಒಂದಷ್ಟು ಗಮನಸೆಳೆದರೆ, ಟಿವಿ ಸುದ್ದಿ ವಾಚಕಿ ಪಾತ್ರದಲ್ಲಿ ಶೀತಲ್‌ಶೆಟ್ಟಿ ಬದಲಾವಣೆಯಾಗಿಲ್ಲ! ಇನ್ನುಳಿದಂತೆ ಆ ಲಿಫ್ಟ್ನಲ್ಲಿ ಬರುವ ಸುನೀಲ್‌ ಪುರಾಣಿಕ್‌,ಅರುಣ ಬಾಲರಾಜ್‌, ರಾಮ್‌ ಇತರರು ಸಿಕ್ಕ ಅವಕಾಶಕ್ಕೆ ಮೋಸ ಮಾಡಿಲ್ಲ. ಪ್ರವೀಣ್‌ ಗೋಡ್ಖೀಂಡಿ ಸಂಗೀತ ಪರವಾಗಿಲ್ಲ. ಲಕ್ಷ್ಮೀನಾರಾಯಣ ಕ್ಯಾಮೆರಾದಲ್ಲೂ ಅಲ್ಲಲ್ಲಿ ಏರಿಳಿತ ಕಂಡುಬರುತ್ತೆ.

 ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next