Advertisement
ಬಿಡದಿ ಬಳಿಯ ತಮ್ಮ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾವುದೇ ಸಭೆ, ಸಮಾರಂಭದಲ್ಲಿ ಭಾಗವಹಿಸಲು ಹೋದಾಗ ನನ್ನ ಭದ್ರತಾ ಸಿಬ್ಬಂದಿ ಆಯುಧ ಇರಿಸಿಕೊಂಡಿರುವುದನ್ನು ಸಾರ್ವಜನಿಕರು ನೋಡಿದ್ದಾರೆ. ಆಯುಧ ಪೂಜೆ ದಿನದಂದು ನಮ್ಮ ಮೈಸೂರಿನ ಮನೆಯಲ್ಲಿ ಅದೇ ಶಸ್ತ್ರಾಸ್ತ್ರಗಳಿಗೆ ಪೂಜೆ ಮಾಡಲಾಗಿದೆ.
Related Articles
Advertisement
ಆದರೆ, ಇದಕ್ಕೆ ಸಂಬಂಧಿಸಿದಂತೆ ನನ್ನಿಂದ ಸ್ಪಷ್ಟೀಕರಣ ಪಡೆಯದೆಯೇ ಎರಡು ಮಾಧ್ಯಮಗಳು, “ಆಯುಧ ಪೂಜೆ’ ವಿಡಿಯೋ ಬಿತ್ತರಿಸಿ ದೊಡ್ಡ ವಿವಾದ ಸೃಷ್ಟಿಸಿವೆ. ಆ ಎರಡೂ ಮಾಧ್ಯಗಳ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ’ ಎಂದು ಮುತ್ತಪ್ಪ ರೈ ತಿಳಿಸಿದರು.ಆಯುಧ ಪ್ರದರ್ಶಿಸಿ ಹೆದರಿಸುವ ಅಗತ್ಯವಿಲ್ಲ: ಕಳೆದ 10 ವರ್ಷಗಳಿಂದ ಜಯ ಕರ್ನಾಟಕ ಸಂಘಟನೆ ಮೂಲಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ. ರಾಜ್ಯದ 30 ಜಿಲ್ಲೆಯಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಮಂದಿ ಸಂಘಟನೆ ಸದಸ್ಯರಾಗಿದ್ದಾರೆ. ರೈತಪರ ಹೋರಾಟ, ಆರೋಗ್ಯ ಶಿಬಿರಗಳು, ಕ್ರೀಡಾ ಚಟುವಟಿಕೆಗಳು, ಶಾಶ್ವತ ನೀರಾವರಿ ಹೋರಾಟ, ಏಕರೂಪ ಸಮಾನ ಶಿಕ್ಷಣಕ್ಕಾಗಿ ಹೋರಾಟ, ಬರಗಾಲ ಸಂದರ್ಭದಲ್ಲಿ ಕುಡಿಯುವ ನೀರು ಪೂರೈಕೆ, ಸ್ವತ್ಛತಾ ಆಂದೋಲನ ಸೇರಿ ಅನೇಕ ಸಮಾಜಮುಖೀ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿರುವ ನನಗೆ ಆಯುಧಗಳನ್ನು ಪ್ರದರ್ಶಿಸಿ ಯಾರನ್ನೋ ಹೆದರಿಸುವ ಅವಶ್ಯಕತೆ ಇಲ್ಲ ಎಂದು ರೈ ತಿಳಿಸಿದರು.
ಕಾನೂನನ್ನು ಗೌರವಿಸಿದ್ದೇನೆ: ಮಾಧ್ಯಮಗಳಲ್ಲಿ ಬಿತ್ತರವಾದ ಸುದ್ದಿಯನ್ನು ನೋಡಿದ ಬೆಂಗಳೂರು ಪೊಲೀಸರು, 24 ಗಂಟೆಯೊಳಗೆ ಆಯುಧಗಳ ಪರವಾನಗಿ ಹಾಜರುಪಡಿಸುವಂತೆ ನೋಟಿಸ್ ನೀಡಿದ್ದರು. ಕಾನೂನನ್ನು ಗೌರವಿಸುವ ನಾನು, ಸೂಚಿತ ಅವಧಿಯೊಳಗೆ ಏಜೆನ್ಸಿಗಳ ಮಾಲೀಕರೊಂದಿಗೆ ಮತ್ತು ಪೂಜೆಗೆ ಇರಿಸಿದ್ದ ಶಸ್ತ್ರಸ್ತ್ರಗಳೊಂದಿಗೆ ಪೊಲೀಸ್ ಠಾಣೆಗೆ ತೆರಳಿದ್ದೆ. ಅಂದು ಭಾನುವಾರವಾಗಿದ್ದ ಕಾರಣ ಏಜೆನ್ಸಿಯವರು ಆಯುಧಗಳ ದಾಖಲೆ ಹಾಜರುಪಡಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಆಯುಧಗಳನ್ನು ವಶಕ್ಕೆ ಪಡೆದು, ದಾಖಲೆಗಳನ್ನು ನೀಡಿ ಆಯುಧಗಳನ್ನು ಪಡೆಯುವಂತೆ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು. ಪುತ್ತೂರು ಮಹಾಲಿಂಗೇಶ್ವರ ದೇವಾಲಯಕ್ಕೆ 1.90 ಕೋಟಿ ರೂ. ವೆಚ್ಚದ ಬ್ರಹ್ಮ ರಥ, ಕೋಟೇಶ್ವರ ದೇವಾಲಯಕ್ಕೆ 80 ಲಕ್ಷ ರೂ ವೆಚ್ಚದ ಬ್ರಹ್ಮ ರಥ ಕೊಡುಗೆ ನೀಡಿದ್ದು, ಇದೀಗ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ 2.50 ಕೋಟಿ ರೂ. ವೆಚ್ಚದ ಬ್ರಹ್ಮ ರಥ ನೀಡಲು ಸಿದ್ಧತೆ ನಡೆಸಿದ್ದೇನೆ. ಲೋಕ ಕಲ್ಯಾಣಕ್ಕಾಗಿ ಈ ಕೆಲಸ ಮಾಡುತ್ತಿದ್ದೇನೆ.
-ಮುತ್ತಪ್ಪ ರೈ, ಜಯ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ